ಮಾನ್ವಿ: ಡಾ| ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಜಯಂತ್ಯುತ್ಸವ ಪ್ರಯುಕ್ತ ಪಟ್ಟಣದ ಆಶಾಕಿರಣ ಸಂಸ್ಥೆಯಿಂದ ಅಂಬೇಡ್ಕರ್ ನಗರದ ಜಡೆಬಸಪ್ಪ ದೇಗುಲದ ಎದುರು ಶುಕ್ರವಾರ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹದಲ್ಲಿ 21 ಜೋಡಿಗಳು ನವಜೀವನಕ್ಕೆ ಪಾದಾರ್ಪಣೆ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ರಾಜಾ ವೆಂಕಟಪ್ಪ ನಾಯಕ, ಸಾಮೂಹಿಕ ವಿವಾಹಗಳು ಬಡ ಕುಟುಂಬಗಳಿಗೆ ಅನುಕೂಲವಾಗಿವೆ. ಇದರಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಸಾಧ್ಯ ಎಂದರು.
ತಾಲೂಕಿನಲ್ಲಿ ಹಲವಾರು ವರ್ಷಗಳಿಂದ ಬರ ಆವರಿಸಿದ್ದು. ಆರ್ಥಿಕ ಸಂಕಷ್ಟದಿಂದ ಬಡ ಕುಟುಂಬಗಳ ಪಾಲಕರು ಮಕ್ಕಳ ಮದುವೆ ನಡೆಸಲು ತೊಂದರೆ ಪಡುವಂತಾಗಿದೆ. ಇಂತಹ ಸಾಮೂಹಿಕ ವಿವಾಹ ಕಾರ್ಯಕ್ರಮಗಳಿಂದ ಬಡ ವರ್ಗದ ಜನರಿಗೆ ಅನುಕೂಲವಾಗಿದೆ. ಆಶಾಕಿರಣ ಶಿಕ್ಷಣ ಸಂಸ್ಥೆ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ ಎಂದರು.
ಶಾಸಕ ರಾಜಾವೆಂಕಟಪ್ಪ ನಾಯಕ ನವ ಜೋಡಿಗಳಿಗೆ ತಾಳಿ ವಿತರಿಸುವ ಮೂಲಕ ನೂತನ ವಧುವರರಿಗೆ ಶುಭ ಕೋರಿದರು. ಇದಕ್ಕೂ ಮುನ್ನ ಪಟ್ಟಣದ ಸೇಂಟ್ ಮೇರಿಸ್ ಚರ್ಚ್‌ನಿಂದ ಜಡೆ ಬಸಪ್ಪ ಗುಡಿಯವರೆಗೆ ಅಂಬೇಡ್ಕರ್ ಹಾಗೂ ಬಾಬು ಜಗನಜೀವನರಾಂ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಶಿಕಾಂತ ಶಿವಪುರೆ, ಆಶಾಕಿರಣ ಸಂಸ್ಥೆ ಜಂಟಿ ಕಾರ್ಯದರ್ಶಿ ಜೆ.ಎಚ್.ದೇವರಾಜ, ಅಧ್ಯಕ್ಷ ಪಿ.ರವಿಕುಮಾರ ವಕೀಲರು, ಜೆಡಿಎಸ್ ಹಿರಿಯ ಮುಖಂಡ ಲೋಕರೆಡ್ಡಿ ಸಿರವಾರ, ಯುವ ಮುಖಂಡ ರಾಜಾರಾಮಚಂದ್ರ ನಾಯಕ, ಜಿಪಂ ಸದಸ್ಯ ಕಿರಿಲಿಂಗಪ್ಪ ಕವಿತಾಳ, ಜಿಪಂ ಮಾಜಿ ಸದಸ್ಯ ಸಿದ್ರಾಮಪ್ಪ ನೀರಮಾನ್ವಿ, ಎಪಿಎಂಸಿ ಸದಸ್ಯ ಹನುಮೇಶ ಮದ್ಲಾಪುರ, ತಾಪಂ ಸದಸ್ಯ ಶಾಂತಪ್ಪ ಕಪಗಲ್, ಹಿರಿಯ ವಕೀಲ ಗುಮ್ಮ ಬಸವರಾಜ, ಪತ್ರೆಪ್ಪ, ಮೂಕಪ್ಪ ಕಟ್ಟಿಮನಿ, ಸೈಯ್ಯದ್ ತನ್ವೀರ್ ಉಲ್ ಹಸನ್, ವನಿತಾ ಶಿವರಾಜ ನಾಯಕ ಇತರರಿದ್ದರು.