ಉಡುಪಿ: ಹೊಸತನದ ನೆಪದಲ್ಲಿ ಕರಾವಳಿ ಕರ್ನಾಟಕದ ಅನೇಕ ಸಂಪ್ರದಾಯ, ಸಂಸ್ಕೃತಿ, ಆಹಾರ ಪದ್ಧತಿಗಳು ನಾಶವಾತ್ತಿವೆ. ಇವುಗಳ ಸಂರಕ್ಷಣೆಗೆ ನಾವೆಲ್ಲರೂ ಪ್ರಯತ್ನಿಸಬೇಕೆಂದು ಸಂಗೀತ ನಿರ್ದೇಶಕ ವಿ. ಮನೋಹರ್ ಹೇಳಿದರು. ಅವರು ಉಡುಪಿ ತಾ.ಮಹಿಳಾ ಮಂಡಳಿಗಳ ಒಕ್ಕೂಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಂಟರ ಯಾನೆ ನಾಡವರ ಮಾತೃ ಸಂಘ, ಉಡುಪಿ ಬಂಟರ ಸಂಘ, ಲಯನೆಸ್ ಟೀಮ್ ಡ್ರೀಮ್, ಮಲ್ಪೆ ಲಯನ್ಸ್ ಮತ್ತು ಲಯನೆಸ್ ಕ್ಲಬ್‌ಗಳ ಸಹಭಾಗಿತ್ವದಲ್ಲಿ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಜರಗಿದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿದರು. ಕೇವಲ 30-40 ವರ್ಷದಲ್ಲಿ ಅವಿಭಜಿತ ದ.ಕ. ಹೊಸತನವನ್ನು ಪಡೆದುಕೊಂಡಿದೆ. ಹಳ್ಳಿಯ ತಿಂಡಿ ತಿನಸುಗಳು, ಪಾಡ್ಧನಗಳು ಕಳೆದುಹೋಗಿವೆ. ಆಹಾರ ಪದ್ಧತಿಯಲ್ಲೂ ಬದಲಾವಣೆಗಳಾಗಿವೆ. ಈ ನಿಟ್ಟಿನಲ್ಲಿ ಆಡಿಡೊಂಜಿದಿನದ ನೆಪದಲ್ಲಾದರೂ ಇವು ಉಳಿಯುವಂತಾಗಲಿ ಎಂದು ಆಶೀಸಿದರು.
ಕೆಟ್ಟದಿನಗಳಲ್ಲ, ಕಷ್ಟದ ದಿನಗಳು: ಹೆಗ್ಡೆ
ಆಷಾಢ ಮಾಸ ಕೆಟ್ಟದಿನಗಳಲ್ಲ. ಅವು ಕಷ್ಟದ ದಿನಗಳು. ಸಿರಿವಂತರಿಗೆ ಇದು ಹೆಚ್ಚು ಅನ್ವಯವಾಗದಿದ್ದರೂ ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ಇದು ಪೂರ್ಣವಾಗಿ ಅನ್ವಯವಾಗುತ್ತದೆ. ಮಳೆಗಾಲದಲ್ಲಿ ಬೇರೆ ಉತ್ಪತ್ತಿಯೇ ಇಲ್ಲದ ಸಂದರ್ಭದಲ್ಲಿ ಮನೆಯಲ್ಲಿ ಗಂಜಿ ಮಾತ್ರವೇ ಇರುತಿತ್ತು. ಆ ಸಂದರ್ಭಕ್ಕೆ ಅನುಗುಣವಾಗಿ ಹಿರಿಯರು ‘ಆಟಿ’ ಎಂದು ಕರೆದಿರಬೇಕೆಂದು ಮಾಜಿ ಸಂಸದ, ಸಚಿವ ಜಯಪ್ರಕಾಶ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಂಟರ ಸಂಘದ ಗೌರವಾಧ್ಯಕ್ಷ ಕೊಡಂಕೂರು ಜಯರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಜಿಲ್ಲಾ ಸಂಯೋಜಕಿ ವಿದ್ಯಾಲತಾ ಉದಯಕುಮಾರ ಶೆಟ್ಟಿ, ಮಲ್ಪೆ ಲಯನ್ಸ್ ಕ್ಲಬ್ ಅಧ್ಯಕ್ಷೆ ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ, ಜಯಲಕ್ಷ್ಮೀ ನಾಗಪ್ಪ ಅಮಿನ್, ಒಕ್ಕೂಟದ ಮಾಜಿ ಅಧ್ಯಕ್ಷರಾದ ಸರಳಾ ಕಾಂಚನ್, ಕಾರ್ಯದರ್ಶಿ ವಸಂತಿ ರಾವ್ ಕೊರಡ್ಕಲ್, ಸಂಘದ ಪ್ರಮುಖರಾದ ಮೋಹನ್ ಶೆಟ್ಟಿ, ತೋನ್ಸೆ ಮನೋಹರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಯಶೋದಾ ಶೆಟ್ಟಿ ಸ್ವಾಗತಿಸಿದರು. ಅಧ್ಯಕ್ಷರಾದ ಶೀಲಾ ಶೆಟ್ಟಿ ಸ್ವಾಗತಿಸಿದರು. ಮಾಲಿನಿ ಶೆಟ್ಟಿ, ಸುಷ್ಮಾ ಶಿವರಾಮ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.