Advertisement

ಮುಂಗಾರು ಪ್ರವೇಶಕ್ಕೂ ಮುನ್ನ ಅಬ್ಬರ : ಕೇರಳ, ಅಸ್ಸಾಂ, ಮೇಘಾಲಯದಲ್ಲಿ ಮಳೆ ಪ್ರಕೋಪ

12:40 AM May 19, 2022 | Team Udayavani |

ತಿರುವನಂತಪುರ/ಶಿಲ್ಲಾಂಗ್‌: ಪ್ರಸಕ್ತ ಸಾಲಿನ ಮುಂಗಾರು ಬಲು ಬಿರುಸಾಗಿ ಇರುವಂತೆ ತೋರು ತ್ತಿದೆ. ಅದಕ್ಕೆ ಪೂರಕವಾಗಿಯೇ ಕೇರಳದ ಎಲ್ಲ ಜಿಲ್ಲೆಗಳಲ್ಲಿಯೂ ಕೂಡ ಬುಧವಾರ ಮಳೆಯ ಪ್ರಕೋಪ ಮುಂದುವರಿದಿದೆ. ಗುರುವಾರ ಕೂಡ ಕಾಸರಗೋಡು, ಕಲ್ಲಿಕೋಟೆ, ವಯನಾಡ್‌, ಕಣ್ಣೂರು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ಮತ್ತು ರೆಡ್‌ ಅಲರ್ಟ್‌ ಘೋಷಿಸಿದೆ. ಅದಕ್ಕೆ ಪೂರಕವಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹಿರಿಯ ಅಧಿಕಾರಿಗಳ ಜತೆಗೆ ಸಭೆ ನಡೆಸಿ, ಕೈಗೊಳ್ಳಬೇಕಾಗಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಜತೆಗೆ ವಿವಿಧ ನಗರ ಪ್ರದೇಶಗಳಲ್ಲಿ ಚರಂಡಿಗಳನ್ನು ಶುಚಿಗೊಳಿಸಿ ಸರಾಗವಾಗಿ ನೀರು ಹರಿಯುಂತೆ ಮಾಡುವ ಬಗ್ಗೆಯೂ ಅವರು ಸೂಚನೆ ನೀಡಿದ್ದಾರೆ.

Advertisement

ಬುಧವಾರ ಬೆಳಗ್ಗೆ ಭಾರತೀಯ ಹವಾಮಾನ ಇಲಾಖೆ ನೀಡಿದ್ದ ಮುನ್ಸೂಚನೆ ಪ್ರಕಾರ ತೃಶ್ಶೂರ್‌, ಪಾಲಕ್ಕಾಡ್‌, ಮಲಪ್ಪುರಂ ಸೇರಿದಂತೆ ಏಳು ಜಿಲ್ಲೆಗಳಲ್ಲಿ ಮಳೆ ಹಿನ್ನೆಲೆಯಲ್ಲಿ ಆರೆಂಜ್‌ ಅಲರ್ಟ್‌ ಅನ್ನು ಪ್ರಕಟಿಸಲಾಗಿತ್ತು. ಕೊಟ್ಟಾಯಂ ಜಿಲ್ಲೆಯಲ್ಲಿ ಧಾರಾ ಕಾರವಾಗಿ ಮಳೆ ಸುರಿದ ಪರಿಣಾಮ ವಿವಿಧ ಪ್ರದೇಶಗಳು ಜಲಾವೃತವಾಗಿದ್ದವು. ಜತೆಗೆ ನಗರದ ವಿವಿಧ ಪ್ರದೇಶಗಳಿಗೆ ನೀರು ನುಗ್ಗಿ ಜನರಿಗೆ ಅನನುಕೂಲ ಉಂಟಾಯಿತು.

