ನವದೆಹಲಿ: ದೇಶದಿಂದ ಅಪೌಷ್ಟಿಕತೆ ನಿವಾರಿಸಬೇಕಾಗಿದೆ. ಅದಕ್ಕಾಗಿ ಮುಂದಿನ ತಿಂಗಳು ಹಬ್ಬಗಳ ಜತೆಗೆ ಅಪೌಷ್ಟಿಕತೆಯ ವಿರುದ್ಧ ಜಾಗೃತಿ ಮೂಡಿಸಿ, ಪೋಷಣ ಮಾಸವನ್ನು ಆಚರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಭಾನುವಾರ 92ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಲಭಿಸಿ 75 ವರ್ಷಗಳು ಪೂರ್ಣಗೊಂಡು ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಇಂಥ ಕಾರ್ಯಕ್ರಮಗಳು ಅಗತ್ಯವಾಗಿ ಬೇಕು ಎಂದು ಪ್ರತಿಪಾದಿಸಿದರು.
“ಮುಂದಿನ ತಿಂಗಳು ಹಬ್ಬಗಳ ಜತೆಗೆ ಸೆ.1ರಿಂದ ಸೆ.30ರ ವರೆಗೆ ಅಪೌಷ್ಟಿಕತೆ ನಿವಾರಿಸುವ ನಿಟ್ಟಿನಲ್ಲಿ ಪೌಷ್ಟಿಕಾಂಶ ಮಾಸಾಚರಣೆ ನಡೆಸಲಾಗುತ್ತದೆ. ಎಲ್ಲರೂ ಅದರಲ್ಲಿ ಭಾಗವಹಿಸಬೇಕು’ ಎಂದು ಮನವಿ ಮಾಡಿದ್ದಾರೆ. ಅದಕ್ಕಾಗಿ ತಾಂತ್ರಿಕ ಸೌಲಭ್ಯಗಳನ್ನೂ ಬಳಕೆ ಮಾಡಿಕೊಳ್ಳಬೇಕು. ಸಾರ್ವಜನಿಕರೂ ಅದರಲ್ಲಿ ಭಾಗಿಯಾಗಬೇಕು ಎಂದರು. ಇಂಥ ಕ್ರಮದ ಮೂಲಕ ದೇಶವನ್ನು ಅಪೌಷ್ಟಿಕತೆಯಿಂದ ದೂರ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
“ಸ್ವರಾಜ್’ ಧಾರಾವಾಹಿ ನೋಡಿ:
ದೇಶದ ಸ್ವಾತಂತ್ರ್ಯ ಹೋರಾಟದ ಕಥಾ ವಸ್ತುವನ್ನು ಆಧರಿಸಿ ಸಿದ್ಧಪಡಿಸಿದ “ಸ್ವರಾಜ್’ ಧಾರಾವಾಹಿಯನ್ನು ಎಲ್ಲರೂ ವೀಕ್ಷಿಸಬೇಕು ಎಂದು ಪ್ರಧಾನಿ ಮನವಿ ಮಾಡಿಕೊಂಡರು. ವಿದ್ಯಾರ್ಥಿಗಳು ಕೂಡ ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಇದೇ ಮಾದರಿಯ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದರು.
ಇದರಿಂದಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದರಿಗೆ ಗೌರವ ನೀಡಿದಂತಾಗುವತ್ತದೆ. ಪ್ರತಿ ಭಾನುವಾರ ರಾತ್ರಿ 9ಗಂಟೆಗೆ ದೂರದರ್ಶನದಲ್ಲಿ ಈ ಕಾರ್ಯಕ್ರಮ ಪ್ರಸಾರವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.