ಮಾನ್ವಿ: ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಕೃಷಿ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಪಾಲಕರು ಮಕ್ಕಳನ್ನು ನೌಕರಿ ಆಸೆಯಿಂದ ಶಾಲೆಗೆ ಕಳುಹಿಸದೆ ಕೃಷಿ ಕಾರ್ಯಗಳ ಕುರಿತು ಅರಿವು ಮೂಡಿಸಲು ಮುಂದಾಗಬೇಕಿದೆ ಎಂದು ರಾಜ್ಯ ಕೃಷಿ ಬೆಲೆ ಆಯೋಗ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಹೇಳಿದರು.
ತಾಲೂಕಿನ ಬಲ್ಲಟಗಿ ಗ್ರಾಮದ ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ 19ನೇ ಶಾಲಾ ವಾರ್ಷಿಕೋತ್ಸವ, ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಯುವಕರಲ್ಲಿ ಕೃಷಿ ಬಗ್ಗೆ ನಿರಾಸಕ್ತಿ ಭಾವನೆ ಇದೆ.ಶಾಲೆಗೆ ರಜೆ ಇದ್ದಾಗ ಮಕ್ಕಳನ್ನು ಹೊಲಗದ್ದೆಗಳಿಗೆ ಕರೆದುಕೊಂಡು ಹೋಗಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಬೇಕಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಬಸವೇಶ್ವರ ಅಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸಿ ಉತ್ತಮ ಶಿಕ್ಷಣ ನೀಡುವ ಜೊತೆಗೆ ಮಕ್ಕಳಲ್ಲಿ ಪರಿಸರ, ವಿಜ್ಞಾನ, ಕೃಷಿ ಜ್ಞಾನ ನೀಡುತ್ತಿರುವುದು ಶ್ಲಾಘನೀಯ ಎಂದರು.
ಪ್ರೊ| ಬಿ.ಎ. ಪಾಟೀಲ ಮಾತನಾಡಿ ವಿಜ್ಞಾನ, ತಂತ್ರಜ್ಞಾನ ಇತರೆ ವಸ್ತು ಪ್ರದರ್ಶನಗಳಿಂದ ಮಕ್ಕಳ ಪ್ರತಿಭೆ ಜೊತೆಗೆ ಜ್ಞಾನ ಹೆಚ್ಚುತ್ತದೆ. ವಿಜ್ಞಾನ ತಿಳಿದುಕೊಂಡಷ್ಟು ಮುಂದಿನ ಭವಿಷ್ಯ ಭದ್ರವಾಗುತ್ತದೆ. ದೇಶದ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ, ಸರ್ ಎಂ. ವಿಶ್ವೇಶ್ವರಯ್ಯ ಇನ್ನಿತರ ಮಹಾನ್ ನಾಯಕರ ಸಾಧನೆಗಳೇ ನಮಗೆ ಮಾರ್ಗದರ್ಶನ ಎಂದು ಹೇಳಿದರು.
ಮಾಜಿ ಶಾಸಕರಾದ ಹಂಪಯ್ಯ ನಾಯಕ, ಗಂಗಾಧರ ನಾಯಕ, ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಚಂದ್ರಶೇಖರ ಬಲ್ಲಟಗಿ ಮಾತನಾಡಿದರು. ಬಸವರಾಜಯ್ಯಸ್ವಾಮಿ ಬಲ್ಲಟಗಿ, ಡಾ| ಶರಣಪ್ಪ ಬಲ್ಲಟಗಿ, ಶಂಕರಗೌಡ ಹರವಿ, ಡಾ| ಅಮರೇಶ ಹೊಸಮನಿ ಬಲ್ಲಟಗಿ, ಟಿ. ಮಲ್ಲಿಕಾರ್ಜುನಗೌಡ ಬಲ್ಲಟಗಿ, ಕಾಮರಡ್ಡಿ ಬಸವರಾಜ, ಲಕ್ಷ್ಮೀ ಕಾಂತ ರಡ್ಡಿ, ಪಿ.ಪ್ರಕಾಶ, ಆರ್.ಶರಣಪ್ಪ, ಮುಖ್ಯೋಪಾಧ್ಯಾಯ ಸುಮಿತ್ರ ಹಾಗೂ ಪಾಲಕರು,
ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
ವಸ್ತು ಪ್ರದರ್ಶನ: ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಜಿಎಸ್‌ಎಲ್ ರಾಕೆಟ್, ಥರ್ಮಾಕೋಲ್‌ನಿಂದ ಮಾಡಿದ ಬಸವೇಶ್ವರರ ಐಕ್ಯ ಮಂಟಪ, ಹಂಪಿಯ ಕಲ್ಲಿನ ರಥ, ತಂತ್ರಜ್ಞಾನಕ್ಕೆ ಸಂಬಂಧಿಸಿದ ವಸ್ತು ಪ್ರದರ್ಶನ ಹಾಗೂ ಸ್ವತಃ ವಿದ್ಯಾರ್ಥಿಗಳು ತಯಾರಿಸಿದ ಪಿಂಗರ್ ಚಿಪ್ಸ್, ಪರೋಟಾ, ಫ್ರೂಟ್ ಸಲಾಡ್, ಪಾಪಡ್ ಇತರೆ ತಿನಿಸುಗಳನ್ನು 20 ರೂ.ಪ್ಲೇಟ್‌ನಂತೆ ಮಾರಾಟ ಮಾಡಿದರು. ಈ ಎಲ್ಲ ಖಾದ್ಯಗಳನ್ನು ಸವಿದ ಜನಪ್ರತಿನಿಧಿ ಗಳು, ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದರು.