Advertisement

ಮಂತ್ರಾಲಯಕ್ಕೂ ಪ್ರವಾಹ ಭೀತಿ

11:15 AM Aug 17, 2018 | |

ರಾಯಚೂರು: ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ನದಿಗೆ ಎರಡು ಲಕ್ಷ ಕ್ಯುಸೆಕ್‌ ನೀರು ಹರಿಬಿಟ್ಟಿದ್ದು, ನದಿ ಪಾತ್ರದ ಗ್ರಾಮಗಳು ಮಾತ್ರವಲ್ಲದೇ ಮಂತ್ರಾಲಯಕ್ಕೂ ಪ್ರವಾಹ ಭೀತಿ ಎದುರಾಗಿದೆ. ಬುಧವಾರ 1.40 ಲಕ್ಷ ಕ್ಯುಸೆಕ್‌ ನೀರು ಹರಿಬಿಟ್ಟಿದ್ದರೆ, ಗುರುವಾರ ಎರಡು ಲಕ್ಷ ಕ್ಯುಸೆಕ್‌ ನೀರು ಹರಿಸಲಾಗಿದೆ. ಇದರಿಂದ ಸಿಂಧನೂರು, ಮಾನ್ವಿ ಸೇರಿ ರಾಯಚೂರು ತಾಲೂಕಿನ ನದಿ ಪಾತ್ರದ ಕೆಲ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ. ಜತೆಗೆ ಮಂತ್ರಾಲಯದಲ್ಲೂ ನದಿ ತುಂಬಿ ಹರಿಯುತ್ತಿದ್ದು, ಸ್ನಾನಘಟ್ಟ ಮುಳುಗಡೆಯಾಗಿದ್ದು, ಇನ್ನೊಂದೇ ಮೆಟ್ಟಿಲು ಬಾಕಿ ಇದೆ. ನದಿಗೆ ಹೆಚ್ಚುವರಿ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ನೀರಿನ ಪ್ರಮಾಣ ಮತ್ತಷ್ಟು ಹೆಚ್ಚುವ ಸಾಧ್ಯತೆಗಳಿದ್ದು, ಸಂಪೂರ್ಣ ಮುಳುಗಡೆ ಆಗಬಹುದು. 

Advertisement

ರಾಯರ ಆರಾಧನೆ ಸಮೀಪಿಸುತ್ತಿದ್ದು, ಮಠಕ್ಕೆ ಬರುವ ಭಕ್ತರ ಸಂಖ್ಯೆಯೂ ಹೆಚ್ಚುತ್ತಿದೆ. ಕಳೆದೆರಡು ದಿನಗಳಿಂದ ನದಿಯಲ್ಲಿ ನೀರಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿರುವ ಕಾರಣ ಶ್ರೀಮಠ ಮುನ್ನೆಚ್ಚರಿಕೆ ಕ್ರಮವಾಗಿ ಕಟ್ಟೆಚ್ಚರ ವಹಿಸಿದೆ. ನದಿಯಲ್ಲಿ ಸ್ನಾನ ಮಾಡದಂತೆ ಪ್ರತಿ ಐದು ನಿಮಿಷಕ್ಕೊಮ್ಮೆ ಸೂಚನೆ ನೀಡಲಾಗುತ್ತಿದೆ. ಅದರ ಜತೆಗೆ ಎರಡು ಶಿಫ್ಟ್‌ಗಳಲ್ಲಿ ಕೆಲಸ ನಿರ್ವಹಿಸುವಂತೆ ಆರು ಜನ ಸೆಕ್ಯೂರಿಟಿ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. ನದಿ ಪಾತ್ರದಲ್ಲಿಯೇ ಸ್ನಾನ ಮಾಡುವಂತೆ ಸೂಚನೆ ನೀಡುತ್ತಿದ್ದು,
ನದಿಯಲ್ಲಿ ಇಳಿಯಲು ಬಿಡುತ್ತಿಲ್ಲ. ಅಲ್ಲದೇ, ಈಚೆಗೆ ಎರಡು ಮೊಸಳೆಗಳು ಕಂಡುಬಂದಿದ್ದು, ಅರಣ್ಯ ಇಲಾಖೆ ಜತೆಗೂ ಮಾತುಕತೆ ನಡೆಸಿದೆ.

