ಹೊಸದಿಲ್ಲಿ : ಕರ್ನಾಟಕದ ಚುನಾವಣೆಯ ಭರ್ಜರಿ ಪ್ರಚಾರದಲ್ಲಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ.
ಪತ್ರದಲ್ಲಿ ‘ಹಿಂದೆ, ಭಾರತದ ಎಲ್ಲಾ ಪ್ರಧಾನ ಮಂತ್ರಿಗಳು ಸಾರ್ವಜನಿಕ ಅಥವಾ ಖಾಸಗಿ ಕಾರ್ಯಕ್ರಮಗಳಲ್ಲಿ ಅಪಾರ ಘನತೆ ಮತ್ತು ಮಹತ್ವವನ್ನು ಉಳಿಸಿಕೊಂಡಿದ್ದಾರೆ. ಪ್ರಧಾನ ಮಂತ್ರಿ ಹುದ್ದೆಗೆ ನಮ್ಮ ಸಂವಿಧಾನದಲ್ಲಿ ತನ್ನದೇ ಆದ ಗೌರವವಿದೆ. ಆದರೆ ಮೋದಿ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಅನಧಿಕೃತ ಭಾಷೆ ಬಳಕೆ ಮಾಡುತ್ತಿದ್ದು , ಅವರ ಭಾಷಣ ಬೆದರಿಸುವಂತಿದೆ ಎಂದು ಬರೆದಿದ್ದಾರೆ.
‘ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಿಯೊಬ್ಬರು ಬಳಸಬೇಕಾದ ಭಾಷೆಯನ್ನು ನರೇಂದ್ರ ಮೋದಿ ಅವರು ಬಳಸುತ್ತಿಲ್ಲ. ಸಾರ್ವಜನಿಕವಾಗಿ ಇಂತಹ ಮಾತುಗಳು ಮತ್ತು ನಡವಳಿಕೆ ಆಕ್ಷೇಪಾರ್ಹವಾದುದ್ದು. ಅವರು ಬಳಕೆ ಮಾಡಿರುವ ಶಬ್ಧಗಳು ರಾಷ್ಟ್ರದ ಶಾಂತಿ ಭಂಗಕ್ಕೆ ಕಾರಣವಾಗಬಹುದು’ ಎಂದು ಬರೆಯಲಾಗಿದೆ.
ಹುಬ್ಬಳ್ಳಿಯಲ್ಲಿ ಮೇ 6 ರಂದು ಮಾಡಿದ ಭಾಷಣದ ಸಾಲುಗಳು ಮತ್ತು ವಿಡಿಯೋದ ಲಿಂಕ್ ಕೂಡ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.
‘ಘನ ಹುದ್ದೆಯಲ್ಲಿರುವ ಸಂವಿಧಾನದ ಮುಖ್ಯಸ್ಥರಾಗಿರುವ ರಾಷ್ಟ್ರಪತಿಗಳಾದ ನೀವು ಪ್ರಧಾನ ಮಂತ್ರಿ ಮತ್ತು ಅವರ ಸಂಪುಟ ಸದಸ್ಯರಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಬೇಕು’. ಎಂದು ಪತ್ರದಲ್ಲಿ ಬರೆದಿದ್ದಾರೆ.
ಡಾ.ಸಿಂಗ್ ಅವರ ಸಹಿಯೊಂದಿಗೆ ಇತರ ಕೆಲ ಕಾಂಗ್ರೆಸ್ ನಾಯಕರ ಸಹಿ ಪತ್ರದಲ್ಲಿದೆ.