Advertisement

ಮಂಗಳೂರು: ಮಾರ್ಚ್‌ ಮಧ್ಯದಿಂದ ಬೇಸಗೆ ಮಳೆ ಸಂಭವ

01:24 AM Feb 24, 2023 | Team Udayavani |

ಮಂಗಳೂರು: ಚಳಿಗಾಲದ ದಿನಗಳು ಮುಗಿದು, ಬೇಸಗೆಯ ಬಿಸಿ ಹೆಚ್ಚಾಗುತ್ತಿದೆ. ಮುಂದಿನ ದಿನಗಳಲ್ಲಿ ಗರಿಷ್ಠ ಉಷ್ಣಾಂಶದಲ್ಲಿ ಮತ್ತಷ್ಟು ಏರಿಕೆ ಕಂಡು ಬರಲಿದೆ. ಪರಿಣಾಮ ಮಳೆಯೂ ಸುರಿಯಲಿದ್ದು, ಮಾರ್ಚ್‌ ಮಧ್ಯಭಾಗದಿಂದ ಬೇಸಗೆ ಮಳೆ ಸುರಿಯುವ ಎಲ್ಲ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಅಭಿಪ್ರಾಯಪಟ್ಟಿದೆ.

Advertisement

ಮಳೆಗಾಲ ಅಲ್ಲದಿದ್ದರೂ ವಾಡಿಕೆ ಪ್ರಕಾರ ಫೆಬ್ರವರಿಯಲ್ಲಿ ರಾಜ್ಯದಲ್ಲಿ 7 ಮಿ.ಮೀ. ವರೆಗೆ ಮಳೆ ಸರಿಯಬೇಕು. ಅದರೆ ಈ ಬಾರಿ ಇಲ್ಲಿಯ ವರೆಗೆ ಅಷ್ಟು ಮಳೆಯಾಗಿಲ್ಲ. ಫೆಬ್ರವರಿ ಅಂತ್ಯ ಅಥವಾ ಮಾರ್ಚ್‌ ಮೊದಲ ವಾರದಿಂದ ಬಿಸಿಲಿನ ಪ್ರಭಾವ ಮತ್ತಷ್ಟು ಹೆಚ್ಚಾಗಲಿದೆ. ಕರಾವಳಿಯಲ್ಲಿ ಸಾಮಾನ್ಯಕ್ಕಿಂತ 3-4 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಏರಿಕೆಯಾಗುವ ಸಂಭವವಿದೆ, ಈ ತಾಪಮಾನದ ಏರಿಕೆಯೇ ಮಳೆಗೆ ಕಾರಣವಾಗಲಿದೆ.

2 ವರ್ಷ ಉತ್ತಮ ಮಳೆ
ಕರಾವಳಿಯಲ್ಲಿ ಕಳೆದ ಎರಡು ವರ್ಷ ಬೇಸಗೆ ಮಳೆ ಜೋರಾಗಿ ಸುರಿದಿತ್ತು. ಘಟ್ಟದ ತಪ್ಪಲಿನ ಭಾಗದಲ್ಲಿ ಪ್ರತಿನಿತ್ಯ ಸಂಜೆಯಾಗುತ್ತಲೇ ಮಳೆ ಸುರಿಯುತ್ತಿದ್ದ ಪರಿಣಾಮ ಕೃಷಿಕರು ತುಸು ಸಂಕಷ್ಟ ಅನುಭವಿಸಿದರೂ ತೋಟಕ್ಕೆ ನೀರು ಹಾಯಿಸುವ ಕೆಲಸ ಇರುತ್ತಿರಲಿಲ್ಲ. ಅದಂತೆ ಈ ಬಾರಿಯೂ ಬೇಸಗೆ ಮಳೆ ಮಾರ್ಚ್‌ 15ರ ಅನಂತರ ಸುರಿಯಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಮಳೆಯ ವಾಡಿಕೆಗಿಂತ ಹೆಚ್ಚು ಅಥವಾ ಕಡಿಮೆ ಸುರಿಯಲಿದೆಯೇ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಉರಿ ಸೆಕೆ
ಚಳಿ ಕಡಿಮೆಯಾಗಿರುವುದರಿಂದ ಮುಂಜಾನೆಯಿಂದಲೇ ಬಿಸಿಲ ಝಳ ಅನುಭವವಾಗುತ್ತಿದೆ. ಬೆಳಗ್ಗೆ 8 ಗಂಟೆಯ ಬಿಸಿಲು ಕೂಡ ಹೆಚ್ಚು ಖಾರವಾಗಿರುತ್ತದೆ. ಬಿಸಿಲ ಝಳದಿಂದಾಗಿ ತಂಪು ಪಾನೀಯಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಎಳನೀರು, ಕಬ್ಬು ಜ್ಯೂಸ್‌ ಸೇರಿದಂತೆ ಹಣ್ಣಿನ ರಸ ಮೊದಲಾದವುಗಳ ಭರ್ಜರಿ ಮಾರಾಟವಾಗುತ್ತಿದೆ. ತಮಿಳುನಾಡು, ಬಯಲು ಸೀಮೆಯ ವಿವಿಧ ಜಿಲ್ಲೆಗಳಿಂದ ಎಳನೀರು ಸಾಕಷ್ಟು ಪ್ರಮಾಣದಲ್ಲಿ ಕರಾವಳಿಗೆ ಬರುತ್ತಿದೆ. ಕೆಲವು ದಿನಗಳ ಹಿಂದೆ 31-32 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿದ್ದ ಗರಿಷ್ಠ ತಾಪಮಾನ ಇದೀಗ ನಿಧಾನವಾಗಿ ಏರಿಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ 35ರಿಂದ 37 ಡಿಗ್ರಿ ಸೆಲ್ಸಿಯಸ್‌ ವರೆಗೆ ತಲುಪಲಿದೆ ಎನ್ನುತ್ತಾರೆ ಹವಾಮಾನ ತಜ್ಞರು.

ಮತ್ತಷ್ಟು ಏರಿಕೆಯಾಗಲಿದೆ ಗರಿಷ್ಠ ತಾಪಮಾನ
ಮಾರ್ಚ್‌ 15ರ ಅನಂತರ ಬೇಸಗೆ ಮಳೆ ಸುರಿಯುವ ಸಾಧ್ಯತೆಯಿದೆ. ಪಶ್ಚಿಮ ದಿಕ್ಕಿನಿಂದ ಗಾಳಿ ಬೀಸಿದಾಗ ಅರಬಿ ಸಮುದ್ರದಿಂದ ತೇವಾಂಶ ಭೂಮಿಯತ್ತ ಬರುತ್ತದೆ. ಇದು ಕರಾವಳಿ ಭಾಗದಲ್ಲಿ ಮಳೆಗೆ ಕಾರಣವಾಗಲಿದ್ದು, ಮುಂದಿನ ದಿನಗಳಲ್ಲಿ ಈ ಪ್ರಕ್ರಿಯೆ ಆರಂಭವಾಗಲಿದೆ.
– ಎ. ಪ್ರಸಾದ್‌ ಹವಾಮಾನ ತಜ್ಞ, ಐಎಂಡಿ ಬೆಂಗಳೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next