ರಬಕವಿ-ಬನಹಟ್ಟಿ : ರಾಜ್ಯದಲ್ಲಿ ಅತೀ ಹೆಚ್ಚು ನೇಕಾರರನ್ನು ಹೊಂದಿರುವ ಬಾಗಲಕೋಟ ಜಿಲ್ಲೆ ಅದರಲ್ಲೂ ತೇರದಾಳ ವಿಧಾನಸಭಾ ಕ್ಷೇತ್ರ ನೇಕಾರ ಮತಕ್ಷೇತ್ರ ಎಂಬ ಖ್ಯಾತಿಗೆ ಭಾಜನವಾಗಿದ್ದು, ಎರಡು ಬಾರಿ ಮಹಾದೇವಪ್ಪ ಹಟ್ಟಿಯವರಿಗೆ ದೊರೆಯಬೇಕಿದ್ದ ಬಿಜೆಪಿ ಟಿಕೆಟ್ ಕೊನೇ ಗಳಿಗೆಯಲ್ಲಿ ಕೈತಪ್ಪಿದಾಗ ಇಂದಿನ ಶಾಸಕ ಸಿದ್ದು ಸವದಿ ಗೆಲುವಿಗೆ ಹಟ್ಟಿ ಸೇರಿದಂತೆ ನೇಕಾರ ಮುಖಂಡರು ಒಗ್ಗಟ್ಟಾಗಿ ಶ್ರಮಿಸಿ ಗೆಲ್ಲಲು ಕಾರಣವಾಗಿತ್ತು. ಇದೀಗ ನೇಕಾರ ಸಮುದಾಯದ ಮನೋಹರ ಶಿರೋಳ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷವನ್ನು ಸಂಘಟಿಸಿ, ನೇಕಾರ ಪ್ರಕೋಷ್ಠದ ಅಧ್ಯಕ್ಷರಾಗಿ ನೇಕಾರ ಮತಗಳು ಚದುರದಂತೆ ಸಂಘಟನೆ ಮೂಲಕ ಚಾಣಾಕ್ಷತೆ ಮೆರೆದಿದ್ದರು. ಬರುವ ಚುನಾವಣೆಯಲ್ಲಿ ನೇಕಾರ ಸಮುದಾಯಕ್ಕೆ ಬಿಜೆಪಿ ವರಿಷ್ಠರು ಆದ್ಯತೆ ನೀಡಿ ಮನೋಹರ ಶಿರೋಳ ಇವರನ್ನೇ ಅಭ್ಯರ್ಥಿಯಾಗಿ ಘೋಷಿಸಬೇಕೆಂದು ದೈವಮಂಡಳದ ಪ್ರಮುಖ ಶ್ರೀಶೈಲ ದಬಾಡಿ ಆಗ್ರಹಿಸಿದರು.
ಬುಧವಾರ ಬನಹಟ್ಟಿಯ ಹಟಗಾರ ದೈವಮಂಡಳದ ಕಾರ್ಯಾಲಯದಲ್ಲಿ ಜರುಗಿದ ರಬಕವಿ-ಬನಹಟ್ಟಿ, ರಾಮಪುರ, ಹೊಸೂರಿನ ನೇಕಾರ ಸಮಾಜದ ಧುರೀಣರ ಸಭೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಸಿದ್ದು ಸವದಿಯವರು ಈಗಾಗಲೇ ಎರಡು ಬಾರಿ ಜಿಲ್ಲಾಧ್ಯಕ್ಷರಾಗಿ ಮೂರು ಬಾರಿ ಶಾಸಕರಾಗಿ ನೇಕಾರ ಸಮುದಾಯದ ಬೆಂಬಲದಲ್ಲಿ ಆಯ್ಕೆಯಾಗಿದ್ದು, ಸದ್ಯ ನೇಕಾರ ಸಮುದಾಯದ ಪ್ರಬಲ ವ್ಯಕ್ತಿಯಾಗಿರುವ ಮನೋಹರ ಶಿರೋಳ ಇವರಿಗೆ ವಿಧಾನ ಪರಿಷತ್ ಸದಸ್ಯರಾಗಿ ಇಲ್ಲವೇ ನಿಗಮದ ಅಧ್ಯಕ್ಷರಾಗಿ ಆಯ್ಕೆ ಮಾಡಲು ಹಲವಾರು ಬಾರಿ ನಮ್ಮ ಸಮಾಜ ಆಗ್ರಹಿಸಿದ್ದರೂ ಬಿಜೆಪಿ ವರಿಷ್ಠರು ಮನ್ನಣೆ ನೀಡದಿರುವುದು ನಮ್ಮ ಸಮುದಾಯಕ್ಕೆ ನೋವುಂಟು ಮಾಡಿದೆ. ಆಗಿರುವ ಪ್ರಮಾದ ಸರಿ ಪಡಿಸಲು ಶಾಸಕರೇ ಮುಂದಾಗಿ ಮನೋಹರ ಶಿರೋಳ ಇವರಿಗೆ ತೇರದಾಳ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಲು ಸಹಕರಿಸಿ, ಅವರ ಗೆಲುವಿಗೆ ಶ್ರಮಿಸಬೇಕೆಂದು ಶ್ರೀಶೈಲ ಆಗ್ರಹಿಸಿದರು.
