ನವದೆಹಲಿ: ಸಿಖ್ಖರ ಧರ್ಮಗುರು ಗುರುನಾನಕ್‌ರ 550ನೇ ಜಯಂತಿ ಹಿನ್ನೆಲೆಯಲ್ಲಿ ನ.9ರಂದು ಕರ್ತಾರ್ಪುರ ಸಾಹಿಬ್‌ಗ ಪ್ರಯಾಣಿಸಲು ಹಾಗೂ ಕರ್ತಾರ್ಪುರ ಕಾರಿಡಾರ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಸಮ್ಮತಿಸಿದ್ದಾರೆ. ಪಾಕಿಸ್ತಾನದಲ್ಲಿ ನಡೆಯುವ ಕರ್ತಾರ್ಪುರ ಕಾರಿಡಾರ್ ಉದ್ಘಾಟನೆ ಕಾರ್ಯಕ್ರಮಕ್ಕೆ ಪಾಕಿಸ್ತಾನ ಸರ್ಕಾರ ಮನಮೋಹನ ಸಿಂಗ್‌ರನ್ನು ಆಹ್ವಾನಿಸಿತ್ತು. ಆದರೆ ಈಗ, ಪಂಜಾಬ್ ಸರ್ಕಾರವೇ ಆಹ್ವಾನ ನೀಡಿರುವುದರಿಂದ ಭಾರತದ ಕಾರ್ಯಕ್ರಮದಲ್ಲಿ ಇವರು ಭಾಗವಹಿಸಲಿದ್ದಾರೆ. ಈ ಕುರಿತು ಗುರುವಾರ ಮನಮೋಹನ ಸಿಂಗ್‌ರನ್ನು ಭೇಟಿ ಮಾಡಿ ಆಹ್ವಾನ ನೀಡಿದ ಪಂಜಾಬ್ ಸಿಎಂ ಕ್ಯಾ. ಅಮರಿಂದರ್ ಸಿಂಗ್, ಎರಡೂ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಕೋರಿಕೊಂಡಿದ್ದಾರೆ. ಇದಕ್ಕೆ ಮನಮೋಹನ ಸಿಂಗ್ ಸಮ್ಮತಿಸಿದ್ದಾರೆ. ಇದೇ ವೇಳೆ, ರಾಷ್ಟ್ರಪತಿ ರಾಮನಾಥ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನೂ ಅಮರಿಂದರ್ ಸಿಂಗ್ ಆಹ್ವಾನಿಸಿದ್ದು, ಅವರು ವಿನಂತಿಗೆ ಸಮ್ಮತಿ ವ್ಯಕ್ತಪಡಿಸಿದ್ದಾರೆ ಎಂದಿದ್ದಾರೆ. ಕರ್ತಾರ್ಪುರ ಕಾರಿಡಾರ್ ಉದ್ಘಾಟನೆ ಕಾರ್ಯಕ್ರಮದ ವಿವರಗಳು ಇನ್ನಷ್ಟೇ ಅಂತಿಮ ಗೊಳ್ಳಬೇಕಿದ್ದು, ಪಾಕಿಸ್ತಾನ ದೊಂದಿಗೆ ಮಾತುಕತೆ ನಡೆಸಿ ಕೇಂದ್ರ ಸರ್ಕಾರ ಅಂತಿಮಗೊಳಿಸಲಿದೆ. ನ.9 ರಂದು ಕರ್ತಾರ್ಪುರ ಕಾರಿಡಾರ್ ಉದ್ಘಾಟನೆ ಯಾಗಲಿದ್ದು, ನ. 12ರಿಂದ ಗುರುನಾನಕರ 550ನೇ ಜಯಂತಿ ಕಾರ್ಯಕ್ರಮಗಳು ಆರಂಭವಾಗಲಿವೆ. ಅಂದು ಲೋಧಿ ಸುಲ್ತಾನ್‌ಪುರ ಲೋಧಿಯಲ್ಲಿ ಮುಖ್ಯ ಕಾರ್ಯಕ್ರಮ ನಡೆಯಲಿದೆ.
ಈ ಮಧ್ಯೆ ಗುರುನಾನಕರ ಜಯಂತಿ ನಿಮಿತ್ತ ರಾಜ್ಯ ಸರ್ಕಾರ ಹಮ್ಮಿಕೊಂಡ ಕಾರ್ಯಕ್ರಮಗಳ ಸಮಗ್ರ ವಿವರವನ್ನು ಅಮರಿಂದರ್ ಸಿಂಗ್ ಗುರುವಾರ ಸುದ್ದಿಗೋಷ್ಠಿ ನಡೆಸಿ ನೀಡಿದ್ದಾರೆ.