ಮದ್ದೂರು: ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ನಡೆದಿರುವ ಹಾಲು-ನೀರು ಹಗರಣವನ್ನು ಸಿಬಿಐ ತನಿಖೆಗೆ ಒಳಪಡಿಸುವಂತೆ, ಅಕ್ರಮವೆಸಗಿರುವ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದ ಬಳಿ ಜಮಾವಣೆಗೊಂಡ ಸಂಘಟನೆ ಕಾರ್ಯಕರ್ತರು ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ ತಪ್ಪಿತಸ್ಥ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಮೆಗಾ ಡೇರಿ ಕಾಮಗಾರಿ ಸಂಬಂಧ 72 ಕೋಟಿ ರೂ. ಅವ್ಯವಹಾರ ನಡೆದಿದ್ದು, ಸರ್ಕಾರ ಸೂಕ್ತ ತನಿಖೆ ನಡೆಸಿ ಹಣವನ್ನು ವಸೂಲಿ ಮಾಡುವ ಜತೆಗೆ ರಾಜ್ಯಾದ್ಯಂತ ಒಕ್ಕೂಟಗಳ ವತಿಯಿಂದ ಗ್ರಾಹಕರಿಗೆ ಮಾರಾಟ ಮಾಡುವ ಹಾಲಿನ ದರ ಏಕರೂಪವಾಗಿದ್ದು, ಆದರೆ ರೈತರಿಂದ ಒಕ್ಕೂಟಗಳು ಖರೀದಿಸುವ ಹಾಲಿನ ದರ ಒಂದೊಂದು ರೀತಿಯಲ್ಲಿದ್ದು ಕೂಡಲೇ ಸರ್ಕಾರ ಏಕ ಖರೀದಿ ದರ ನಿಗದಿ ಮಾಡಿ ಪ್ರತಿ ಲೀ.ಗೆ 35 ರೂ.ನೀಡುವಂತೆ ಆಗ್ರಹಿಸಿದರು.
ಸಿಬಿಐ ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿ ತಾಲೂಕಿನ ಗೆಜ್ಜಲಗೆರೆ ಹಾಲು ಒಕ್ಕೂಟದ ಬಳಿ ಜು.13ರಂದು ರೈತ ಸಂಘಟನೆ ವತಿಯಿಂದ ಹಾಲು ಉತ್ಪಾದಕರು ಮತ್ತು ರೈತರ ಬೃಹತ್ ಧರಣಿ ಹಮ್ಮಿಕೊಂಡಿರುವುದಾಗಿ ಸಂಘಟನೆ ಜಿಲ್ಲಾಧ್ಯಕ್ಷ ಕೆಂಪುಗೌಡ ತಿಳಿಸಿದ್ದಾರೆ.
ಪ್ರತಿಭಟನೆ ವೇಳೆ ಸಂಘಟನೆ ತಾಲೂಕು ಅಧ್ಯಕ್ಷ ಆರ್.ಎಸ್.ಸೀತಾರಾಂ, ಪದಾಧಿಕಾರಿಗಳಾದ ಕೀಳಘಟ್ಟ ನಂಜುಂಡಯ್ಯ, ಲಿಂಗಪ್ಪಾಜಿ, ರವಿಕುಮಾರ್, ನಾಗರಾಜು, ಪುಟ್ಟಸ್ವಾಮಿ, ಸಿದ್ದೇಗೌಡ, ರವಿಕುಮಾರ್, ವರದರಾಜು, ಜಿ.ಎ.ಶಂಕರ್, ಚಂದ್ರು, ಬೋರಯ್ಯ, ಚನ್ನಪ್ಪ ನೇತೃತ್ವ ವಹಿಸಿದ್ದರು.