ದುಂಡಪ್ಪ ಮಾಚಕನೂರ ಮಾತನಾಡಿ ಅತೀ ಹೆಚ್ಚು ನೇಕಾರ ಮತದಾರರಿರುವ ನಮ್ಮ ಕ್ಷೇತ್ರಕ್ಕೆ ನೇಕಾರ ಅಭ್ಯರ್ಥಿಯ ಘೋಷಿಸದಿರುವುದರಿಂದ ಸತತ ಅನ್ಯಾಯವಾಗುತ್ತಿದೆ. ನೇಕಾರ ಸಮುದಾಯ ಬಿಜೆಪಿ ನಿಷ್ಠ ಸಮಾಜವಾಗಿದ್ದು, ಬಿಜೆಪಿ ಬಹುಸಂಖ್ಯಾತ ಮತದಾರರಿರುವ ನೇಕಾರ ಸಮುದಾಯದ ಮನೋಹರ ಶಿರೋಳರಿಗೆ ಟಿಕೆಟ್ ನೀಡುವ ಮೂಲಕ ಆಗಿರುವ ಪ್ರಮಾದ ಸರಿಪಡಿಸಿಕೊಳ್ಳಬೇಕೆಂದರು.
ರಾಮಣ್ಣಾ ಹುಲಕುಂದ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಸವಪ್ರಭು ಹಟ್ಟಿ ಮಾತನಾಡಿ ಜಿಲ್ಲೆಯಲ್ಲೇ ಹೆಚ್ಚಿನ ನೇಕಾರ ಮತದಾರರನ್ನು ಹೊಂದಿರುವ ತೇರದಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ನ್ನು ಮನೋಹರ ಶಿರೋಳರಿಗೆ ನೀಡುವ ಮೂಲಕ ಸಾಮಾಜಿಕ ನ್ಯಾಯ ಕಾಪಾಡಬೇಕೆಂದರು.
ಬಿಜೆಪಿ ಧುರೀಣ ಸುರೇಶ ಚಿಂಡಕ ಮಾತನಾಡಿ, ಮನೋಹರ ಶಿರೋಳಗೆ ವಿಧಾನಪರಿಷತ್ ಸ್ಥಾನ ಕೈತಪ್ಪಿದಾಗ ಶಾಸಕ ಸಿದ್ದು ಸವದಿಯವರು ನಿಗಮದ ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ ಬಹಿರಂಗವಾಗಿ ನನಗೆ ಹೇಳಿದ್ದರಾದರೂ ಕೈಮಗ್ಗ ಅಭಿವೃದ್ದಿ ನಿಗಮದ ಅಧ್ಯಕ್ಷ ಸ್ಥಾನವನ್ನು ತಾವೇ ವಹಿಸಿಕೊಂಡ ಹಿಂದಿನ ಕಾರಣ ನನಗೆ ಗೊತ್ತಿಲ್ಲವಾದರೂ ಪ್ರಬಲ ನೇಕಾರ ಸಮುದಾಯಕ್ಕೆ ಬಿಜೆಪಿ ನ್ಯಾಯ ಒದಗಿಸಲು ಸಮಾಜದ ಒಮ್ಮತದ ಅಭ್ಯರ್ಥಿ ಮನೋಹರ ಶಿರೋಳಗೆ ಈ ಬಾರಿ ಟಿಕೆಟ್ ಘೋಷಿಸಬೇಕೆಂದರು.
ಸಭೆಯಲ್ಲಿ ಬಿ.ಡಿ.ಭದ್ರನ್ನವರ, ಡಾ.ಪಿ.ವ್ಹಿ ಪಟ್ಟಣ, ಗಜಾನನ ವಜ್ರಮಟ್ಟಿ, ಮಲ್ಲಪ್ಪ ಹೂಲಿ, ಉದಯ ಅಬಕಾರ, ಪಂಡಿತ ಪಟ್ಟಣ, ಶಿವಶಂಕರ ಬಾಡಗಿ, ಬಸವಲಿಂಗಪ್ಪ ಹಲ್ಯಾಳ, ಮಹಾದೇವ ಬಾಗೇವಾಡಿ ಸೇರಿದಂತೆ ನೂರಾರು ಸದಸ್ಯರು ಉಪಸ್ಥಿತರಿದ್ದರು.