2017ರಲ್ಲಿ ವಿಶ್ವಸುಂದರಿ ಪಟ್ಟ ಮುಡಿಗೇರಿಸಿ ಕೊಂಡಿದ್ದ ಭಾರತೀಯ ಬೆಡಗಿ ಮಾನುಷಿ ಚಿಲ್ಲರ್ ಈಗ ಅಧಿಕೃತವಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ವಿಶ್ವ ಸುಂದರಿ ಕಿರೀಟ ಮುಡಿಗೇರುತ್ತಿದ್ದಂತೆ, ಮಾನುಷಿಗೆ ಬಾಲಿವುಡ್‌ನಿಂದ ಸಾಲು ಸಾಲು ಚಿತ್ರಗಳ ಅವಕಾಶಗಳು ಹರಿದುಬರುತ್ತಿದ್ದರೂ, ದಿಢೀರನೆ ಚಿತ್ರರಂಗದ ಬಗ್ಗೆ ನಿರ್ಧಾರ ಮಾಡದೆ ಎರಡು ವರ್ಷಗಳ ಕಾಲ ಸುಮ್ಮನಿದ್ದ ಮಾನುಷಿ ಈಗ ಸದ್ದಿಲ್ಲದೆ ಬಿಗ್ ಎಂಟ್ರಿ ಕೊಡೋದಕ್ಕೆ ತಯಾರಾಗುತ್ತಿದ್ದಾರೆ.
ಹೌದು, ಮಾನುಷಿ ಬಾಲಿವುಡ್‌ನ ಖ್ಯಾತ ನಟ ಅಕ್ಷಯ್ ಕುಮಾರ್ ಅವರಿಗೆ ನಾಯಕಿಯಾಗಿ ಬಾಲಿವುಡ್‌ಗೆ ಕಾಲಿಡುತ್ತಿದ್ದಾರೆ. ಅಕ್ಷಯ್ ಕುಮಾರ್ ಅಭಿನಯದ ಮುಂಬರುವ ಐತಿಹಾಸಿಕ ಚಿತ್ರ ಪೃಥ್ವೀರಾಜ್ ಮೂಲಕ ಬಣ್ಣದ ಲೋಕದ ಜರ್ನಿಯನ್ನು ಪ್ರಾರಂಭಿಸುತ್ತಿದ್ದಾರೆ. ಚಿತ್ರದಲ್ಲಿ ರಜಪೂತ ರಾಜ ಪೃಥ್ವಿರಾಜ್ ಚೌಹಾಣ್ ಪತ್ನಿ ಸಂಯುಕ್ತಾ ಪಾತ್ರದಲ್ಲಿ ಮಾನುಷಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಣಿ ಸಂಯುಕ್ತಾ ಅವರನ್ನು ಸಂಯೋಗಿತ ಎನ್ನುವ ಹೆಸರಿನಿಂದನೂ ಕರೆಯುತ್ತಾರೆ. ದೆಹಲಿ ರಾಜ್ಯವನ್ನು ಪರಿಪಾಲಿಸಿದ ಕೊನೆಯ ಹಿಂದೂ ರಾಜ ಎಂದು ಖ್ಯಾತಿ ಗಳಿಸಿರುವ ಪೃಥ್ವೀರಾಜ್ ಚೌಹಾಣ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ. ಮಾನುಷಿ ಮೊದಲ ಸಿನಿಮಾ ಬಾಲಿವುಡ್‌ನ ದೊಡ್ಡ ಬ್ಯಾನರ್ ಆದ “ಯಶ್ ರಾಜ್ ಫಿಲ್ಮ’ನಲ್ಲಿ ಮೂಡಿ ಬರುತ್ತಿದೆ. ಪೃಥ್ವಿರಾಜ್ ಚೌಹಾಣ್ ಸಿನಿಮಾಗೆ ಖ್ಯಾತ ಟಿವಿ ಸೀರಿಯಲ್ ನಿರ್ದೇಶಕ ಡಾ. ಚಂದ್ರಪ್ರಕಾಶ್ ದ್ವಿವೇದಿ ಆಕ್ಷನ್- ಕಟ್ ಹೇಳುತ್ತಿದ್ದಾರೆ.
