ಬೆಂಗಳೂರು: ನಗರ ಕಸದ ಸಮಸ್ಯೆಗೆ ನಿವಾರಣೆಯಾಗಬೇಕಾದರೆ ಪ್ರತಿ ವಾರ್ಡ್‌ನಲ್ಲಿ ವೈಜ್ಞಾನಿಕ ರೀತಿಯ ನಿರ್ವಹಣೆ ಯ ಗೊಬ್ಬರ ತಯಾರಿಕೆ ಘಟಕಗಳು ಆರಂಭವಾಗಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಶನಿವಾರ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ, ಯಡಿಯೂರು ವಾರ್ಡ್‌ನಲ್ಲಿ ಸರ್ದಾರ್ ವಲ್ಲಭ ಭಾಯಿ ಅಕಾಡೆಮಿ ಹಾಗೂ ಹಸಿ ಕಸದ ಗೊಬ್ಬರ ತಯಾರಿಕೆ ಘಟಕ ಉದ್ಘಾಟಿಸಿ ಮಾತನಾಡಿದರು.
ಈ ಯೋಜನೆ ರೈತ ಸ್ನೇಹಿ ,ಜನಸ್ನೇಹಿ ಯೋಜನೆಯಾಗಿದ್ದು ಪ್ರತಿ ವಾರ್ಡ್ ಗಳಲ್ಲಿ ಗೊಬ್ಬರ ತಯಾರಿಕೆ ಘಟಕಗಳು ಆರಂಭವಾದರೆ ಬೆಂಗಳೂರಿನಲ್ಲಿ ಕಸದ ಸಮಸ್ಯೆ ನಿವಾರಣೆ ಜತೆಗೆ ವಿಲೇವಾರಿ ಸಮಸ್ಯೆ ಕೂಡ ಬಗೆಹರಿಯಲಿದೆ ಎಂದು ತಿಳಿಸಿದರು. ವಾರ್ಡ್ ಮಟ್ಟದಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯ ಅದೇ ವಾರ್ಡ್‌ನಲ್ಲೇ ಹಸಿ ಗೊಬ್ಬರವಾಗಿ ಪರಿವರ್ತನೆಯಾದರೆ ತ್ಯಾಜ್ಯ ವಿಲೇವಾರಿ ಘಟಕಗಳ ಸಂಖ್ಯೆ ಕಡಿಮೆಯಾಗಲಿದೆ.
ಇದರಿಂದ ತ್ಯಾಜ್ಯ ಸಮಸ್ಯೆಯೂ ತಪ್ಪಲಿದೆ ಎಂದು ಹೇಳಿದರು. ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರವು ರಾಜ್ಯದಲ್ಲೇ ಅತಿ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ವಿಧಾನ ಸಭಾ ಕ್ಷೇತ್ರವಾಗಿದೆ. ಕ್ಷೇತ್ರದಲ್ಲಿ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ಹಲವಾರು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು. ಪಾಲಿಕೆಯ ಮಾಜಿ ಸದಸ್ಯ ಎನ್.ಆರ್.ರಮೇಶ್ ಮಾತನಾಡಿ, ಯಡಿಯೂರು ವಾರ್ಡ್ ನಲ್ಲಿ ಹಲವು ಅಭಿವೃದ್ಧಿ ಕೆಲಸಗಳು ನಡೆದಿವೆ.
ಈಗ ಹಣ ಉಳಿತಾಯ ಜೊತೆಯಲ್ಲಿಯೇ ವಿದ್ಯುತ್ ಉತ್ಪಾದನೆ ಹಾಗೂ ಪರಿಸರ ರಕ್ಷಣೆಗೆ ಯೋಜನೆ ರೂಪಿಸಲಾಗಿದೆ. ಹಸಿ ಕಸದಿಂದ ಗೊಬ್ಬರ ತಯಾರಿಕೆ ಘಟಕದಿಂದ ಬಿಬಿಎಂಪಿ ಕಟ್ಟಡಗಳಿಗೆ ವಿದ್ಯುತ್ ಸರಬರಾಜು ಹಾಗೂ ನೂರಾರು ಪಾರ್ಕ್‌ಗಳಿಗೆ ಗೊಬ್ಬರ ಬಳಕೆಯಾಗಲಿದೆ. ಇದ್ದರಿಂದ ಜನರ ತೆರಿಗೆ ಹಣ ಉಳಿತಾಯವಾಗಲಿದೆ ಎಂದು ತಿಳಿಸಿದರು. ಸಂಸದ ತೇಜಸ್ವಿ ಸೂರ್ಯ ,ಮಹಾಪೌರರಾದ ಗೌತಮ್ ಕುಮಾರ್ ,ಆಯುಕ್ತರಾದ ಜೆ.ಹೆಚ್.ಆನಿಲ್ ಕುಮಾರ್ , ಉಪಮಹಾಪೌರರಾದ ರಾಮ್ ಮೋಹನ್ ರಾಜು ಇತರರಿದ್ದರು.