ಮಾನ್ವಿ: ಗ್ರಾಮೀಣ ಮಕ್ಕಳಿಗೆ ಮೂಲ ವಿಜ್ಞಾನ ಪರಿಚಯಿಸುವ ಮೂಲಕ ಅವರಲ್ಲಿ ವೈಜ್ಞಾನಿಕ ಮನೋಭಾವ ಬೆಳಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗುಡ್ಯಾಳ ಹೇಳಿದರು.
ತಾಲೂಕಿನ ಕೊರವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ವಿಜ್ಞಾನ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಕರು ಶಾಲೆಗಳಲ್ಲಿ ಸರಳವಾಗಿ ಮೂಲ ವಿಜ್ಞಾನವನ್ನು ಚಟುವಟಿಕೆ ಮೂಲಕ ಬೋಧಿಸಿ ಮಕ್ಕಳಲ್ಲಿ ವಿಜ್ಞಾನ ಆಸಕ್ತಿ ಬೆಳೆಸಬೇಕು. ಗ್ರಾಮೀಣ ವಿದ್ಯಾರ್ಥಿಗಳು ವಿಜ್ಞಾನ ವಿಷಯ ಆಯ್ಕೆ ಮಾಡಿಕೊಳ್ಳುವುದು ತುಂಬ ವಿರಳ. ಈ ಕಾರಣಕ್ಕಾಗಿಯೇ ಇಂದು ಶಾಲೆ ಹಂತದಲ್ಲಿಯೇ ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನ ಬಗ್ಗೆ ಆಸಕ್ತಿ ಮೂಡಿಸುವ ಮೂಲಕ ಅವರು ಮುಂದೆ ವಿಜ್ಞಾನ ವಿಷಯ ಅಧ್ಯಯನ ಮಾಡುವಂತೆ ಮಾಡಬೇಕಿದೆ ಎಂದರು.
ವಿಜ್ಞಾನ ವಿಷಯ ತುಂಬ ಕಠಿಣ ಎಂಬ ಅಭಿಪ್ರಾಯವನ್ನು ಮಕ್ಕಳಿಂದ ದೂರ ಮಾಡಬೇಕು. ವಿಜ್ಞಾನವು ಸರಳ ಮತ್ತು ಆಸಕ್ತಿದಾಯಕ ವಿಷಯವಾಗಿದೆ ಎಂಬ ಮನೋಭಾವನೆಯನ್ನು ಗ್ರಾಮೀಣ ಮಕ್ಕಳಲ್ಲಿ ಬೆಳೆಸಬೇಕು. ಅ ಮೂಲಕ ಮುಂದಿನ ದಿನಗಳಲ್ಲಿ ವಿಜ್ಞಾನಕ್ಕೆ ಸಂಬಂಧಿ ಸಿದ ವಿಷಯಗಳಾದ ಜೀವಶಾಸ್ತ್ರ, ಭೌತಶಾಸ್ತ್ರ, ರಸಾಯನ ಶಾಸ್ತ್ರ, ವೈದ್ಯಕೀಯ ವಿಷಯಗಳನ್ನು ಆಯ್ಕೆ ಮಾಡಿಕೊಂಡು ವಿಜ್ಞಾನ ಸಂಶೋಧನೆಯಲ್ಲಿ ಮಕ್ಕಳು ತೊಡಗಿಕೋಳ್ಳಬೇಕಾಗಿದೆ ಎಂದರು.
ವಿಜ್ಞಾನ ಹಬ್ಬದ ಅಂಗವಾಗಿ ಶಾಲೆಯಲ್ಲಿ ಬಾಟಲ್ ರಾಕೆಟ್, ತ್ರಿಡಿ ಡ್ರಾÂಗನ್, ತ್ರಿಡಿ ಕನ್ನಡಕ, ಸೋಡ್ಲ್ಸ್ಕೋಪ್ ಹಾಗೂ ನೀರಿನ ಸಂರಕ್ಷಣೆ ಪ್ರಯೋಗ, ಕೆಮಿಕಲ್‌ನಿಂದ ನೊರೆ ಹೇಗೆ ಬರುತ್ತೆ ಎಂಬ ಕುರಿತು ಹಲವು ವಿಜ್ಞಾನ ಚಟುವಟಿಕೆಗಳನ್ನು ಮಾಡಿಸಲಾಯಿತು. ಅಲ್ಲದೆ ವಿವಿಧ ವೇಷ ಧರಿಸಿದ ವಿದ್ಯಾರ್ಥಿಗಳ ಮೆರವಣಿಗೆ ಗಮನ ಸೆಳೆಯಿತು. ಕೊರವಿ ಗ್ರಾಮದಿಂದ ಶಾಲೆವರೆಗೆ ಡೊಳ್ಳು ಕುಣಿತದೊಂದಿಗೆ ಎತ್ತಿನ ಬಂಡಿಯಲ್ಲಿ ವಿದ್ಯಾರ್ಥಿಗಳ ಮೆರವಣಿಗೆ ಮಾಡಲಾಯಿತು.
ನಂತರ ಕಾರ್ಯಕ್ರಮದಲ್ಲಿ ಕ್ರೀಡಾ ವಿಭಾಗದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಗ್ರಾಮದ 12 ವಿದ್ಯಾರ್ಥಿಗಳನ್ನು ಹಾಗೂ ಸರ್ಕಾರಿ ಉದ್ಯೋಗ ಪಡೆದವರನ್ನು, ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಪದವಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಗ್ರಾಮದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ತಾಪಂ ಸದಸ್ಯೆ ಅಯ್ಯಮ್ಮ, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ವೆಂಕಟೇಶ ನಾಯಕ, ಕ್ಷೇತ್ರ ಸಮನ್ವಯ ಅಧಿಕಾರಿ, ಪ್ರಭಾಕರ, ಶಿಕ್ಷಣ ಸಂಯೋಜಕ ಯೂನೂಸ್, ಬಿಆರ್‌ಪಿ ಮಹೇಶ, ಸಂಪನ್ಮೂಲ ವ್ಯಕ್ತಿ ಶ್ರೀನಿವಾಸ ಜಲ್ದಾರ್, ಶಿಕ್ಷಕರಾದ ಶ್ರೀಶೈಲಗೌಡ, ಹನುಮಂತಪ್ಪ ಭಂಡಾರಿ, ಸುರೇಶ ಕುರ್ಡಿ, ಹಂಪಣ್ಣ ಚಂಡೂರು, ಸುರೇಶ, ಬಿಆರ್‌ಸಿ ಶರಣಪ್ಪ, ನಾಗರಾಜ, ಹಂಪಮ್ಮ, ಬಸಲಿಂಗಮ್ಮ, ಮೋಹನಕುಮಾರ, ಅಶ್ವಿನಿ, ಎಂ.ಡಿ. ಜಾವೇದ ಸೇರಿ ಗ್ರಾಮಸ್ಥರಿದ್ದರು.