ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಬಿಐ ಅಧಿಕಾರಿಗಳು ಗುರುವಾರ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಹಾಗೂ ಸಂಸ್ಥೆಯ ಏಳು ಮಂದಿ ನಿರ್ದೇಶಕರನ್ನು ಹೆಚ್ಚಿನ ವಿಚಾರಣೆ ಗಾಗಿ ಐದು ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ.
ಸಿಬಿಐ ತಂಡ ಆತನ ಸುದೀರ್ಘ ವಿಚಾರಣೆ ಆರಂಭಿಸಿದ್ದು, ಕೆಲವು ಪ್ರಮುಖ ರಾಜಕಾರಣಿಗಳು, ಕೆಲ ಉನ್ನತ ಅಧಿಕಾರಿಗಳು ಹಗರಣದಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಕಲೆಹಾಕಲಿದೆ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಹೆಚ್ಚಿನ ಮಾಹಿತಿಗಳು ದೊರೆತಿದ್ದೇ ಆದರೆ ಕೆಲವು ರಾಜಕಾರಣಿಗಳು ಮತ್ತು ಅಧಿಕಾರಿಗಳು ಸಿಬಿಐ ವಿಚಾರಣೆಗೆ ಒಳಪಡುವ ಆತಂಕದಲ್ಲಿದ್ದಾರೆ ಎನ್ನಲಾಗಿದೆ.
ಈ ಮೊದಲು ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ತನಿಖಾ ತಂಡ (ಎಸ್‌ಐಟಿ) ಹಾಗೂ ಜಾರಿ ನಿರ್ದೇಶನಾಲಯ ಆರೋಪಿಗಳನ್ನು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಈ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು, ಗುರುವಾರ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್, ನಿರ್ದೇಶಕರಾದ ನಿಜಾಮುದ್ದೀನ್, ನಾಸೀರ್ ಹುಸೇನ್, ನವೀದ್ ಅಹ್ಮದ್, ವಸೀಂ, ಅರ್ಶದ್ ಖಾನ್, ಅಹ್ಮದ್ ಅಪ್ಸರ್ ಪಾಷಾ ಹಾಗೂ ದಾದಾಪೀರ್‌ನನ್ನು ಸಿಬಿಐ ವಿಶೇಷ ಕೋರ್ಟ್‌ಗೆ ಹಾಜರು ಪಡಿಸಿ ವಶಕ್ಕೆ ಪಡೆದುಕೊಂಡಿದ್ದು, ಗಂಗಾನಗರದಲ್ಲಿರುವ ಸಿಬಿಐ ಕಚೇರಿಗೆ ಕರೆದೊಯ್ದಿದ್ದಾರೆ.
ಜೂ.8ರಂದು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂ ಡಿದ್ದು, ಈ ಆಧಾರದ ಮೇಲೆ ತನಿಖೆ ನಡೆಸಿದ್ದ ಎಸ್‌ಐಟಿ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್, ಐಎಎಸ್ ಅಧಿಕಾರಿ ಬಿ.ಎಂ.ವಿಜಯಶಂಕರ್, ಉಪವಿಭಾಗಾಧಿಕಾರಿ ಎಲ್.ಸಿ. ನಾಗರಾಜು, ಬಿಬಿಎಂಪಿಯ ನಾಮನಿರ್ದೇಶಿತ ಸದಸ್ಯ, ನಾಟಿ ವೈದ್ಯ, ಧರ್ಮಗುರುಗಳು ಸೇರಿ 30ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ, ಹತ್ತಾರು ಕೋಟಿ ರೂ. ಮೌಲ್ಯದ ಚಿರಾಸ್ತಿ ಹಾಗೂ ಚರಾಸ್ತಿಯನ್ನು ಜಪ್ತಿ ಮಾಡಿತ್ತು. ಆರೋಪಿ ಕೂಡ ವಿಚಾರಣೆ ವೇಳೆ ವಂಚನೆ ಬಗ್ಗೆ ತಪ್ಪೋಪ್ಪಿಕೊಂಡಿದ್ದು, ಬರೋಬರಿ 1450 ಕೋಟಿ ರೂ. ವಂಚನೆ ನಡೆದಿರುವುದು ಬೆಳಕಿಗೆ ಬಂದಿತ್ತು.
