ಎಚ್.ಶಿವರಾಜು
ಮಂಡ್ಯ: ರೈತರ ಆರ್ಥಿಕ ಜೀವನಕ್ಕೆ ಸಹಕಾರಿಯಾಗಿದ್ದ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್‌ಮುಲ್)ದಲ್ಲಿ ನಡೆದಿದ್ದ ಹಾಲು-ನೀರು ಮಿಶ್ರಿತ ಹಗರಣವು ಪ್ರಸ್ತುತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಹಾಗೂ ಕೆಆರ್‌ಎಸ್ ಜಲಾಶಯದ ಬಿರುಕು ಚರ್ಚೆಯಲ್ಲಿ ಗೌಣವಾಗಿದೆ.
ಸುಮಲತಾ ಸದ್ದು: ಮನ್‌ಮುಲ್ ಹಗರಣವು ಇಡೀ ರಾಜ್ಯಾದ್ಯಂತದೊಡ್ಡ ಚರ್ಚೆಯಾಗಿತ್ತು. ರಾಜ್ಯದಹಲವು ಹಾಲು ಒಕ್ಕೂಟಗಳಿಗೂ ವ್ಯಾಪಿಸಿದೆ. ಇದನ್ನು ತಡೆಗಟ್ಟ ಬೇಕು. ಅಲ್ಲದೆ, ಸಿಬಿಐ ತನಿಖೆಗೆ ವಹಿಸಬೇಕು ಎಂಬ ಆಗ್ರಹ, ಹೋರಾಟಗಳು ನಡೆದವು. ಆದರೆ ಸಂಸದೆ ಸುಮಲತಾ ಅಂಬರೀಷ್ ಸಿಡಿಸಿದ ಕೆಆರ್‌ಎಸ್‌ನಲ್ಲಿ ಬಿರುಕು ಹಾಗೂ ಅಕ್ರಮ ಗಣಿಗಾರಿಕೆಯ ಸದ್ದು ಮನ್ ಮುಲ್ ಹಗರಣವನ್ನು ಮರೆಯುವಂತೆ ಮಾಡಿದೆ.
ಗೌಪ್ಯವಾಗಿಯೇ ಮಾಹಿತಿ ಕಲೆ: ಸಂಸದೆ ಸುಮಲತಾ ಹಾಗೂ ಜೆಡಿಎಸ್ ನಾಯಕರ ನಡುವಿನ ವಾಕ್ಸಮರದಿಂದ ಮನ್‌ಮುಲ್ ಹಗರಣದ ತನಿಖೆ ಯಾವ ರೀತಿ ನಡೆಯುತ್ತಿದೆ ಎಂಬುದು ಜನರಿಗೆ ತಿಳಿಯದಂತಾಗಿದೆ. ಜೂ.30ರಂದು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿ ಆದೇಶ ಹೊರಡಿಸಿತ್ತು. ಅದರಂತೆ ಪ್ರಕರಣವನ್ನು ಮಂಡ್ಯ ಪೊಲೀಸರು ಸಿಐಡಿಗೆ ವರ್ಗಾಯಿಸಿದ್ದರು. ಅದಾದ ಬಳಿಕ ಯಾವ ರೀತಿ ತನಿಖೆ ನಡೆಯುತ್ತಿದೆ ಎಂಬುದರ ಬಗ್ಗೆ ಮಾಹಿತಿಯೇ ಇಲ್ಲದಂತಾಗಿದ್ದು, ಗೌಪ್ಯವಾಗಿಯೇ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಮನ್‌ಮುಲ್‌ನ ಮೂಲಗಳಿಂದ ತಿಳಿದು ಬಂದಿದೆ.
ಜಿಲ್ಲೆಯಲ್ಲಿ ಹಗರಣಗಳದ್ದೇ ಸದ್ದು: ಜಿಲ್ಲೆಯಲ್ಲಿ ಹಗರಣಗಳ ಸದ್ದೇ ಕೇಳಿ ಬರುತ್ತಿದೆ. ಮೈಷುಗರ್ ಕಾರ್ಖಾನೆಯಲ್ಲಿನ ಅನುದಾನ ದುರುಪಯೋಗಕ್ಕೆ ಸಂಬಂಧಿಸಿದಂತೆ ಹೋರಾಟಗಾರರು, ಕಬ್ಬು ಬೆಳೆಗಾರರು ಸಿಬಿಐ ತನಿಖೆ ನಡೆಸಿ ಭ್ರಷ್ಟಾಚಾರದಿಂದ ಕಾರ್ಖಾನೆಯನ್ನು ಈ ಸ್ಥಿತಿಗೆ ತಂದವರ ವಿರುದ್ಧ ಕ್ರಮ ಕೈಗೊಂಡು ಕಾರ್ಖಾನೆ ಆರಂಭಿಸುವ ಒತ್ತಾಯಗಳು ಕೇಳಿ ಬಂದವು. ನಂತರ ಜಿಲ್ಲೆಯ ರೈತರ ಆರ್ಥಿಕ ಸಂಕಷ್ಟ ನಿವಾರಣೆಗೆ ದಾರಿಯಾಗಿದ್ದ ಮನ್‌ಮುಲ್ ಹಗರಣವು ಸಂಚಲನವನ್ನೇ ಸೃಷ್ಟಿಸಿತು. ಇದಕ್ಕೂ ಹಿಂದೆ ಇದ್ದ ಕಾಂಗ್ರೆಸ್ ಆಡಳಿತ ಮಂಡಳಿಯಲ್ಲೂ ರೈತರ ಪ್ರತೀ ಲೀಟರ್ ಹಾಲಿನಿಂದ ಕಟಾವು ಮಾಡಲಾಗಿದ್ದ ಹಣದಿಂದ ಮೆಗಾ ಡೇರಿ ನಿರ್ಮಾಣ ಮಾಡಲಾಗುತ್ತಿತ್ತು. ಆಗಲೂ ಭ್ರಷ್ಟಾಚಾರ ನಡೆದಿತ್ತು. ಈಗ ಅಕ್ರಮ ಗಣಿಗಾರಿಕೆ ಹಗರಣವೂ ಜಿಲ್ಲೆಯನ್ನು ಸುತ್ತಿಕೊಂಡಿದೆ. ಇದರ ಜತೆಗೆ ಕೆಆರ್‌ಎಸ್ ಜಲಾಶಯದ ಬಿರುಕು ವಿಚಾರವೂ ದೊಡ್ಡಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.