ಮಾನ್ವಿ: ರಬ್ಬಣಕಲ್ ಹತ್ತಿರ ನಿರ್ಮಿಸುತ್ತಿರುವ ಕುಡಿಯುವ ನೀರಿನ ಕೆರೆ ಕಾಮಗಾರಿಪೂರ್ಣಕ್ಕೆ ಆಗ್ರಹಿಸಿ ಜನಶಕ್ತಿ ಕೇಂದ್ರ ಸಂಘಟನೆ ಮುಖಂಡರು ಗುರುವಾರ ಮೈಮೇಲೆ ಸಗಣಿ ನೀರು ಹಾಕಿಕೊಂಡು ಪುರಸಭೆ ಎದುರು ಪ್ರತಿಭಟನೆ ನಡೆಸಿದರು.
ಮಾನ್ವಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಗಾಗಿ 88 ಕೋಟಿ ರೂ. ವೆಚ್ಚದಲ್ಲಿ ರಬ್ಬಣಕಲ್ ಹತ್ತಿರ ಕೆರೆ ನಿರ್ಮಿಸಲಾಗುತ್ತಿದೆ. ಎರಡು ವರ್ಷವಾದರೂ ಕಾಮಗಾರಿ ಮುಗಿದಿಲ್ಲ. ಕೆರೆಗಾಗಿ ಖರೀ ಸಿದ ಭೂಮಿಯನ್ನು ಇದುವರೆಗೂ ಪುರಸಭೆ ಹೆಸರಿಗೆ ನೋಂದಣಿಯಾಗಿಲ್ಲ. ಟ್ಯಾಂಕ್ ನಿರ್ಮಾಣ ಮಾಡಲು ಸ್ಥಳ ಗುರುತಿಸುವಲ್ಲಿಯೂ ವಿಳಂಬ ಮಾಡುತ್ತಿದ್ದು, ಮುಖ್ಯಾಧಿಕಾರಿ ವಿಜಯಲಕ್ಷ್ಮೀ ವಿರುದ್ಧ ಕ್ರಮ ಕೈಗೊಂಡು ಸೇವೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಸರ್ವೇ ನಂ.407, 408, 415, 615 ಭೂಮಿಗಳನ್ನು ಸರ್ಕಾರದ ವಕ್ಫ್ ಭೂಮಿ ಎಂದು ಪರಿಗಣಿಸಿ ಪಹಣಿ ಕಾಲಂ.11ರಲ್ಲಿ ಸೇರಿಸಬೇಕು. ಪರಿಶಿಷ್ಟ ಜಾತಿ ವಸತಿ ನಿಲಯಗಳಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡುತ್ತಿರುವ ತಾಲೂಕು ಸಮಾಜ ಕಲ್ಯಾಣಾ ಧಿಕಾರಿ ಜಯಮ್ಮ ಮತ್ತು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸುಬ್ರಮಣ್ಯಂರನ್ನು ಅಮಾನತು ಮಾಡಬೇಕು. ಡಾ| ಬಿ.ಆರ್.ಅಂಬೇಡ್ಕರ್ ನಿಗಮದ ಭೂಮಿಯನ್ನು ಅಕ್ರಮವಾಗಿ ಕೆಲವರು ಉಳುಮೆ ಮಾಡುತ್ತಿದ್ದು, ಈ ಬಗ್ಗೆ ತನಿಖೆ ನಡೆಸಬೇಕು. ಕೊಳಚೆ ನಿರ್ಮೂಲನೆ ಮಂಡಳಿಯಿಂದ ನಿರ್ಮಿಸುತ್ತಿರುವ ಮನೆಗಳ ಬಗ್ಗೆ ತನಿಖೆ ನಡೆಸಬೇಕು.
ಅನಧಿಕೃತ ಬಡ್ಡಿ ವ್ಯವಹಾರ ನಡೆಸುತ್ತಿರುವ ಮುತ್ತುರಾಜ್ ಶೆಟ್ಟಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಕಳೆದ 54 ದಿನಗಳಿಂದ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಹಾಯಕ ಆಯುಕ್ತರಾದ ಸಂತೋಷ ಅವರು ಸ್ಪಂದಿಸುತ್ತಿಲ್ಲ. ಹೀಗಾಗಿ ನ.30ರಂದು ಜನಶಕ್ತಿ ಕೇಂದ್ರ, ಜಾಂಬವ ಯುವ ಸೇನೆ ಹಾಗೂ ಶಾನವಾಜ್ ಹೈದರಾಬಾದ್ ಕರ್ನಾಟಕ ಸಂಘದಿಂದ ಮಾನ್ವಿ ಬಂದ್ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಂಘಟನೆ ಪ್ರಧಾನ ಸಂಚಾಲಕ ಪ್ರಭುರಾಜ ಕೊಡ್ಲಿ, ಸಂಚಾಲಕ ಹನುಮಂತ ಕೋಟೆ, ಎಸ್.ಎಂ.ಶಾನವಾಜ್, ನುಸ್ರತ್, ಸಾಬೀರ್ ಪಾಷಾ, ಈರಣ್ಣ ಗವಿಗಟ್, ದೇವರಾಜ, ಮೈನುದ್ದೀನ್ ಇದ್ದರು.