Advertisement
ಈವರೆಗೆ ಇದ್ದ ಮಾಮೂಲು ಶೂಟಿಂಗ್ ಸಾಧನ ಆಗಾಗ ಕೈಕೊಡುತ್ತಿದ್ದುದರಿಂದ ಮನು ಭಾಕರ್ ನೂತನ ತಂತ್ರಜ್ಞಾನಕ್ಕೆ ಮೊರೆಹೋದರು. ಇದರಿಂದ ತಮ್ಮ ಒಲಿಂಪಿಕ್ಸ್ ಅಭ್ಯಾಸ ವ್ಯವಸ್ಥಿತವಾಗಿ ಸಾಗುತ್ತಿದೆ ಎಂಬುದಾಗಿ ಅವರು ಹೇಳಿದ್ದಾರೆ. ಇದು ಸ್ವಿಸ್ ಮೂಲದ “ಎಚ್‌ಎಸ್ 10′ ಯಂತ್ರವಾಗಿದ್ದು, ಎಲ್ಲ ಮಾದರಿಯ ಏರ್ ಗನ್‌ಗಳನ್ನೂ 10ರಿಂದ 20 ಮೀ. ದೂರದ ತನಕ ಗುರಿ ಇಡಲು ಸೂಕ್ತವಾಗಿದೆ. ಎಲ್‌ಇಡಿ ಪ್ರಕಾಶದಿಂದಾಗಿ ಇದರ ಫಲಿತಾಂಶ ಕೂಡ ಅಷ್ಟೇ ನಿಖರವಾಗಿದೆ.
“ನಾನು ಇತ್ತೀಚೆಗಷ್ಟೇ ಈ ಸಾಧನವನ್ನು ಅಳವಡಿಸಿಕೊಂಡೆ. ಇದರಿಂದ ನನ್ನ ಒಲಿಂಪಿಕ್ಸ್ ತಯಾರಿಗೆ ಬಹಳ ಪ್ರಯೋಜನ ವಾಗಲಿದೆ’ ಎಂದು ಹರ್ಯಾಣದ ಗೊರಿಯಾದಲ್ಲಿರುವ ತಮ್ಮ ನಿವಾಸದಿಂದ ಮನು ಪಿಟಿಐಗೆ ದೂರವಾಣಿ ಮೂಲಕ ತಿಳಿಸಿದರು. ಮನು ಅವರ ತಂದೆ ಈ ಸುವ್ಯವಸ್ಥಿತ ಶೂಟಿಂಗ್ ರೇಂಜ್ ಒಂದನ್ನು ನಿರ್ಮಿಸಿದ್ದಾರೆ. ನೂತನ ಸಾಧನೆಯನ್ನು ತರಿಸಲು ಹಾಗೂ ಇದನ್ನು ಅಳವಡಿಸಲು ಸಹಕಾರ ನೀಡಿದ ಸಾಯ್ ಮತ್ತು “ಒಲಿಂಪಿಕ್ ಗೋಲ್ಡ್ ಕ್ವೆಸ್ಟ್’ಗೆ ಮನು ಭಾಕರ್ ಕೃತಜ್ಞತೆ ಸಲ್ಲಿಸಿದ್ದಾರೆ. “ಹಳೆ ಮಾದರಿಯ ಯಂತ್ರದಿಂದ ನನಗೆ ಬಹಳ ಸಮಸ್ಯೆ ಆಗುತ್ತಿತ್ತು. ಈಗ ಸಮಸ್ಯೆ ಪರಿಹಾರಗೊಂಡಿದೆ. ಮುಂದಿನ 3-4 ತಿಂಗಳ ಕಾಲ ಯಾವುದೇ ಶೂಟಿಂಗ್ ಸ್ಪರ್ಧೆ ಇಲ್ಲದ ಕಾರಣ ಹಾಗೂ ಹೊರಾಂಗಣ ಅಭ್ಯಾಸಕ್ಕೆ ಅವಕಾಶ ಇಲ್ಲದಿರುವುದರಿಂದ ನನಗೆ ಈ ಸಾಧನದಿಂದ ಬಹಳಷ್ಟು ಪ್ರಯೋಜನವಾಗಲಿದೆ’ ಎಂದು ಮನು ಭಾಕರ್ ಹೇಳಿದರು.ಐಎಸ್‌ಎಸ್‌ಎಫ್ ವಿಶ್ವಕಪ್, ಕಾಮನ್ವೆಲ್ತ್ ಗೇಮ್ಸ್, ಯುವ ಒಲಿಂಪಿಕ್ಸ್ ನಲ್ಲಿ ಭಾರೀ ಯಶಸ್ಸು ಸಾಧಿಸಿರುವ 18ರ ಹರೆಯದ ಮನು ಭಾಕರ್ ಟೋಕಿಯೊ ಒಲಿಂಪಿಕ್ಸ್ ಶೂಟಿಂಗ್‌ನಲ್ಲಿ ಭಾರತದ ಪ್ರಮುಖ ಪದಕ ಭರವಸೆಯಾಗಿದ್ದಾರೆ.