ಸೂರ್ಯನ ಮಗನಾದ ಮನುವು ಮಹರ್ಷಿ. ಮಹಾ ತೇಜಸ್ವಿ. ಅವನು ಒಂದು ದಿನ ಸಂಜೆ ಚಿರಿಣಿ ನದಿಯ ಬಳಿ ತಪಸ್ಸು ಮಾಡುತ್ತಿದ್ದಾಗ ಪುಟ್ಟ ಮೀನೊಂದು, “ಮಹರ್ಷಿಗಳೇ, ನನಗೆ ನದಿಯಲ್ಲಿರುವ ದೊಡ್ಡ ಪ್ರಾಣಿಗಳನ್ನು ಕಂಡರೆ ಭಯ, ನನ್ನನ್ನು ಕಾಪಾಡಿ’ ಎಂದು ಬೇಡಿಕೊಂಡಿತು. ಮನುವು ಅದನ್ನು ಒಂದು ಮಣ್ಣಿನ ಪಾತ್ರೆಯ ನೀರಿನಲ್ಲಿ ಬಿಟ್ಟನು. ಕೆಲವು ವರ್ಷಗಳಲ್ಲಿ ಅದು ದೊಡ್ಡದಾಯಿತು. ಮಣ್ಣಿನ ಪಾತ್ರೆಯು ಅದಕ್ಕೆ ಸಾಲದಾಯಿತು. ಅದರ ಪ್ರಾರ್ಥನೆಯಂತೆ ಮನುವು ಅದನ್ನು ಒಂದು ದೊಡ್ಡ ಬಾವಿಯಲ್ಲಿ ಬಿಟ್ಟು ಕೆಲವು ವರ್ಷಗಳ ನಂತರ ಬಾವಿಯೂ ಸಾಲದಾಗಿ ಅದನ್ನು ಗಂಗಾ ನದಿಯಲ್ಲಿ ಬಿಟ್ಟ. ಕೆಲವು ವರ್ಷಗಳಲ್ಲಿ ಅದು ಗಂಗಾ ನದಿಯ ವಿಸ್ತಾರವನ್ನೂ ಮೀರಿ ಬೆಳೆಯಿತು. ಮನುವು ಅದನ್ನು ಸಮುದ್ರದಲ್ಲಿ ಬಿಟ್ಟನು. ಮೀನು ಅವನಿಗೆ, “ನೀವು ನನಗೆ ಬಹಳ ಉಪಕಾರ ಮಾಡಿದ್ದೀರಿ. ನನ್ನ ಮಾತನ್ನು ತಪ್ಪದೆ ಪಾಲಿಸಿ. ಇನ್ನು ಸ್ವಲ್ಪ ಕಾಲದಲ್ಲಿ ಮಹಾ ಜಲಪ್ರಳಯ ಆಗಲಿದೆ. ಚರಾಚರ ವಸ್ತುಗಳನ್ನೆಲ್ಲ ಅದು ಕೊಚ್ಚಿಕೊಂಡು ಹೋಗುತ್ತದೆ. ನೀವು ಒಂದು ಬೃಹತ್ತಾದ ಹಡಗನ್ನು ನಿರ್ಮಿಸಿ, ಅದಕ್ಕೆ ಒಂದು ಬಲವಾದ ಹಗ್ಗವನ್ನು ಕಟ್ಟಿ. ಸಪ್ತರ್ಷಿಗಳನ್ನು ನಿಮ್ಮ ಜತೆಗೆ ಕರೆದುಕೊಳ್ಳಿ. ಜಲಪ್ರಳಯ ಬಂದಾಗ ನಾನು ಬರುತ್ತೇನೆ. ನನಗಾಗಿ ಕಾದಿರಿ ನನ್ನ ತಲೆಯ ಮೇಲಿನ ಕೊಂಬಿನಿಂದ ನನ್ನನ್ನು ಗುರುತಿಸಬಹುದು. ನನ್ನ ಆದೇಶಗಳನ್ನು ಒಂದಿಷ್ಟೂ ತಪ್ಪದೆ ಪಾಲಿಸಿ, ಇಲ್ಲವಾದರೆ ನೀವು ಉಳಿಯಲಾರಿರಿ’ ಎಂದು ಹೇಳಿತು.