ಐದು ತಂಡಗಳು: ಮಳೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣ ದಳ ಕೇರಳಕ್ಕಾಗಿ ಐದು ತಂಡಗಳನ್ನು ನಿಯೋಜನೆ ಮಾಡಿದೆ. ಕೇರಳ ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರ ರಾಜ್ಯದ ಜನರಿಗೆ ಮನವಿ ಮಾಡಿ ಉಕ್ಕಿ ಹರಿಯುತ್ತಿರುವ ನದಿ, ತೊರೆಗಳ ಸಮೀಪಕ್ಕೆ ತೆರಳಬಾರದು. ಮಳೆಯ ಪ್ರಕೋಪ ತಗ್ಗುವವರೆಗೆ ಗುಡ್ಡಗಾಡು ಪ್ರದೇಶಗಳಿಗೆ ಪ್ರಯಾಣ ಮಾಡಬಾರದು ಎಂದು ಮುನ್ನೆಚ್ಚರಿಕೆ ನೀಡಿದೆ. ಮುಂದಿನ ಐದು ದಿನಗಳ ವರೆಗೆ ರಾಜ್ಯದಲ್ಲಿ ಧಾರಾಕಾರ ಮಳೆಯಾಗಲಿದೆ ಎಂದೂ ಅದು ಸೂಚನೆ ನೀಡಿದೆ. ಐಎಂಡಿ ಈಗಾಗಲೇ ನೀಡಿದ ಮುನ್ಸೂಚನೆ ಪ್ರಕಾರ ಮೇ 27ರ ಒಳಗಾಗಿ ಕೇರಳಕ್ಕೆ ಮುಂಗಾರು ಪ್ರವೇಶ ಮಾಡಲಿದೆ.

ಅಸ್ಸಾಂ: ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಕೂಡ ಧಾರಾಕಾರ ಮಳೆಯಾಗುತ್ತಿದೆ. ಹೀಗಾಗಿ ವಿವಿಧ ಜಿಲ್ಲೆ ಗಳಲ್ಲಿ ಭೂಕುಸಿತ ಉಂಟಾಗಿದೆ. ಅಸ್ಸಾಂ ಮತ್ತು ಅರುಣಾಚಲ ಪ್ರದೇಶ ಗಡಿ ಪ್ರದೇಶದಲ್ಲಿರುವ ಮೈಬಾಂಗ್‌ ಟನೆಲ್‌ ಪ್ರದೇಶದಲ್ಲಿ ಭಾರೀ ಪ್ರಮಾ ಣದಲ್ಲಿ ಪ್ರವಾಹ ಬಂದು ಹೂಳು ತುಂಬಿಕೊಂಡಿದೆ. ಇದರಿಂದಾಗಿ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಭೂಕುಸಿತ, ಪ್ರವಾಹ ಸಂಬಂಧಿತ ದುರಂತಗಳಲ್ಲಿ ಜೀವ ಕಳೆದುಕೊಂಡವರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.

ರಕ್ಷಣೆಗೆ ಕ್ರಮ: ಪ್ರವಾಹದಿಂದ ಅಭಯಾರಣ್ಯಗಳು ಮುಳುಗಡೆಯಾಗಿ ಪ್ರಾಣಿ ಪಕ್ಷಿಗಳು ಅಸುನೀಗು­ವುದನ್ನು ತಪ್ಪಿಸಲು 40 ಅತ್ಯಂತ ಎತ್ತರದ ಪ್ರದೇಶ­ಗಳನ್ನು ಗುರುತಿಸಲಾಗಿದೆ. ಅಲ್ಲಿ ವಿಶೇಷ ಕೇಂದ್ರಗಳನ್ನು ನಿರ್ಮಿಸಿ ಪ್ರಾಣಿಗಳನ್ನು ಕರೆತರಲಾಗುತ್ತಿದೆ ಎಂದು ಅಸ್ಸಾಂ ಅರಣ್ಯ ಸಚಿವ ಪರಿಮಳ ಶುಕ್ಲವಿದ್ಯಾ ಹೇಳಿ­ದ್ದಾರೆ. ಇದೇ ವೇಳೆ ಅಸ್ಸಾಂನಲ್ಲಿ ಧಾರಾಕಾರ ಮಳೆ­ಯಿಂದಾಗಿ 11ನೇ ತರಗತಿಯ ಪರೀಕ್ಷೆಗಳು ಸೇರಿ­ದಂತೆ ಹಲವು ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ.

Advertisement

ಮೇಘಾಲಯದಲ್ಲೂ ಮಳೆ
ಈಶಾನ್ಯ ರಾಜ್ಯ ಮೇಘಾಲಯದಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದೆ. ಇದರಿಂದಾಗಿ ಹಲವು ಪ್ರದೇಶಗಳಲ್ಲಿ ರಸ್ತೆ ಸಂಪರ್ಕಕ್ಕೆ ವ್ಯತ್ಯಯ ಉಂಟಾಗಿದೆ. ಅಲ್ಲಲ್ಲಿ ಭೂಕುಸಿತ ಉಂಟಾಗಿರುವುದರಿಂದ ಜನರ ಸಂಚಾರಕ್ಕೆ ಕೂಡ ಅಡಚಣೆ ಉಂಟಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next