Advertisement
ಮಂಗಳೂರಿನ ನೃತ್ಯಾಂಗನ್ ಸಂಸ್ಥೆಯು ನಗರದ ಡಾನ್‌ಬಾಸ್ಕೊ ಹಾಲ್‌ನಲ್ಲಿ ನಾಟ್ಯ ಚಿತ್ತಾರ ಮಂಥನ-2017 ನೃತ್ಯ ಕಾರ್ಯಕ್ರಮ ಏರ್ಪಡಿಸಿತ್ತು. ಬೆಂಗಳೂರಿನ ಆದಿತ್ಯ ಪಿ. ವಿ. ಮತ್ತು ಹೆಸರಾಂತ ನೃತ್ಯಾಂಗನೆ ಮೀನಾಕ್ಷಿ ಶ್ರೀನಿವಾಸನ್ ಇವರಿಬ್ಬರ ಅವಳಿ ಪ್ರಸ್ತುತಿಗಳು ಅಂದು ಮೂಡಿಬಂದವು. ತೀರಾ ಸಾಮಾನ್ಯ ಪ್ರೇಕ್ಷಕನಾಗಿ ಈ ಕಾರ್ಯಕ್ರಮದಲ್ಲಿ ನನ್ನನ್ನು ಮೊದಲು ಕಟ್ಟಿಹಾಕಿದ್ದು, ಆಪ್ತತೆ ಮೂಡಿಸಿದ್ದು- ಗಾಯನ, ವಾದನಗಳ ಹಿಮ್ಮೇಳದ ಜತೆಗಿದ್ದ ಮೌನ (ಭಾವೋತ್ಕಟತೆಯ ನಡುನಡುವೆ ಅಗತ್ಯವಾಗಿ ಉಂಟಾಗಬೇಕಾದ ಮನೋವಿಶ್ರಾಂತಿ), ನೆರಳು- ಬೆಳಕಿನ ಅಮೂರ್ತ ಹಿಮ್ಮೇಳ ಹಾಗೂ ಚಲನೆ -ಬೆಳಕು- ಸ್ತಬ್ಧತೆಯೊಂದಿಗೆ ತುಡಿಯುತ್ತಿದ್ದ ಹಿಮ್ಮೇಳ.
Related Articles
Advertisement
ಕೆಲವು ಸಂದರ್ಭಗಳಲ್ಲಿ ಬರೇ ನಟುವಾಂಗದ ಗುಬ್ಬಿತಾಳದ ಹಿನ್ನೆಲೆಯ, ವಾದ್ಯಮಾತ್ರದ ನೃತ್ತದ ಹಸ್ತಾಭಿನಯವು ರೋಮಾಂಚಗೊಳಿಸುತ್ತಿತ್ತು. ಈ ಸಂದರ್ಭದಲ್ಲಿ ಗದ್ದಲದ ನಡುವೆ ನಾವೆಷ್ಟು ಕಳೆದುಹೋಗಿದ್ದೇವೆ ಎಂದು ಅನ್ನಿಸಿದ್ದು ಸುಳ್ಳಲ್ಲ. ಕೇವಲ ತಾಳದ ಕಣತ್ಕಾರದ ಹಿನ್ನೆಲೆಯ ನೃತ್ತವು ಹೊಸ ಸಾಧ್ಯತೆ ಅಲ್ಲದೆ ಮತ್ತೇನು? ಮೌನದ ಮನೋವಿಶ್ರಾಂತಿಯಲ್ಲಿ ಕಳೆದುಹೋಗುವುದರ ಸುಖವು ಸದ್ದಿಯೊಳಗೆ ಮೀಯುವುದರಲ್ಲಿ ಎಂದೂ ಇಲ್ಲ. ಈ ಕಾರ್ಯಕ್ರಮದಲ್ಲಿ ವಿದುಷಿ ಮೀನಾಕ್ಷಿ ಶ್ರೀನಿವಾಸನ್ ನನ್ನನ್ನು ವಿಶ್ರಾಂತ ಮೌನದಲ್ಲಿ ಕಳೆದುಹೋಗುವಂತೆ ಮಾಡಿದರು-ಸುಖವಾಗಿ ಹೋದೆ.