ಕೊಚ್ಚಿ ಹೋದ ಕೋಣೆಗಳು: ನದಿ ಪಾತ್ರದಲ್ಲಿ ಮಹಿಳೆಯರಿಗೆಂದು ನಿರ್ಮಿಸಿದ್ದ ಎರಡು ವಸ್ತ್ರ ಬದಲಾವಣೆ ಕೋಣೆಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ. ಆರಾಧನೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಭಕ್ತರಿಗೆ ಸ್ನಾನಕ್ಕೆ ಅನುವು ಮಾಡಿಕೊಡುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ನದಿಯಲ್ಲಿ ನೀರಿನ ಪ್ರಮಾಣ ಇಳಿಕೆಯಾದ ಬಳಿಕ ಸೌಲಭ್ಯ ಕಲ್ಪಿಸುವ ಚಿಂತನೆಯಲ್ಲಿದೆ ಮಂತ್ರಾಲಯ ಆಡಳಿತ ಮಂಡಳಿ.

ಎಲಿಬಿಚ್ಚಾಲಿ ಬೃಂದಾವನ ಜಲಾವೃತ: ತುಂಗಭದ್ರಾ ನದಿಗೆ ಅಪಾರ ನೀರು ಹರಿದು ಬರುತ್ತಿರುವ ಪರಿಣಾಮ ಎಲೆಬಿಚ್ಚಾಲಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಏಕಶಿಲಾ ಬೃಂದಾವನ ಜಲಾವೃತವಾಗಿದೆ. ಮಂತ್ರಾಲಯಕ್ಕೆ ಬರುವ ಭಕ್ತರು ಎಲೆಬಿಚ್ಚಾಲಿಗೂ ಭೇಟಿ ನೀಡಿ ಬೃಂದಾವನ ದರ್ಶನ ಪಡೆಯುತ್ತಾರೆ. 9 ವರ್ಷದ ನಂತರ ಏಕಶಿಲಾ ಬೃಂದಾವನ ಜಲಾವೃತವಾಗಿದ್ದು, ತಮಿಳುನಾಡು ಸೇರಿದಂತೆ ವಿವಿಧೆಡೆಯಿಂದ ಆಗಮಿಸುತ್ತಿರುವ ಭಕ್ತರು ದೂರದಿಂದಲೇ ಬೃಂದಾವನ ದರ್ಶನ ಪಡೆಯುತ್ತಿದ್ದಾರೆ.

ಟಿಬಿ ಡ್ಯಾಂನಲ್ಲಿ 1,630 ಅಡಿ ಸಂಗ್ರಹ: ತುಂಗಭದ್ರಾ ಜಲಾಶಯದಲ್ಲಿ 1,630 ಅಡಿ ನೀರು ಸಂಗ್ರಹವಾಗಿದ್ದು, ಒಳಹರಿವು ಹೆಚ್ಚಾಗಿದೆ. ಗುರುವಾರ 1.67 ಲಕ್ಷ ಕ್ಯುಸೆಕ್‌ ನೀರು ಒಳಹರಿವು ಇರುವ ಕಾರಣ 1.99 ಲಕ್ಷ ಕ್ಯುಸೆಕ್‌ ನೀರು ನದಿಗೆ ಹರಿಸಲಾಗಿದೆ. ಪಶ್ಚಿಮ ವಾಹಿನಿ ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಾದಲ್ಲಿ ನದಿಗೆ ಹೆಚ್ಚುವರಿ ನೀರು ಹರಿಸಲಾಗುತ್ತದೆ. ಇದರಿಂದ ನದಿಪಾತ್ರಗಳಿಗೆ ಮತ್ತಷ್ಟು ಆತಂಕ ಎದುರಾಗಲಿದೆ. ಆರಾಧನೆಗೆ ಕೆಲವೇ ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ನದಿ ನೀರು ಹೆಚ್ಚಾದರೆ ಸಮಸ್ಯೆ ಎದುರಾಗಲಿ¨

Advertisement

ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿರುವ ಕಾರಣ ಭಕ್ತರಿಗೆ ಸ್ನಾನಕ್ಕೆ ಅವಕಾಶ ನೀಡುತ್ತಿಲ್ಲ. ಯಾವುದೇ ಕಾರಣಕ್ಕೂ ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗುತ್ತಿದೆ. ಅಲ್ಲದೇ, ಆರಾಧನೆಗೆ ಬರುವ ಭಕ್ತರ ಸ್ನಾನಕ್ಕೆ ವ್ಯವಸ್ಥೆ ಮಾಡಬೇಕಿದ್ದು, ನೀರಿನ ಪ್ರಮಾಣ ಇಳಿಕೆಯಾದ ಬಳಿಕ ವ್ಯವಸ್ಥೆ ಮಾಡಲಾಗುವುದು.  
 ಎಸ್‌.ಕೆ. ಶ್ರೀನಿವಾಸ, ಶ್ರೀಮಠದ ವ್ಯವಸ್ಥಾಪಕ

Advertisement

Udayavani is now on Telegram. Click here to join our channel and stay updated with the latest news.

Next