ಕೆಲವು ವರ್ಷಗಳಲ್ಲಿ ಅತ್ಯಂತ ವಿನಾಶಕಾರಕ ಜಲಪ್ರಳಯವಾಯಿತು. ಇಡೀ ಜಗತ್ತೇ ಅದರಲ್ಲಿ ಮುಳುಗಿತು. ಮನುವು ಮೀನಿನ ಆದೇಶಗಳನ್ನು ತಪ್ಪದೇ ಪಾಲಿಸಿದ. ಮೀನು ಈಗ ಚಲಿಸುವ ಪರ್ವತದಂತೆ ಕಾಣುತ್ತಿತ್ತು. ಅದು ಮನುವಿನ ಹಡಗನ್ನು ಸಮುದ್ರದ ಮಧ್ಯಕ್ಕೆ ಎಳೆದುಕೊಂಡುಹೋಯಿತು. ಎಲ್ಲೆಲ್ಲೂ ನೀರು. ಭೂಮಿ ಆಕಾಶಗಳು ಒಂದಾಗಿದ್ದವು.
ಮನು ಮತ್ತು ಸಪ್ತಋಷಿಗಳಲ್ಲದೆ ಯಾವ ಜೀವಿಯೂ ಇರಲಿಲ್ಲ. ಹಲವು ವರ್ಷಗಳ ನಂತರ ನೀರು ಇಳಿಯಲು ಪ್ರಾರಂಭವಾಯಿತು. ಹಿಮಾಲಯದ ಶಿಖರ ಕಾಣಿಸಿತು. ಮೀನು ಹಡಗನ್ನು ಅಲ್ಲಿಗೆ ಒಯ್ದು, ಅದರಲ್ಲಿ ಇದ್ದವರಿಗೆ ಅದನ್ನು ಶಿಖರಕ್ಕೆ ಕಟ್ಟುವಂತೆ ಹೇಳಿತು. ಅನಂತರ ಮೀನು ಹೀಗೆ ಹೇಳಿತ್ತು: “ನಾನು ಎಲ್ಲ ಜೀವಿಗಳ ಒಡೆಯನಾದ ಬ್ರಹ್ಮ. ನಿಮ್ಮನ್ನು ಈ ವಿಪತ್ತಿನಿಂದ ರಕ್ಷಿಸಲು ನಾನು ಮೀನಿನ ರೂಪದಲ್ಲಿ ಬಂದೆ. ಈ ಹಡಗಿನಲ್ಲಿರುವ ಬೀಜಗಳ ಮೂಲಕ ಮನುವು ದೇವತೆಗಳನ್ನೂ, ಅಸುರರನ್ನೂ ಸಕಲ ಚರಾಚರಗಳನ್ನೂ ಸೃಷ್ಟಿಸುತ್ತಾನೆ. ಇದಕ್ಕೆ ಅಗತ್ಯವಾದ ಸಾಮರ್ಥ್ಯವನ್ನು ತಪಸ್ಸು ಮಾಡಿ ಸಂಪಾದಿಸುತ್ತಾನೆ. ನನ್ನ ಕೃಪೆಯಿಂದ ಅವನು ಮಾಯೆಗೆ ವಶವಾಗುವುದಿಲ್ಲ’. ಈ ಮಾತುಗಳನ್ನು ಹೇಳಿ ಮೀನು ಮಾಯವಾಯಿತು.
ಮನುವು ತಪಸ್ಸನ್ನು ಮಾಡದೆ ಸೃಷ್ಟಿಕಾರ್ಯದಲ್ಲಿ ತೊಡಗಿದ. ಇದರಿಂದ ಅವನನ್ನು ಮಾಯೆಯು ಕವಿಯಿತು. ಸೃಷ್ಟಿಕಾರ್ಯವು ಮುಂದುವರೆಯಲಿಲ್ಲ. ಆಗ ಅವನು ಬ್ರಹ್ಮನ ಮಾತುಗಳನ್ನು ಸ್ಮರಿಸಿದ. ಕಠೊರ ತಪಸ್ಸನ್ನು ಕೈಗೊಂಡು ಪುಣ್ಯವನ್ನು ಗಳಿಸಿ ಸೃಷ್ಟಿಯ ಕಾರ್ಯದಲ್ಲಿ ಪ್ರವೃತ್ತನಾದ.
– ಪ್ರೊ. ಎಲ್. ಎನ್ ಶೇಷಗಿರಿರಾವ್ ಅವರ “ಕಿರಿಯರ ಭಾಗವತ’ ಪುಸ್ತಕದಿಂದ