ಬೀದರ: ಸಿಎಂ ಸಿದ್ದರಾಮಯ್ಯ ಮಾಂಸ ಸೇವಿಸಿ ಸುಕ್ಷೇತ್ರ ಧರ್ಮಸ್ಥಳ ದೇವಸ್ಥಾನ ಪ್ರವೇಶಿಸಿ ಅಪವಿತ್ರ ಮಾಡಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರು ಉಪವಾಸ ವ್ರತ ಮಾಡಿ, ಶ್ರೀ ಮಂಜುನಾಥನ ದರ್ಶನ ಪಡೆದು ಪವಿತ್ರ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದರು. ನಗರದ ಗಣೇಶ ಮೈದಾನದಲ್ಲಿ ರವಿವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಮಾಂಸ ತಿಂದು ದರ್ಶನ ಪಡೆದಿರುವುದಾಗಿ ಹೇಳುವುದು ಅವರ ಖ್ಯಾತಿ ಅಂದುಕೊಂಡಿದ್ದಾರೆ. ಏನು ತಿಂದು ದೇವರ ದರ್ಶನ
ಮಾಡಬೇಕೆಂಬ ಅರಿವು ಅವರಿಗೆ ಇಲ್ಲ. ಅಹಿಂದ ಜಪ ಮಾಡುವ ಸಿಎಂ ಮಹಾತ್ಮರನ್ನು ಮರೆತು ಟಿಪ್ಪು ಸ್ಮರಣೆ ಮಾಡುತ್ತಿದ್ದಾರೆ.
ಆಮೂಲಕ ಮುಸ್ಮಿಂ ಓಲೈಕೆಗೆ ಮುಂದಾಗಿದ್ದಾರೆ ಎಂದು ಕಿಡಿ ಕಾರಿದರು. ಗೂಂಡಾ ಮುಸಲ್ಮಾನರಿಗೆ ಯಾರ ಭಯವೂ ಇಲ್ಲದಂತಾಗಿದೆ ಈ ಸರ್ಕಾರದ ಅವಧಿಯಲ್ಲಿ. ರಾಷ್ಟ್ರಭಕ್ತ ಯುವಕರ ಕಗ್ಗೊಲೆಯಾಗುತ್ತಿದೆ. ಈಗಲಾದರೂ ಎಚ್ಚೆತ್ತುಕೊಳ್ಳಿ, ರಾಷ್ಟ್ರ ದ್ರೋಹಿಗಳನ್ನು ರಕ್ಷಣೆ ಮಾಡಬೇಡಿ. ಇಲ್ಲವಾದಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮನೆಗೆ ಹೋಗುತ್ತದೆ ಎಂದು ಎಚ್ಚರಿಸಿದರು. ನ. 10ರಂದು ನಡೆಯಲಿರುವ ಟಿಪ್ಪು ಜಯಂತಿ ಸಂದರ್ಭದಲ್ಲಿ ಗೂಂಡಾ ಮುಸಲ್ಮಾನರು ಗದ್ದಲ ಮಾಡಲು ತಯಾರಾಗಿದ್ದಾರೆ. ಹೀಗಾಗಿ ಟಿಪ್ಪು ಜಯಂತಿ ಮಾಡಬಾರದು ಎಂದು ಒತ್ತಾಯಿಸಿದರು.
ಗೂಂಡಾಗಳ ಕೈಯಲ್ಲಿ ಸರ್ಕಾರ ಇದೆ. ಡಿಎಸ್‌ಪಿ ಗಣಪತಿ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಈ ಹಿಂದೆ ಜಾರ್ಜ್ ಅವರ ರಾಜೀನಾಮೆ ಪಡೆದು ಸಿಐಡಿಯಿಂದ ಕ್ಲೀನ್‌ಚೀಟ್ ಕಲ್ಪಿಸಿಕೊಟ್ಟು ಪ್ರಕರಣ ಮರೆ ಮಾಚುವ ಯತ್ನ ಮಾಡಲಾಗಿತ್ತು. ಆದರೆ, ಈಗ ಸಿಬಿಐ ತನಿಖೆ ಆರಂಭವಾಗುತ್ತಿದ್ದಂತೆ ರಾಜೀನಾಮೆ ಇಲ್ಲ ಎಂದು ಹೇಳಿ ಮುಖ್ಯಮಂತ್ರಿಗಳು ಕೊಲೆಗಡುಕರ ರಕ್ಷಣೆಗೆ ಮುಂದಾಗಿದೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಮುಸ್ಲಿಮರನ್ನು ಎತ್ತಿಕಟ್ಟಿ ಹಿಂದುಗಳನ್ನು ತುಳಿಯುವುದು, ಮತ್ತೂಂದೆಡೆ ವೀರಶೈವ ಲಿಂಗಾಯತರ ನಡುವೆ ಗೊಂದಲ ಸೃಷ್ಟಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಸಚಿವ ಎಂ.ಬಿ. ಪಾಟೀಲ ನೀರಾವರಿ ಇಲಾಖೆಯ ಕೆಲಸ ಮಾಡುವುದನ್ನು ಮರೆತು ಜಾತಿ ರಾಜಕಾರಣದಲ್ಲಿ ತೊಡಗಿದ್ದಾರೆ. ಹಾಗಾಗಿ ನೀರಾವರಿ ಸಚಿವಗಿರಿ ಬೇಡ ಎಂದಾದರೆ ಜಾತಿ ರಾಜಕಾರಣ ಮಂತ್ರಿ ಮಾಡಿ ಎಂದು ವ್ಯಂಗ್ಯವಾಡಿದರು.