ವಿಜಯಪುರ: ದೆಹಲಿಯಲ್ಲಿ ಭಾರತೀಯ ಸಂವಿಧಾನ ಸುಟ್ಟು ಹಾಕಿದ ಕೃತ್ಯ ಖಂಡಿಸಿ ನಗರದಲ್ಲಿ ಸಂವಿಧಾನ ಉಳಿವಿಗಾಗಿ ಕರ್ನಾಟಕ ಸಂಘಟನೆ ಕಾರ್ಯಕರ್ತರು ಮನುಸ್ಮೃತಿ ಕೃತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಸೋಮವಾರ ನಗರದ ಡಾ| ಬಿ.ಆರ್. ಅಂಬೇಡ್ಕರ್ ವೃತ್ತದ ಎದುರು ಪ್ರತಿಭಟನೆಗೆ ಮುಂದಾದ ಸಂವಿಧಾನ ಉಳಿವಿಗಾಗಿ ಸಂಘಟನೆ ಕಾರ್ಯಕರ್ತರು ಭಾರತದ ಸಂವಿಧಾನವನ್ನೇ ಸಾರ್ವಜನಿಕವಾಗಿ ಸುಟ್ಟು ಹಾಕಿದವರನ್ನು ಕೂಡಲೇ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿ ಮನುಸ್ಮೃತಿಯನ್ನು ಹರಿದು ಹಾಕಿ, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಮುಖಂಡ ಜಿತೇಂದ್ರ ಕಾಂಬಳೆ, ಭಾರತೀಯರ ಪಾಲಿಗೆ ಸರ್ವಸ್ವವಾಗಿರುವ ಸಂವಿಧಾನವೇ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರ ಗ್ರಂಥ. ಸಂವಿಧಾನವನ್ನೇ ಸುಟ್ಟು ಹಾಕುವ ಮಟ್ಟಕ್ಕೆ ದೇಶದ್ರೋಹದ ಕೃತ್ಯ ಎಸಗಿ ಅಪಮಾನ ಮಾಡಿದವರನ್ನು ಕೂಡಲೇ ಬಂಧಿಸಿ ಶಿಕ್ಷೆ ನೀಡಬೇಕು. ಭಾರತೀಯರ ಸ್ವಾಭಿಮಾನ, ಘನತೆ ಬದುಕನ್ನು ಎತ್ತಿ ಹಿಡಿಯುವ ಸಂವಿಧಾನವನ್ನೇ ಸುಡುತ್ತಿರುವ ಪ್ರಕರಣ ನಡೆದಿರುವದು ನಿಜಕ್ಕೂ ದುರದೃಷ್ಟಕರ. ಈ ರೀತಿ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.
ಪ್ರಭುಗೌಡ ಪಾಟೀಲ ಮಾತನಾಡಿ, ದೇಶದ ಸಂವಿಧಾನನ್ನೇ ಸುಡುವ ಮಟ್ಟಕ್ಕೆ ಇಳಿದಿರುವ ಕೃತ್ಯ ಅಕ್ಷಮ್ಯ ಅಪರಾಧ.
ಭಾರತದಲ್ಲಿದ್ದುಕೊಂಡು ಭಾರತದ ಸಂವಿಧಾನಕ್ಕೆ, ಸಂವಿಧಾನದ ಮೂಲಕ ದತ್ತವಾಗಿರುವ ಕಾನೂನುಗಳನ್ನೇ ಉಲ್ಲಂಘಿಸಿ ಸಂವಿಧಾನಕ್ಕೆ ಅಪಮಾನ ಮಾಡುವ ಕೃತ್ಯ ಗಂಭೀರ ಸ್ವರೂಪದ್ದಾಗಿದೆ. ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು. ವಿವಿಧ ದಲಿತ ಸಂಘಟನೆಗಳ ಪ್ರಮುಖರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.