Advertisement

ಹಿಂದೂಸ್ತಾನಿ ಸಂಗೀತಕ್ಕೆ ಮನಸೂರ ಕೊಡುಗೆ ಅಪಾರ; ವಿದ್ಯಾಧರ ವ್ಯಾಸ್‌

04:10 PM Jan 01, 2024 | Team Udayavani |

ಉದಯವಾಣಿ ಸಮಾಚಾರ
ಧಾರವಾಡ: ಡಾ| ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ವತಿಯಿಂದ ಪದ್ಮವಿಭೂಷಣ ಡಾ| ಮಲ್ಲಿಕಾರ್ಜುನ ಮನಸೂರ ಅವರ 113ನೇ ಜನ್ಮದಿನಾಚರಣೆ, ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮತ್ತು ಸಂಗೀತೋತ್ಸವ ಆಲೂರು ಭವನದಲ್ಲಿ
ರವಿವಾರ ಜರುಗಿತು.

Advertisement

2023ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ ಹಿಂದೂಸ್ತಾನಿ ಸಂಗೀತಗಾರ ಮುಂಬೈನ ಪಂ| ವಿದ್ಯಾಧರ ವ್ಯಾಸ್‌ ಮಾತನಾಡಿ, ಪಂ| ಮನಸೂರು ಅವರು ಶ್ರೇಷ್ಠ ಗಾಯಕರಾಗಿದ್ದರು. ಪ್ರತಿಯೊಂದು ಹಾಡನ್ನು ವಿಶಿಷ್ಟ ಹಾಗೂ ಅರ್ಥಪೂರ್ಣವಾಗಿ ಪ್ರಸ್ತುತಪಡಿಸುತ್ತಿದ್ದ ಅವರ ಗಾಯನವನ್ನು ನಮ್ಮ ತಂದೆಯವರ ಕಾಲದಿಂದಲೂ ಆಲಿಸಿದ್ದೇನೆ.

ಈಗ ಪಂ| ಮಲ್ಲಿಕಾರ್ಜುನ ಮನಸೂರ ಅವರ ಹೆಸರಿನ ಪ್ರಶಸ್ತಿ ಸ್ವೀಕರಿಸಿದ್ದು ಖುಷಿ ಕೊಟ್ಟಿದೆ. ದಕ್ಷಿಣ ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಬೆಳವಣಿಗೆಗೆ ಪಂ| ಮಲ್ಲಿಕಾರ್ಜುನ ಮನಸೂರ ಸೇರಿದಂತೆ ಇತರರ ಕೊಡುಗೆ ಅಪಾರ ಎಂದರು.

ಉನ್ನತ ಶಿಕ್ಷಣ ಅಕಾಡೆಮಿ ನಿವೃತ್ತ ನಿರ್ದೇಶಕ ಪ್ರೊ| ಎಸ್‌.ಎಂ. ಶಿವಪ್ರಸಾದ ಮಾತನಾಡಿ, ಧಾರವಾಡ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ. ಇಲ್ಲಿನ ಸಂಸ್ಕೃತಿ ಹಾಗೂ ಸಂಗೀತ ನಾಡಿಗೆ ಮಾದರಿಯಾಗಿದೆ. ಮನಸೂರು ಅವರು ವಿಶಿಷ್ಟ ಹಾಗೂ ಉತ್ಕೃಷ್ಟಮಟ್ಟದ ರೀತಿಯಲ್ಲಿ ಸಂಗೀತ ಸಾಧನೆ ಮಾಡಿದ್ದಾರೆ. ಅವರ ಕುರಿತು ಹೆಚ್ಚಿನ ಅಧ್ಯಯನ ಅಗತ್ಯ ಎಂದು ಹೇಳಿದರು.

ಪಂ| ಡಾ| ರವಿಕಿರಣ ನಾಕೋಡ ಹಾಗೂ ಗದುಗಿನ ಪಂ| ವೆಂಕಟೇಶ ಆಲಕೋಡ ಅವರಿಗೆ ರಾಷ್ಟ್ರೀಯ ಯುವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪಂ| ಎಂ.ವೆಂಕಟೇಶಕುಮಾರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಶಂಕರ ಕುಂಬಿ, ದೀಲಿಪ್‌ ದೇಶಪಾಂಡೆ, ಅಕ್ಕಮಹಾದೇವಿ ಆಲೂರು ಇನ್ನಿತರರಿದ್ದರು.

Advertisement

ಸಮಾಧಿಗೆ ಪೂಜೆ-ಸಂಗೀತ ಸೇವೆ: ಬೆಳಗ್ಗೆ ಡಾ| ಮಲ್ಲಿಕಾರ್ಜುನ ಮನಸೂರ ಟ್ರಸ್ಟ್‌ನಿಂದ ಡಾ| ಮಲ್ಲಿಕಾರ್ಜುನ ಮನಸೂರ ಅವರ ಸಮಾಧಿಗೆ ಪೂಜೆ ನೆರವೇರಿಸಲಾಯಿತು. ಅಕ್ಕಮಹಾದೇವಿ ಆಲೂರ, ಹುಬ್ಬಳ್ಳಿಯ ಡಾ| ಚಂದ್ರಿಕಾ ಕಾಮತ್‌ ಹಾಗೂ ಉಜಿರೆಯ ಮಿಥುನ ಚಕ್ರವರ್ತಿ ಸಂಗೀತ ಸೇವೆ ಸಲ್ಲಿಸಿದರು. ಹಾರ್ಮೋನಿಯಂನಲ್ಲಿ ಡಾ| ಪರಶುರಾಮ ಶರಣಪ್ಪ ಕಟ್ಟಿಸಂಗಾವಿ ಹಾಗೂ ತಬಲಾದಲ್ಲಿ ಪಂ| ಅಲ್ಲಮಪ್ರಭು ಕಡಕೋಳ ಸವದತ್ತಿ ಸಾಥ್‌ ನೀಡಿದರು. ಸಂಜೆ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ನಂತರ ಪ್ರಶಸ್ತಿ ಪುರಸ್ಕೃತರಾದ ಪಂ| ವೆಂಕಟೇಶ ಆಲಕೋಡ ಅವರಿಂದ ಗಾಯನ, ಪಂ| ಡಾ| ರವಿಕಿರಣ ನಾಕೋಡ ಅವರಿಂದ ವಾದ್ಯ ಸಂಗೀತ (ತಬಲಾ) ಹಾಗೂ ಪಂ| ವಿದ್ಯಾಧರ ವ್ಯಾಸ್‌ ಅವರಿಂದ ಹಿಂದೂಸ್ತಾನಿ ಗಾಯನ ಜರುಗಿತು.

Advertisement

Udayavani is now on Telegram. Click here to join our channel and stay updated with the latest news.

Next