ಈ ಸಂಬಂಧ ಸರ್ಕಾರದ ಸೂಚನೆ ಮೇರೆಗೆ ಸೆ.3ರಂದು ಎಫ್ಐಆರ್ ದಾಖಲು ಮಾಡಿಕೊಂಡಿದ್ದ ಸಿಬಿಐ, ಐಎಂಎ ಸಂಸ್ಥೆಯ ಮುಖ್ಯಸ್ಥ ಮೊಹಮ್ಮದ್ ಖಾನ್, ನಿರ್ದೇಶಕರಾದ ಎ. ನಿಜಾಮುದ್ದೀನ್, ನಾಸೀರ್ ಹುಸೇನ, ಎ.ಎನ್. ನವೀದ್, ವಾಸೀಂ, ಹರ್ಷದ್ ಖಾನ್, ಅಹ್ಮದ್ ಅಪ್ಸರ್ ಪಾಷಾ, ದಾದಾಪೀರ್ ಇಮ್ಸಾಬ್, ಸದಸ್ಯರಾದ ಎಸ್.ಅಕ್ಬರ್ ಖಾನ್, ಐ.ಅಹ್ಮದ್ ಖಾನ್, ಫುಜೈಲ್ ಅಹ್ಮದ್, ಮೊಹಮ್ಮದ್ ಇದ್ರಿಸ್, ಉಸ್ಮಾನ್ ಅಬ್ರೈಸ್, ಲೆಕ್ಕಪರಿಶೋಧಕ ಇಕ್ಬಾಲ್ ಖಾನ್, ಖಾಸಗಿ ವ್ಯಕ್ತಿ ಸೈಯದ್ ಮುಜಾಹೀದ್, ಐಎಂಎ ಸಂಸ್ಥೆ, ಐಎಂಎ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ್, ಐಎಂಎ ಜ್ಯೂವೆಲ್ಲರಿ-ಎಲ್ಎಲ್ಪಿ, ಐಎಂಎ ಬುಲಿಯನ್ ಆ್ಯಂಡ್ ಟ್ರೇಡಿಂಗ್ ಎಲ್ಎಲ್ಪಿ ಪ್ರೈ. ಕೋ. ಲಿಮಿಟೆಡ್, ಐಎಂಎ ಕ್ರಿಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಸೇರಿ ಒಟ್ಟು 20 ಮಂದಿ ವಿರುದ್ಧ ಸೆ.7ರಂದು ದೋಷಾರೋಪ ಪಟ್ಟಿ ಸಲ್ಲಿಸಿತ್ತು.
ಅಲ್ಲದೆ, ಸಂಸ್ಥೆಯ ಕಂಪ್ಯೂಟರ್‌ಗಳಲ್ಲಿರುವ ಮಾಹಿತಿ, ಆಸ್ತಿ-ಪಾಸ್ತಿ ಲೆಕ್ಕಚಾರ ಕುರಿತು ಮಾಹಿತಿ ಸಂಗ್ರಹಿಸಲು 12 ಮಂದಿಯ ಮಲ್ಟಿ ಡಿಸಿಪ್ಲಿನರಿ ಇನ್‌ವೇಸ್ಟಿಗೇಷನ್ ಟೀಂ (ಎಂಡಿಐಟಿ) ರಚಿಸಿಕೊಂಡು ತನಿಖೆ ಮುಂದು ವರಿಸಿದೆ. ಈ ವಿಶೇಷ ತಂಡಕ್ಕೆ ಲೆಕ್ಕಪರಿಶೋಧ ಕರು, ವಿಧಿವಿಜ್ಞಾನ ಲೆಕ್ಕಪರಿಶೋಧಕರು, ಗಣಕ ಯಂತ್ರ ವಿಧಿವಿಜ್ಞಾನ ತಜ್ಞರು ಹಾಗೂ ಬ್ಯಾಂಕ್ ಅಧಿಕಾರಿಗಳು ಸಹಕಾರ ನೀಡಲಿದ್ದಾರೆ.