ಚೌಹಮನಾ ವಂಶಕ್ಕೆ ಸೇರಿದ ಪೃಥ್ವಿರಾಜ್, 20ರ ವಯಸ್ಸಿನಲ್ಲಿಯೇ ರಾಜನಾಗಿ ಪಟ್ಟಾಭಿಷಕ್ತನಾಗಿ ರಾಜ್ಯಭಾರ ಮಾಡುವ ಹೊಣೆ ಯನ್ನು ಪಡೆದುಕೊಂಡ ರಾಜ. ದೆಹಲಿ ರಾಜ್ಯವನ್ನು ಪರಿಪಾಲಿಸಿದ ಕೊನೆಯ ಹಿಂದೂ ರಾಜ ಎನ್ನುವ ಖ್ಯಾತಿ ಗಳಿಸಿದ್ದ ಪೃಥ್ವೀರಾಜ್ ಚೌಹಾಣ್ ಕನೌಜ್ ರಾಜ್ಯಕ್ಕೆ ಸೇರಿದ ಜೈ ಚಂದ್ರ ರಾಥೋಡ್ ಮಗಳು ಸಂಯುಕ್ತಾಳನ್ನು ವರಿಸಿ ಮದುವೆ ಆಗುತ್ತಾರೆ. ಇವರಿಬ್ಬರ ಪ್ರೇಮಕಥೆ ಕುತೂಹಲಕಾರಿಯಾಗಿದೆ ಎಂದು ಹೇಳಲಾಗುತ್ತೆ. ಅದೇ ಕಥೆ ಈಗ ಸಿನಿಮಾ ಮೂಲಕ ತೆರೆ ಮೇಲೆ ಬರುತ್ತಿರುವುದು ಚಿತ್ರಪ್ರಿಯರಿಗೆ ಮತ್ತಷ್ಟು ಕುತೂಹಲ ಮೂಡಿಸಿದೆ.
ಇನ್ನು ಈ ಚಿತ್ರದಲ್ಲಿ ರಾಣಿ ಸಂಯುಕ್ತಾ ಪಾತ್ರಕ್ಕಾಗಿ ಸಾಕಷ್ಟು ಹುಡುಕಾಟ ನಡೆಸಿದ ಚಿತ್ರತಂಡ ಮಾನುಷಿ ಅವರನ್ನು ಆಯ್ಕೆ ಮಾಡಿಕೊಂಡಿದೆ. ರಾಣಿ ಸಂಯುಕ್ತಾ ಸೌಂದರ್ಯವತಿ ಮತ್ತು ಶಕ್ತಿಯುತ ಮಹಿಳೆ ಆಗಿದ್ದರು ಮತ್ತು ಆತ್ಮವಿಶ್ವಾಸ ಹೊಂದಿದ ರಾಣಿ ಆಗಿದ್ದರಂತೆ. ಪಾತ್ರಕ್ಕಾಗಿ ಮಾನುಷಿ ತಯಾರಿ ಆಡಿಷನ್ ಮಾಡಿದ ಚಿತ್ರತಂಡಕ್ಕೆ ಮಾನುಷಿ ಪಕ್ಕ ಸೂಟ್ ಆಗುತ್ತಾರೆ ಎಂದು ಆಯ್ಕೆ ಮಾಡಿದ್ದಾರಂತೆ. ಅಲ್ಲದೆ ಈಗಾಗಲೆ ಮಾನುಷಿ ಪಾತ್ರಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿ ದ್ದಾರಂತೆ. ಅಲ್ಲದೆ ರಾಣಿ ಸಂಯುಕ್ತಾ ಪಾತ್ರಮಾಡಲು ಮಾನುಷಿ ಸಖತ್ ಎಕ್ಸಾಯಿಟ್ ಆಗಿದ್ದಾರಂತೆ.