ಬೆಂಗಳೂರು: ಜಾನಪದ ಕಾವ್ಯದ ಅಸ್ಮಿತೆಯನ್ನು ಕಾಪಿಟ್ಟುಕೊಂಡಿರುವ ಮಂಟೇಸ್ವಾಮಿ ಕಾವ್ಯವನ್ನು ಹೆಚ್ಚು ಪ್ರಚುರಪಡಿಸುವ ಕೆಲಸವಾಗುತ್ತಿಲ್ಲ. ಈ ಕಾರ್ಯಕ್ಕೆ ವಿಶ್ವವಿದ್ಯಾಲಯಗಳು ಮುಂದಾಗಬೇಕಿದೆ ಎಂದು ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಹೇಳಿದ್ದಾರೆ.
ಸವಿಗಾನ ಸಾಂಸ್ಕೃತಿಕ ಸಂಘಟನೆ ಸೋಮವಾರ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ “ಮಂಟೇಸ್ವಾಮಿ ಮಹಾಕಾವ್ಯ’ ನೀಲಗಾರ ಪದ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಂಟೇಸ್ವಾಮಿ ಗಾಯಕರು, ವೀರಗಾಸೆ ಸೇರಿ ಅನೇಕ ಜಾನಪದ ಕಲೆಗಳ ಅಸಾಧಾರಣ ಸಾಧನೆಗೈದ ಕಲಾವಿದರು ಎಲೆ ಮರೆಕಾಯಿಯಂತೆ ಬದುಕುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಗಮನರಿಸಬೇಕು ಎಂದು ತಿಳಿಸಿದರು.
ಕಲಾವಿದರಿಗೆ ಜನಪ್ರಿಯತೆ ಶ್ರೇಷ್ಠತೆಯ ಸಂಕೇತವಲ್ಲ. ತೆರೆಯ ಮೇಲೆ ಬರುವ ಕಲಾವಿದರನ್ನೇ ಗುರುತಿಸಿ ಪ್ರೋತ್ಸಾಹ ನೀಡುವುದಷ್ಟೇ ಅಲ್ಲದೆ ಎಲೆ ಮರೆ ಕಾಯಿಯಂತೆ ಕಲೆಗಾಗಿ ಸೇವೆ ಸಲ್ಲಿಸುತ್ತಿರುವ ಕಲಾವಿದರನ್ನು ಗುರುತಿಸುವ ಕೆಲಸ ಆಗಬೇಕು ಎಂದರು.
ಜಾನಪದ ವಿದ್ವಾಂಸ ಡಾ. ಪಿ.ಕೆ ರಾಜಶೇಖರನ್ ಮಾತನಾಡಿ, 12ನೇ ಶತಮಾನದ ಶರಣ ಸಾಹಿತ್ಯದ ಬಳಿಕ ಸಾಮಾಜಿಕ ನ್ಯಾಯ, ಧಾರ್ಮಿಕತೆ, ರಾಜಕೀಯದ ಅಂಶಗಳು ಮಂಟೇಸ್ವಾಮಿ ಮಹಾಕಾವ್ಯದಲ್ಲಿ ಉಲ್ಲೇಖವಾಗಿದೆ. ಸೃಷ್ಟಿಯ ಪರಿಕಲ್ಪನೆ, ಸೂಫಿ ಧರ್ಮದ ಪ್ರಭಾವಳಿಯೂ ಮಂಟೇಸ್ವಾಮಿ ಕಾವ್ಯದಲ್ಲಿ ಅಡಕವಾಗಿರುವುದು ಗಮನಾರ್ಹ ಅಂಶವಾಗಿದೆ. ವಿಶ್ವದ ಯಾವುದೇ ಜಾನಪದ ಕಾವ್ಯದಲ್ಲಿ ಬೆಳಕಿಗೆ ಬಾರದ ಸಂಗತಿಗಳು ಮಂಟೇಸ್ವಾಮಿ ಕಾವ್ಯದಲ್ಲಿವೆ.
ಈ ಸಂಬಂಧ ತಾವು ರಚಿಸುತ್ತಿರುವ 800ಕ್ಕೂ ಅಧಿಕ ಪುಟಗಳ ಮಂಟೇಸ್ವಾಮಿ ಕಾವ್ಯದ ಪುಸ್ತಕ ಮತ್ತಷ್ಟೂ ಸಂಗತಿಗಳ ಬಗ್ಗೆ ಬೆಳಕು ಚೆಲ್ಲಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಖ್ಯಾತ ನೀಲಗಾರ ಪದದ ಗಾಯಕ ದೊಡ್ಡ ಗವಿಬಸಪ್ಪ, ರಾಜ್ಯಪ್ರಶಸ್ತಿ ಪುರಸ್ಕೃತ ವೀರಗಾಸೆ ಕಲಾವಿದ ಜಿ. ಪಿ ಜಗದೀಶ್ ಹಾಗೂ ಪಿ.ಕೆ ರಾಜಶೇಖರನ್ ಅವರನ್ನು ಅಭಿನಂದಿಸಲಾಯಿತು.