ವಿ| ವೇದಕೃಷ್ಣರಾಮ್ ಅವರ ಲಯಕಾರಿಯಾದ ನೃತ್ಯಧರ್ಮಿ ಮೃದಂಗವನ್ನು ಇಲ್ಲಿ ಉಲ್ಲೇಖೀಸಬೇಕಾದದ್ದು ಕೂಡ ಬಹಳ ಮುಖ್ಯ. ಈ ಲಯವಿದ್ವಾಂಸರು ಇಡೀ ನೃತ್ಯ ಕಛೇರಿಯಲ್ಲಿ ಆಗಾಗ ಉಪಯೋಗಿಸಿಕೊಳ್ಳುತ್ತಿದ್ದ ವಿಶ್ರಾಂತ ಮೌನತಂತ್ರದ ಶೈಲಿ. ಅಗತ್ಯ ವೆನಿಸುವಲ್ಲಿ ನುಡಿಸದೆಯೇ ಬರೇ ನರ್ತನದ ಹಸ್ತಾಭಿನಯ, ನೃತ್ತವಿಲ್ಲದ ಆಂಗಿಕಾಭಿನಯವನ್ನು ಗಾನದೊಂದಿಗೆ ಹಾಗೆಯೇ ಬಿಟ್ಟುಬಿಡುತ್ತಿದ್ದ ಅನನ್ಯತೆ. ಇದು ವಾದಕನ ಪದ್ಯ-ಭಾವ-ರಸದ ಅವಧಾರಣ ಸ್ಥಿತಿಯನ್ನು ಸೂಚಿಸುವುದು. ಎಲ್ಲೂ ಗಾನ ಮತ್ತು ನೃತ್ಯವನ್ನು ಅಧಿಗಮಿಸದ ಸಂಯಮದ ವಾದನ, ಹಸ್ತದ ಕಂಪಿತದಿಂದ ಕೂಡಿದ ಅಭಿನಯಗಳಿಗೆ ಅನುಸಾರವಾಗಿ ಸಂವಾದಿಯಾಗಿ ಬಂದ, ಮೃದಂಗದ ಕೆನ್ನೆಗೆ ಮೃದುವಾಗಿ ಬೆರಳುಗಳಿಂದ ಮುತ್ತಿಕ್ಕುತ್ತಾ ಹೊರಡಿಸಿದ ನಂನಂನಂ ಕಾರಗಳು ಕಂಪಿತ ಹಸ್ತಗಳ ಸುತ್ತಲೂ ಅಲಂಕಾರ ಸರಮಾಲೆಯೇನೋ ಎಂಬಂತೆ ಭಾಸವಾಗುತ್ತಿತ್ತು. ಇಡೀ ಹಿಮ್ಮೇಳದ ದನಿಯಾಗಿ ನೃತ್ಯ, ನೃತ್ಯದ ಪ್ರಭಾವಲಯವಾಗಿ ಹಿಮ್ಮೇಳವಾಗಿ ಇದು ಸಂಭವಿಸಿತು, ಇದಕ್ಕೆ ನಾವೆಲ್ಲ ಸಾಕ್ಷಿಗಳಾದೆವು.
ಆಯೋಜಕರಾದ ನೃತ್ಯಾಂಗನ್ ಸಂಸ್ಥೆಯ ರಾಧಿಕಾ ಶೆಟ್ಟಿಯವರಿಗೂ ಪೂರಕ ಹಿಮ್ಮೇಳಕ್ಕೂ ಹಿತ-ಮಿತವಾದ ನಿರೂಪಣೆಯ ಮಂಜುಳಾ ಸುಬ್ರಹ್ಮಣ್ಯ ಅವರಿಗೂ ಧನ್ಯವಾದಗಳು. ಒಟ್ಟಿನಲ್ಲಿ ಧನ್ಯತೆಯ ವಾರಾಂತ್ಯವನ್ನು ಈ ನೃತ್ಯ ಪ್ರದರ್ಶನ ಒದಗಿಸಿಕೊಟ್ಟಿತು.
ಕೃಷ್ಣಪ್ರಕಾಶ ಉಳಿತ್ತಾಯ