ಮಾನ್ವಿ: ತಾಲೂಕಿನಾದ್ಯಂತ 38 ಗ್ರಾಮ ಪಂಚಾಯಿತಿಗಳಿದ್ದು, ಪಿಡಿಒ ಸೇರಿ ಯಾವುದೇ ಅಧಿಕಾರಿಗಳು ಕೇಂದ್ರ ಸ್ಥಳದಲ್ಲಿ ಕೈಗೆ ಸಿಗುತ್ತಿಲ್ಲ. ಹೀಗಾಗಿ ಗ್ರಾಮಸ್ಥರು ಅಧಿಕಾರಿಗಳನ್ನು ಹುಡುಕಿಕೊಂಡು ತಾಲೂಕು ಕೇಂದ್ರ ಮಾನ್ವಿ ಪಟ್ಟಣದಲ್ಲಿ ಬೀದಿ ಬೀದಿ ಅಲೆದಾಡುವಂತಾಗಿದೆ.
ಗ್ರಾಮ ಪಂಚಾಯಿತಿಯಲ್ಲಿ ಒಬ್ಬ ಪಿಡಿಒ, ಕಾರ್ಯದರ್ಶಿ, ಗ್ರಾಪಂ ಅಭಿಯಂತರ (ಇಂಜಿನಿಯರ್), ಕರ ವಸೂಲಿಗಾರರು, ಕಂಪ್ಯೂಟರ್ ಆಪರೇಟರ್, ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ವಾಟರ್‌ಮ್ಯಾನ್‌ಗಳು ಇರುತ್ತಾರೆ. ಆದರೆ ಇವರಲ್ಲಿ ಯಾರೊಬ್ಬರೂ ಗ್ರಾಪಂ ಕಾರ್ಯಾಲಯಕ್ಕೆ ಬರುವುದಿಲ್ಲ. ಇನ್ನು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಇಲಾಖೆಯಿಂದ ನೀಡಿದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಒಮ್ಮೊಮ್ಮೆ ನಾಟ್ರಿಚೇಬಲ್, ಸ್ವಿಚ್ಚಾಫ್ ಇರುತ್ತವೆ. ಬೇರೆ ದಾರಿ ಇಲ್ಲದೆ ಗ್ರಾಮೀಣ ಜನರು ಅಧಿಕಾರಿಗಳನ್ನು ಹುಡುಕಿಕೊಂಡು ತಾಲೂಕು ಪಂಚಾಯಿತಿ ಕಚೇರಿಗೆ ಬಂದು ಕಾಯುತ್ತಾರೆ. ಇಲ್ಲವೇ ಅವರು ಇರಬಹುದಾದ ಸ್ಥಳಗಳ ಮಾಹಿತಿ ಪಡೆದು ಹುಡುಕುತ್ತ ಅಲೆಯುತ್ತಾರೆ.
ನಿಯಮ ಉಲ್ಲಂಘನೆ: ಗ್ರಾಮ ಪಂಚಾಯಿತಿಯಲ್ಲಿ ನಿಯಮಗಳಿಗೆ ಬೆಲೆಯೇ ಇಲ್ಲ. ಬೆಳಗ್ಗೆ 10ರಿಂದ ಮಧ್ಯಾಹ್ನ 4:30ರವರೆಗೆ ಅಧಿಕಾರಿಗಳು ಕಚೇರಿಯಲ್ಲಿರಬೇಕು. ಇಲ್ಲವೇ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಬೇಕು. ತಿಂಗಳಿಗೊಮ್ಮೆ ಅಧ್ಯಕ್ಷರ ನೇತೃತ್ವದಲ್ಲಿ ಸದಸ್ಯರ ಸಭೆ ಕರೆಯಬೇಕು. ಗ್ರಾಪಂಗೆ ಸಂಬಂಧಿಸಿದಂತೆ ಬ್ಯಾಂಕ್ ಖಾತೆಗಳ ವ್ಯವಹಾರದ ದಾಖಲೆಗಳನ್ನು ನಿರ್ವಹಿಸಬೇಕು. ಚೆಕ್ ರಿಜಿಸ್ಟರ್ ಮಾಡಬೇಕು. ಕುಡಿಯುವ ನೀರಿನ ಸಮಸ್ಯೆಗಳಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಆಶ್ರಯ ಮನೆ ಹಂಚಿಕೆಗೆ ಗ್ರಾಮಸಭೆ ನಡೆಸಬೇಕು. ಆದರೆ ಅಧಿಕಾರಿಗಳು ಇಂತಹ ಯಾವುದೇ ಸಭೆ ಮಾಡುತ್ತಿಲ್ಲ. ಅಧಿಕಾರಿಗಳು ಕಚೇರಿಯಲ್ಲಿ ಸಿಗುವುದೇ ಅಪರೂಪವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಪಿಡಿಒಗಳ ಕೊರತೆ: ತಾಲೂಕಿನ ಬಹುತೇಕ ಗ್ರಾಮ ಪಂಚಾಯತಿಗಳಲ್ಲಿ ಪಿಡಿಒ ಹುದ್ದೆ ಖಾಲಿ ಇವೆ. 38 ಗ್ರಾಮ ಪಂಚಾಯಿತಿಗಳ ಪೈಕಿ ಕೇವಲ 18ರಿಂದ 20ಜನ ಪಿಡಿಒಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಬ್ಬ ಪಿಡಿಒಗೆ ಎರೆಡೆರಡು ಗ್ರಾಮ ಪಂಚಾಯಿತಿಗಳ ಜವಾಬ್ದಾರಿ ನೀಡಲಾಗಿದೆ. ಕೆಲ ಗ್ರಾಪಂಗಳಿಗೆ ಅಲ್ಲಿನ ಕಾರ್ಯದರ್ಶಿಗಳೇ ಪಿಡಿಒಗಳಾಗಿದ್ದಾರೆ. ಇನ್ನು ಕೆಲವೆಡೆ ಅನಧಿಕೃತವಾಗಿ ಕರ ವಸೂಲಿಗಾರರನ್ನು ಹಾಗೂ ಕಂಪ್ಯೂಟರ್ ಆಪರೇಟರ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಇವರು ಆಡಿದ್ದೇ ಆಟ ಎನ್ನುವಂತಾಗಿದೆ. ಕಂಪ್ಯೂಟರ್ ಆಪರೇಟರ್‌ಗಳಿಂದ ಭಾರೀ ಪ್ರಮಾಣದಲ್ಲಿ ಅಕ್ರಮ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಹಣ ವಸೂಲಿ: ಕಚೇರಿಗೆ ಬಾರದ ಗ್ರಾಪಂ ಅಧಿಕಾರಿಗಳು ಮತ್ತು ಕಂಪ್ಯೂಟರ್ ಆಪರೇಟರ್‌ಗಳು ಪಟ್ಟಣದಲ್ಲಿ ಖಾಸಗಿ ಕಂಪ್ಯೂಟರ್ ಅಂಗಡಿಗಳಲ್ಲಿ ಹಾಗೂ ನೆಟ್ಕೆಫೆಗಳಲ್ಲಿ ವಾಸ್ತವ್ಯ ಹೂಡುತ್ತಾರೆ. ಜಾಬ್‌ಕಾರ್ಡ್ ಮಾಡಲು, ಆಧಾರ್ ಮತ್ತು ಬ್ಯಾಂಕ್ ಖಾತೆ ಜೋಡಣೆ, ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳ ಎನ್‌ಎಂಆರ್ ತೆಗೆಯುವುದು ಸೇರಿದಂತೆ ಗ್ರಾಪಂನ ಕೆಲಸಗಳೆಲ್ಲವೂ ಖಾಸಗಿ ನೆಟ್ಕೆಫೆಗಳಲ್ಲಿಯೇ ಮಾಡುತ್ತಾರೆ. ಇದಕ್ಕೆ ಕೂಲಿ ಕಾರ್ಮಿಕರು, ಗ್ರಾಮಸ್ಥರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ತಾಲೂಕು ಪಂಚಾಯಿತಿಗೆ ಅನೇಕ ದೂರು ಬರುತ್ತಿದ್ದರೂ ಗ್ರಾಪಂಗಳಲ್ಲಿ ಅಧಿಕಾರಿಗಳು ಚೆನ್ನಾಗಿಯೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ದಿನ ಪಿಡಿಒಗಳಿಂದ ಮಾಹಿತಿ ಪಡೆಯುತ್ತಿದ್ದೇನೆ ಎನ್ನುತ್ತಾರೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಶಿಕಾಂತ ಶಿವಪುರೆ.
ತಾಲೂಕಿನಲ್ಲಿ ಪಿಡಿಒಗಳ ಕೊರತೆ ಇರುವುದು ಒಂದೆಡೆಯಾದರೆ, ಇರುವಂತ ಅಧಿಕಾರಿಗಳಾದರೂ ಸರಿಯಾಗಿ ಕಾರ್ಯ ನಿರ್ವಹಿಸಬೇಕು. ಅಧಿಕಾರಿಗಳು ಕಚೇರಿಗೆ ತೆರಳುವುದಿಲ್ಲ. ಜನರಿಗೆ ಸಮಯಕ್ಕೆ ಸಿಗುವುದಿಲ್ಲ ಎನ್ನುವುದು ಸತ್ಯ. ಇನ್ನಾದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಬರುವ ದೂರುಗಳನ್ನು ಪರಿಗಣಿಸಿ ಮೇಲಾಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕಿದೆ. ಗ್ರಾಮೀಣ ಜನತೆ ಅಧಿಕಾರಿಗಳನ್ನು ಹುಡುಕೊಂಡು ತಾಲೂಕು ಕೇಂದ್ರಕ್ಕೆ ಅಲೆದಾಡುವುದನ್ನು ತಪ್ಪಿಸಬೇಕಿದೆ.
ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರಿಗಳು ಚೆನ್ನಾಗಿಯೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ದಿನ ಪಿಡಿಒಗಳೊಂದಿಗೆ ಸಂಪರ್ಕದಲಿದ್ದು, ಸಲಹೆ, ಸೂಚನೆಗಳನ್ನು ನೀಡುತ್ತಿದ್ದೇನೆ. ಪಿಡಿಒ ಮತ್ತು ಕಂಪ್ಯೂಟರ್ ಆಪರೇಟರ್‌ಗಳ ಬಗ್ಗೆ ಯಾವುದೇ ನಿರ್ದಿಷ್ಟ ದೂರುಗಳು ಬಂದಿಲ್ಲ. ಒಂದು ವೇಳೆ ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಇನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಸಮರ್ಪಕ ಕೆಲಸ ನೀಡಲಾಗುತ್ತದೆ.
••ಶಶಿಕಾಂತ ಶಿವಪುರೆ,
ತಾಪಂ ಇಒ, ಮಾನ್ವಿ
ರವಿ ಶರ್ಮಾ