ನೆಲಮಂಗಲ: ಐತಿಹಾಸಿಕ ಹಿನ್ನಲೆ ಹೊಂದಿರುವ ಐತಿಹಾಸಿಕ ಸ್ಥಳ ಮಣ್ಣೆಯ ಇತಿಹಾಸ ಮಣ್ಣು ಮಾಡಬೇಡಿ ಎಂದು ಇತಿಹಾಸ ತಜ್ಞ ಡಾ.ಹೆಚ್.ಎಸ್ ಗೋಪಾಲ್ ರಾವ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 6ನೇ ಶತಮಾನದಲ್ಲಿ ಗಂಗರ ರಾಜಧಾನಿಯಾಗಿದ್ದ ಮಣ್ಣೆಯಲ್ಲಿ ಈವರೆಗೂ 54 ಶಾಸನಗಳು, ನೂರಾರು ದೇವಾಲಯಗಳು, ಜೈನ ಬಸದಿಗಳ ಜೊತೆ ಹುಡುಕಿದೊಷ್ಟು ಪುರಾವೆ ಸಿಗುತಿವೆ.
ಹೀಗಿದ್ದರೂ ಸರ್ಕಾರ ಹಾಗೂ ಸಂಬಂಧ ಪಟ್ಟ ಇಲಾಖೆಗಳು ಮಣ್ಣೆಯನ್ನು ನಿರ್ಲಕ್ಷಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ಪಟ್ಟಣದ ಬಸವಣ್ಣ ದೇವರಮಠದ ಸಭಾಂಗಣದಲ್ಲಿ ಸ್ವಾಮಿವಿವೇಕಾನಂದ ಯುವ ಪ್ರತಿಷ್ಠಾನದ ವತಿಯಿಂದ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು. ದೇಶದ ಹಲವು ಇತಿಹಾಸ ತಜ್ಞರು ಮಣ್ಣೆಯ ಐತಿಹಾಸಿಕ ಹಿನ್ನೆಲೆ ಕಂಡು ಬೆರಗಾಗಿದ್ದಾರೆ.
ಮಣ್ಣೆಯ ಸಿಕ್ಕ ಇತಿಹಾಸದ ಕುರುಹುಗಳು ಆರನೇ ಶತಮಾನದ ಕಾರ್ಯವೈಖರಿಯನ್ನು ಸಾಕ್ಷಿ ಸಮೇತ ಪ್ರಸ್ತುತ ಪಡಿಸಿದೆ. ಮಣ್ಣೆಯಲ್ಲಿ ಪತ್ತೆಯಾದ ಶಾಸನಗಳು, ಸ್ಮಾರಕಗಳು ಸಂರಕ್ಷಣೆ ಮಾಡಿ ಎಂದು ಪುರಾತತ್ವ ಇಲಾಖೆ ಹಾಗೂ ಸ್ಥಳೀಯ ಸರ್ಕಾರಕ್ಕೆ ಮನವಿ ಮಾಡಿದರೂ, ಆರ್ಥಿಕ ಕಾರಣ ನೀಡಿ ಮಣ್ಣೆಯನ್ನು ಸಂಪೂರ್ಣ ನಿರ್ಲಕ್ಷಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಸಿದರು.
ಮಣ್ಣೆ ಗಂಗರ ರಾಜಧಾನಿ, ಸೂರ್ಯದೇವಾಲಯ ಹೊಂದಿದ ಸ್ಥಳ, ಶಾಸನಗಳ ದಾಖಲೆಯ ನೆಲ ಎಂಬ ನೆನಪು ಮುಂದಿನ ಪೀಳಿಗೆಗೆ ತಿಳಿಯಲು ಮಣ್ಣೆಯನ್ನು ಸಂರಕ್ಷಿಸಲು ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಮುಂದಾಗಬೇಕೆಂದು ಮನವಿ ಮಾಡಿದರು.
ವಿಗ್ರಹದ ಕಳವು: ಭಾರತೀಯ ಸೇನೆಯ ಯೋಧ ಶಿವಕುಮಾರ್ ಮಾತನಾಡಿ , ತಾಲೂಕಿನ ಮಣ್ಣೆಯಲ್ಲಿ ಪತ್ತೆಯಾದ ಗಂಗರಕಾಲದ ರಾಜಧಾನಿ ಹಾಗೂ 6 ನೇ ಶತಮಾನದ ಪುರಾವೆ ನೀಡಿದ್ದ ಸೂರ್ಯನ ವಿಗ್ರಹ 2009ರಲ್ಲಿ ಕಳ್ಳತನವಾಗಿದೆ. ಅಲ್ಲದೇ ಇನ್ನು ಹಲವು ವಿಗ್ರಹಗಳು, ಪುರಾವೆಯ ಕುರುಹುಗಳು, ಕಳ್ಳತನವಾಗಿರುವ ಶಂಕೆಯಿದ್ದು, ದೇವಾಲಯಗಳು ಕುಸಿಯುವ ಹಂತ ತಲುಪಿದ್ದು, ಮುಂದಿನ ದಿನಗಳಲ್ಲಿ ರಕ್ಷಣೆ ಮಾಡದಿದ್ದರೆ, ಮತ್ತಷ್ಟು ವಿಗ್ರಹಗಳು ಕಳವಾಗುವ ಆತಂಕ ಎದುರಾಗಿದೆ ಎಂದ ಆತಂಕ ವ್ಯಕ್ತಪಡಿಸಿದರು. ತಿಳಿಸಿದರು.
ವಸ್ತು ಸಂಗ್ರಹಾಲಯ ಮಾಡಿ: ಮಣ್ಣೆ ಗ್ರಾಮದ ಸುತ್ತಮುತ್ತಲ ಪ್ರದೇಶದಲ್ಲಿ ಗುಂಡಿ ತೆಗೆಯುವ ಸಂದರ್ಭ, ಗದ್ದೆಗಳಲ್ಲಿ, ಚರಂಡಿ ಕಾಮಗಾರಿ ವೇಳೆ ದೊರೆತ ವಿಗ್ರಹಗಳು, ಶತಮಾನಗಳ ಕಲಾಕೃತಿಗಳು, ಶಾಸನಗಳನ್ನು ಸಂಗ್ರಹಣೆ ಮಾಡಿ ವಸ್ತು ಸಂಗ್ರಹಾಲಯ ನಿರ್ಮಿಸಬೇಕೆಂದು ಆಗ್ರಹಿಸಿದರು. ಸ್ವಾಮಿವಿವೇಕಾನಂದ ಯುವ ಪ್ರತಿಷ್ಠಾನದ ನಿರ್ದೇಶಕ ವಿಜಯಕುಮಾರ್, ಸದಸ್ಯ ನವೀನ್‌ಕುಮಾರ್ ಹಾಗೂ ಪ್ರತಿಷ್ಟಾನದ ಪದಾಧಿಕಾರಿಗಳು ಇದ್ದರು.