ಮಾನ್ವಿ: ನಮ್ಮ ಸುತ್ತಮುತ್ತಲ ಪರಿಸರ ಸಂರಕ್ಷಣೆಗೆ ಗಿಡಮರಗಳನ್ನು ಹೆಚ್ಚಾಗಿ ಬೆಳೆಸಬೇಕು ಎಂದು ಪಟ್ಟಣದ ಸಿವಿಲ್ ನ್ಯಾಯಾಧೀಶ ವಿಜಯಕುಮಾರ ಎಸ್. ಹಿರೇಮಠ ಹೇಳಿದರು.
ಪಟ್ಟಣದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಮಗ್ರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ತಾಲೂಕು ನ್ಯಾಯವಾದಿಗಳ ಸಂಘ ಮತ್ತು ಆರಣ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿಗೆ ನೀರೆರೆದು ಅವರು ಮಾತನಾಡಿದರು.
ಪರಿಸರ ಮಾಲಿನ್ಯದಿಂದ ಮನುಷ್ಯನ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮಗಳಾಗುತ್ತಿವೆ. ಹೆಚ್ಚು ಪ್ಲಾಸ್ಟಿಕ್‌ಗಳು ಪರಿಸರದಲ್ಲಿ ಸೇರಿ ಕೊಳ್ಳುವುದರಿಂದ ವಾಯುಮಾಲಿನ್ಯ, ಜಲ ಮಾಲಿನ್ಯ, ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಇದನ್ನು ನಿಯಂತ್ರಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.
ಕಾರ್ಬನ್ ಹೊರಸೂಸುವ ವಾಹನಗಳ ಬಳಕೆ ನಿಲ್ಲಿಸಬೇಕು. ಇದರಿಂದ ಪರಿಸರ ಮಾಲಿನ್ಯ ತಡೆಯಲು ಸಾಧ್ಯವಿದೆ. ಅದೇ ರೀತಿಯಾಗಿ ನಮ್ಮ ಸುತ್ತಮುತ್ತಲಿನ ಸ್ಥಳಗಳಲ್ಲಿ ಹೆಚ್ಚು ಗಿಡ ಮರ ಬೆಳೆಸಬೇಕು. ಈಗಿನ ದಿನಮಾನಗಳಲ್ಲಿ ವಾತಾವರಣ ತುಂಬ ಕಲುಷಿತಗೊಂಡಿದೆ. ಇದರಿಂದ ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಕೂಡಲೇ ಪ್ರತಿಯೊಬ್ಬರು ಜಾಗೃತರಾಗಿ ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.
ಹಿರಿಯ ವಕೀಲ ಗುಮ್ಮಾ ಬಸವರಾಜ ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಮುಂಬರುವ ದಿನಮಾನಗಳಲ್ಲಿ ಪರಿಸರದಿಂದ ಬಹುದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ. ಆದ್ದರಿಂದ ನಾವು ನಮ್ಮ ಮಕ್ಕಳಿಗೆ ಮತ್ತು ಸ್ನೇಹಿತರಿಗೆ ಗಿಡ ಮರ ಬೆಳಸಲು ಸಲಹೆ ನೀಡಬೇಕು ಎಂದು ಹೇಳಿದರು.
ವಲಯ ಅರಣ್ಯಾಧಿಕಾರಿ ಬೀರಪ್ಪ, ಸಮಗ್ರ ಶಿಶು ಅಭಿವೃದ್ಧಿ ಇಲಾಖೆ ಸಹಾಯಕ ಅಧಿಕಾರಿ ಮಹೇಶ, ತಾಲೂಕು ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ.ಕೆ. ಅಮರೇಶಪ್ಪ, ಅಯ್ಯಪ್ಪ ನಾಯಕ, ಎನ್. ರಾಜು ವಕೀಲ, ವೀರನಗೌಡ ಪೋತ್ನಾಳ, ನಿಜಾಮ ಪಾಷ, ಶ್ರೀದೇವಿ ಬಳೆಗಾರ, ತಾಹೇರ್ ಪಾಷ, ಸಿಬ್ಬಂದಿ ನಾಗರಾಜ, ರಾಧಾಬಾಯಿ, ಲಾಜವಂತಿ ಮಿಶ್ರಾ, ನಾಗರತ್ನ ಇದ್ದರು.