ಮಾನ್ವಿ: ತಾಲೂಕಿನಾದ್ಯಂತ ಅಕ್ರಮ ಮದ್ಯ ಸಾಗಾಟ ಮತ್ತು ಮಾರಾಟ ಮಿತಿ ಮೀರಿದೆ. ಪಟ್ಟಣದ ಮದ್ಯದಂಗಡಿಗಳವರು ಅಬಕಾರಿ ನಿಯಮ ಮೀರಿ ಹಳ್ಳಿಗಳಿಗೆ ಬೈಕ್, ಆಟೋ, ಟಂಟಂ ರಿಕ್ಷಾಗಳಲ್ಲಿ ಮದ್ಯ ಸರಬರಾಜು ಮಾಡುತ್ತಿದ್ದು, ಇದಕ್ಕೆ ಅಬಕಾರಿ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ತಾಲೂಕಿನಾದ್ಯಂತ ಒಟ್ಟು 41 ಮದ್ಯದಂಗಡಿಗಳಿವೆ. ಇದರಲ್ಲಿ ಸಿಎಲ್-2 ಪರವಾನಗಿ ಪಡೆದ 26, ಸಿಎಲ್-7 ಮತ್ತು ಸಿಎಲ್-9 ಲೈಸನ್ಸ್ ಹೊಂದಿದ 15 ಅಂಗಡಿಗಳಿವೆ. ಸಿಎಲ್-4 ಪರವಾನಗಿ ಪಡೆದ ಯಾವುದೇ ಅಂಗಡಿಗಳಿಲ್ಲ. ಪಟ್ಟಣದಲ್ಲೇ 12 ಮದ್ಯದಂಗಡಿಗಳಿವೆ. ಪಟ್ಟಣದಿಂದ ಕಾತರಕಿ, ರಬ್ಬಣಕಲ್, ಚೀಕಲಪರ್ವಿ, ಜಾನೇಕಲ್, ಅಮರಾವತಿ, ಬ್ಯಾಗವಾಟ್, ಪಾಮನಕಲ್ಲೂರು ಸೇರಿದಂತೆ ಅನೇಕ ಗ್ರಾಮಗಳಿಗೆ ಮದ್ಯ ಸರಬರಾಜು ಆಗುತ್ತಿದೆ. ಈ ಗ್ರಾಮಗಳ ಮನೆಗಳಲ್ಲಿ, ಗೂಡಂಗಡಿಗಳಲ್ಲಿ ರಾಜಾರೋಷವಾಗಿ ಮದ್ಯ ಮಾರಲಾಗುತ್ತಿದೆ. ಇದು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಗೊತ್ತಿದ್ದರೂ ಜಾಣ ಕುರುಡು ನೀತಿ ಅನುಸರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ನಿಯಮ ಉಲ್ಲಂಘನೆ: ತಾಲೂಕಿನ ಯಾವುದೇ ಮದ್ಯದಂಗಡಿಯಿಂದ ನಿಯಮ ಪಾಲನೆ ಆಗುತ್ತಿಲ್ಲ. ಸಿಎಲ್-2 ಪರವಾನಗಿ ಪಡೆದ ಅಂಗಡಿಗಳನ್ನು ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ತೆರೆಯಬೇಕು. ಸಿಎಲ್7 ಮತ್ತು ಸಿಎಲ್-9 ಪರವಾನಗಿ ಪಡೆದ ಮದ್ಯದಂಗಡಿಗಳನ್ನು ಬೆಳಗ್ಗೆ 11ರಿಂದ ರಾತ್ರಿ 11ರವರೆಗೆ ತೆರೆಯಬೇಕು. ಆದರೆ ಪಟ್ಟಣದಲ್ಲಿರುವ ಬಹುತೇಕ ಮದ್ಯದಂಗಡಿಗಳು ಬೆಳಗ್ಗೆ 6 ಗಂಟೆಯಿಂದಲೆ ತೆರೆದುಕೊಳ್ಳುತ್ತಿವೆ. ಇನ್ನು ಮಾದರಿ ಪರವಾನಗಿ ಪಡೆದ ಅಂಗಡಿಗಳಲ್ಲಿ ಸ್ಥಳದಲ್ಲೇ ಕುಡಿಯಲು ನೀಡಬಾರದು ಎಂಬ ನಿಯಮವಿದೆ. ಈ ನಿಯಮಗಳನ್ನು ಗಾಳಿಗೆ ತೂರಿ, ಅಂಗಡಿ ಮಾಲೀಕರು ಕೌಂಟರ್ ಮುಂದೆಯೇ ಕುಡಿಯಲು ಅವಕಾಶ ನೀಡುತ್ತಾರೆ. ಮತ್ತು ಹೆಚ್ಚಿನ ಬೆಲೆ ವಸೂಲಿ ಮಾಡಲಾಗುತ್ತಿದೆ.
