ಮಂಡ್ಯ: ಮನ್‌ಮುಲ್ ಹಾಲು-ನೀರು ಹಗರಣವನ್ನು ನಿಷ್ಪಕ್ಷಪಾತವಾಗಿ ಉನ್ನತ ಮಟ್ಟದ ತನಿಖೆ ನಡೆಸಿ ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರೆ ಮಾನನಷ್ಟ ಮೊಕದ್ದಮೆ ಹಾಕುವ ಬೆದರಿಕೆಗೆ ಹಾಕುತ್ತಿರುವುದು ಸರಿಯಲ್ಲ.ಇದಕ್ಕೆ ಎಂದಿಗೂ ಹೆದರುವುದಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಹೇಳಿದರು.
ಪ್ರಕರಣದ ಆರೋಪಿಗಳ ವಿರುದ್ಧ ನೀಡಿರುವಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದಿದ್ದಾರೆ. ಆದರೆ ನಡೆದಿರುವ ಅನ್ಯಾಯ, ಅಕ್ರಮಕ್ಕೆ ಎಂದಿಗೂ ಸಹಕಾರ ನೀಡುವುದಿಲ್ಲ. ತಪ್ಪು ಯಾರೇ ಮಾಡಿದ್ದರೂ ತನಿಖೆಯಿಂದ ಬಹಿರಂಗವಾಗಿ ಆರೋಪಿಗಳಿಗೆ ಶಿಕ್ಷೆಯಾಗಬೇಕು. ಹಾಲು ಉತ್ಪಾದಕರ ಹಿತ ಕಾಯಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳನ್ನು ಅಮಾನತು, ವರ್ಗಾವಣೆ ಮಾಡಿದರೆ ಏನು ಪ್ರಯ ಜನವಿಲ್ಲ. ಅವರನ್ನು ಬಂಧಿಸಿ ತನಿಖೆ ನಡೆಸಬೇಕು. ಟ್ಯಾಂಕರ್‌ಗಳ ಟೆಂಡರ್ ಪ್ರಕ್ರಿಯೆ ಯಾವಾಗ ಆಗಿದೆ, ವಾಹನ ಸಂಖ್ಯೆ ಬಗ್ಗೆ ತನಿಖೆ ನಡೆಸಬೇಕು. ಈ ಬಗ್ಗೆ ಆಯಾಯ ತಹಶೀಲ್ದಾರ್ ಅವರಿಗೆ ದೂರು ನೀಡಲಾಗುವುದು ಎಂದು ಹೇಳಿದರು.
ಟೆಂಡರ್ ಆಗಿರುವ ಟ್ಯಾಂಕರ್ ವಾಹನ ಸಂಖ್ಯೆಯೇ ಬೇರೆ. ಮಾರ್ಗಗಳಲ್ಲಿ ಓಡಾಡುತ್ತಿರುವ ವಾಹನಗಳೇ ಬೇರೆಯಾಗಿದೆ. ಬಮುಲ್‌ನಲ್ಲಿ ಬ್ಲಾಕ್‌ಲಿಸ್ಟ್‌ಗೆ ಹಾಕಿರುವ ಗುತ್ತಿಗೆದಾರರಿಗೆ ಟೆಂಡರ್ ನೀಡಿದ್ದಾರೆ. ಇದಕ್ಕೆ ಆಡಳಿತ ಮಂಡಳಿ ಸದಸ್ಯರು ಉತ್ತರಿಸಬೇಕು. ಟೆಂಡರ್ ನೀಡಿರುವ ಟ್ಯಾಂಕರ್‌ಗಳಲ್ಲಿ 40ಕ್ಕೂ ಹೆಚ್ಚು ಟ್ಯಾಂಕರ್ ಬದಲಾಗಿದೆ. ಮನ್‌ಮುಲ್‌ನಲ್ಲಿನ ಸಿಸಿಟಿವಿಯನ್ನು ಪೊಲೀಸರು ವಶಕ್ಕೆ ಪಡೆದು ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಪ್ರತಿಕ್ರಿಯಿಸಿಲ್ಲ: ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ, ಎಸ್‌ಪಿ ಅವರನ್ನು ಭೇಟಿ ಮಾಡಿ ಮಾಹಿತಿ ಪಡೆಯಲಾಗುವುದು. ನಂತರ ಕೆಪಿಸಿಸಿ ಅಧ್ಯಕ್ಷ ಡಿ. ಕೆ.ಶಿವಕುಮಾರ್, ಶಾಸಕಾಂಗ ಪಕ್ಷದ ನಾಯಕಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಉನ್ನತ ತನಿಖೆ ನಡೆಸುವಂತೆ ಒತ್ತಾಯಿಸಲಾಗುವುದು. ಕೋಟ್ಯಂತರ ರೂಪಾಯಿ ಹಗರಣ ಆಗಿದ್ದರೂ ಕೆಎಂಎಫ್ ಅಧ್ಯಕ್ಷ ಸೇರಿದಂತೆ ಯಾರೂಪ್ರತಿಕ್ರಿಯಿಸಿಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಮೋಹನ್ ಕುಮಾರ್, ಯುವ ಘಟಕದ ಅಧ್ಯಕ್ಷ ವಿಜಯಕುಮಾರ್, ಮುಖಂಡರಾದ ಸಿದ್ದರಾಮೇಗೌಡ, ಸಿ.ಆರ್.ರಮೇಶ್, ಸುರೇಶ್ ಕಂಠಿ, ಸಿ.ಎಂ.ದ್ಯಾವಪ್ಪ, ರುದ್ರಪ್ಪ ಇದ್ದರು.