ಪಣಜಿ : ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರಕದ ಕಾರಣ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ರಾಜ್ಯದ ಪ್ರಭಾವಿ ರಾಜಕಾರಣಿ ,ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಅವರು ಮತ್ತೆ ರಾಜ್ಯ ರಾಜಕಾರಣಕ್ಕೆ ವಾಪಾಸಾಗುವ ಲಕ್ಷಣಗಳು ಗೋಚರಿಸುತ್ತಿದ್ದು ಅವರೆ ಮುಂದಿನ ಮುಖ್ಯಮಂತ್ರಿಯಾಗುವ ಲಕ್ಷಣಗಳು ಕಾಣಿಸುತ್ತಿವೆ.
40 ಸದಸ್ಯ ಬಲದ ವಿಧಾನ ಸಭೆಯಲ್ಲಿ ಬಿಜೆಪಿ 13 ಸ್ಥಾನಗಳನ್ನು ಪಡೆದಿದ್ದು, ಕಾಂಗ್ರೆಸ್ 17 ಸ್ಥಾನಗಳನ್ನು ಪಡೆದು ದೊಡ್ಡ ಪಕ್ಷವಾಗಿದೆ. ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ ಮತ್ತು ಗೋವಾ ವಿಕಾಸ್ ಪಾರ್ಟಿ ತಲಾ 3 ಸ್ಥಾನಗಳನ್ನು ಗೆದ್ದಿದ್ದು, ಪಕ್ಷೇತರರು 3 ಸ್ಥಾನಗಳನ್ನು , ಎನ್‌ಸಿಪಿ 1 ಸ್ಥಾನ ಗೆದ್ದಿದೆ.
ಈಗಾಗಲೇ ಎಂಜಿಪಿ ಮನೋಹರ್ ಪರ್ರಿಕರ್ ಅವರಿಗೆ ಸಿಎಂ ಹುದ್ದೆ ನೀಡುವುದಾದರೆ ರಾಜ್ಯದ ಅಭಿವೃದ್ಧಿಯ ಹಿತದೃಷ್ಟಿಯಿಂದ ಬಿಜೆಪಿಗೆ ಬೆಂಬಲ ನೀಡುವುದಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಪತ್ರ ಬರೆದಿದೆ. ಎನ್‌ಸಿಪಿಯ ಏಕಮಾತ್ರ ಶಾಸಕನೂ ಇದೇ ಅಭಿಪ್ರಾಯ ವ್ಯಕ್ತ ಪಡಿಸಿರುವುದಾಗಿ ವರದಿಯಾಗಿದೆ.
ಗೋವಾ ವಿಕಾಸ್ ಪಾರ್ಟಿಯ ಮನವೊಲಿಸುವು ಕಸರತ್ತು ಆರಂಭವಾಗಿದ್ದು ,ಓರ್ವ ಪಕ್ಷೇತರ ಬೆಂಬಲ ನೀಡಿದರೆ ಬಹುಮತಕ್ಕೆ ಬೇಕಾದ 21 ಶಾಸಕರ ಸಂಖ್ಯೆ ಬಿಜೆಪಿಗೆ ಲಭ್ಯವಾಗುತ್ತದೆ.
ಬಿಜೆಪಿ ಮತ್ತು ರಾಜ್ಯಕ್ಕೆ ಸಮರ್ಥ ನಾಯಕತ್ವ ನೀಡುವ ಕಾರಣಕ್ಕಾಗಿ ಮನೋಹರ್ ಪರ್ರಿಕರ್ ಅವರು ರಕ್ಷಣಾ ಸಚಿವ ಹುದ್ದೆಗೆ ರಾಜೀನಾಮೆ ನೀಡಿ ಮತ್ತೆ ಮುಖ್ಯಮಂತ್ರಿ ಗಾದಿಗೆ ಏರುತ್ತಾರೋ ಎಂದು ಕಾದು ನೋಡಬೇಕಾಗಿದೆ.