ಅಕ್ರಮ ಮಾರಾಟ: ತಾಲೂಕಿನಾದ್ಯಂತ ಬಹುತೇಕ ಗ್ರಾಮಗಳಲ್ಲಿ ಯಾವುದೇ ಪರವಾನಗಿ ಇಲ್ಲದೆ ಮನೆಗಳಲ್ಲಿ, ಕಿರಾಣಿ ಅಂಗಡಿಗಳಲ್ಲಿ, ಗೂಡಂಗಡಿಗಳಲ್ಲಿ ಎಗ್ಗಿಲ್ಲದೆ ಮದ್ಯ ಮಾರಲಾಗುತ್ತಿದೆ. ಪರವಾನಗಿ ಪಡೆದ ಅಂಗಡಿ ಮಾಲೀಕರು ಮಧ್ಯವರ್ತಿಗಳ ಮೂಲಕ ಹಳ್ಳಿಗಳಿಗೆ ಮದ್ಯ ಸಾಗಿಸುತ್ತಿದ್ದಾರೆ. ಹಳ್ಳಿಗಳಲ್ಲಿ ಮಧ್ಯವರ್ತಿ ಮಾರಾಟಗಾರರನ್ನು ಪರವಾನಗಿ ಪಡೆದ ಅಂಗಡಿಗಳ ಮಾಲೀಕರೇ ನೇಮಕ ಮಾಡಿಕೊಂಡು ಮದ್ಯ ಪೂರೈಸುತ್ತಾರೆ. ಬೆಳಗಿನ ಜಾವ ಮತ್ತು ರಾತ್ರಿ ಸಮಯದಲ್ಲಿ ಆಟೋ, ಟಂಟಂ, ಬೈಕ್‌ಗಳ ಮೂಲಕ ಹಳ್ಳಿಗಳಿಗೆ ಸಾಗಿಸಲಾಗುತ್ತಿದೆ. ಇದೆಲ್ಲಾ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಗೊತ್ತಿರುವ ವಿಚಾರವೇ ಆಗಿದೆ.
ಜಾಣ ಕುರುಡುತನ: ಇನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಅಕ್ರಮ ತಡೆಯುವಲ್ಲಿ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ನಿಯಮ ಉಲ್ಲಂಘನೆ, ಅಕ್ರಮ ಸಾಗಾಟ, ಹಳ್ಳಿಗಳ ಮನೆ ಮತ್ತು ಗೂಡಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದರೂ ತಮಗೆ ಏನೂ ಗೊತ್ತಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಯಾರಾದರೂ ದೂರವಾಣಿ ಮೂಲಕ ಅಕ್ರಮ ಸಾಗಾಟದ ಬಗ್ಗೆ ತಿಳಿಸಿದರೆ ಸಮಯಕ್ಕೆ ಸರಿಯಾಗಿ ಬರುವುದೇ ಇಲ್ಲ. ಒಮ್ಮೊಮ್ಮೆ ದೂರವಾಣಿಗೂ ಸಿಗುವುದಿಲ್ಲ. ಈ ರೀತಿಯಾಗಿ ಅಕ್ರಮ ತಡೆಯುವಲ್ಲಿ ಅಬಕಾರಿ ಇಲಾಖೆ ಅಕಾರಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು. ನಿಯಮ ಮೀರಿ ಹಳ್ಳಿಗಳಿಗೆ ಮದ್ಯ ಪೂರೈಸುತ್ತಿರುವ ಅಂಗಡಿಕಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.