“ಈ ಚಿತ್ರವನ್ನು ಹತ್ತು ವರ್ಷಗಳ ನಂತರ ನೋಡಿದರೂ ಹೊಸತೆನಿಸುತ್ತದೆ. “ಬಂಗಾರದ ಮನುಷ್ಯ’ ಈಗಲೂ ಹೇಗೆ ಪ್ರಭಾವ ಬೀರುತ್ತೋ, ಹಾಗೇ ನಮ್ಮ ಚಿತ್ರ ಕೂಡ ಯಾವಾಗ ನೋಡಿದರೂ, ನೈಜತೆಯನ್ನೇ ಕಟ್ಟಿಕೊಡುವಂತಿರುತ್ತೆ…’
– ಹೀಗೆ ತುಂಬ ವಿಶ್ವಾಸದಿಂದ ಹೇಳುತ್ತಾ ಹೋದರು ನಿರ್ದೇಶಕ ಕಮ್ ನಿರ್ಮಾಪಕ ಅರುಣ್. ಅವರು ಹೇಳಿಕೊಂಡಿದ್ದು, “ದಿವಂಗತ ಮಂಜುನಾಥನ ಗೆಳೆಯರು’ ಚಿತ್ರದ ಬಗ್ಗೆ. ಚಿತ್ರದ ಟ್ರೇಲರ್ ಬಿಡುಗಡೆಗೆ ಚಿತ್ರತಂಡದ ಜೊತೆ ಆಗಮಿಸಿದ್ದ ಅರುಣ್, ಅಂದು ಹಾಡು, ಟೀಸರ್ ತೋರಿಸಿದರು. ಅಷ್ಟೇ ಅಲ್ಲ, ಸಿನಿಮಾ ರಂಗದ ಕೆಲ ನಿರ್ದೇಶಕರು ಟೀಸರ್ ಬಗ್ಗೆ ಮಾತನಾಡಿದ್ದ ತುಣುಕು ತೋರಿಸಿದರು. ಚಿತ್ರವನ್ನು ಹೇಗೆಲ್ಲಾ ಪ್ರಚಾರ ಮಾಡೋಕೆ ಅಣಿಯಾಗಿದ್ದೇವೆ ಅಂತಾನೂ ತೆರೆಯ ಮೇಲೆ ಒಂದಷ್ಟು ಸ್ಯಾಂಪಲ್ ಚಿತ್ರಣವನ್ನು ತೋರಿಸಿದರು. ಕೊನೆಗೆ ಮೈಕ್ ಹಿಡಿದು ಮಾತಿಗೆ ನಿಂತ ನಿರ್ದೇಶಕ ಅರುಣ್ ಹೇಳಿದ್ದಿಷ್ಟು.
“ಈ ಹಿಂದೆ “ಎಣ್ಣೆ ಪಾರ್ಟಿ’ ಎಂಬ ಕಿರುಚಿತ್ರ ಮಾಡಿದ್ದೆವು. ಅದಾದ ನಂತರ ಸಿನಿಮಾ ಮಾಡೋಕೆ ಮುಂದಾಗಿ, ಈ ಕಥೆ ಹೆಣೆದು ಚಿತ್ರ ಶುರುಮಾಡಿದೆ. ಕಥೆಗೆ ಈ ಶೀರ್ಷಿಕೆ ಸೂಕ್ತವೆನಿಸಿತ್ತು ಅದನ್ನೇ ಇಟ್ಟು ಚಿತ್ರ ಮಾಡಿದ್ದೇವೆ. ಸತತ 6 ತಿಂಗಳ ಕಾಲ ಸ್ಕ್ರಿಪ್ಟ್ ಮಾಡಿ, ಹೊಸ ತಂಡ ಕಟ್ಟಿಕೊಂಡು ಚಿತ್ರ ಮಾಡಿದ್ದೇನೆ. ಚಿತ್ರದ ಪ್ರತಿಯೊಂದು ಪಾತ್ರ ನಮ್ಮ ಜೊತೆಗೆ ಇರುವಂಥದ್ದೇ. ಕಳೆದ ಒಂದುವರೆ ವರ್ಷದ ಈ ಜರ್ನಿಯಲ್ಲಿ ಸುಮಾರು 350ಕ್ಕೂ ಹೆಚ್ಚು ಮಂದಿ ಜೊತೆಗೂಡಿ ಕೆಲಸ ಮಾಡಿದ್ದಾರೆ. ಬಹುತೇಕ ಬೆಂಗಳೂರು, ಭೂಮಿಕಾ ಎಸ್ಟೇಟ್ ಇತರೆಡೆ ಚಿತ್ರೀಕರಿಸಲಾಗಿದೆ. ಐದು ಜನ ಗೆಳೆಯರ ನಡುವಿನ ಕಥೆ ಇದು. ಗೆಳೆಯನೊಬ್ಬ ಅಗಲಿದಾಗ, ಎಲ್ಲಾ ಗೆಳೆಯರು ಕೆಲ ವರ್ಷಗಳ ಬಳಿಕ ಭೇಟಿ ಆದಾಗ, ಒಂದಷ್ಟು ವಿಷಯ ಹಂಚಿಕೊಳ್ತಾರೆ. ಗೆಳೆಯನ ಸಾವಿನ ಹಿಂದೆ ಗೆಳೆಯರ ಪಾತ್ರವೂ ಇದೆ ಅನ್ನೋ ಅನುಮಾನ ಶುರುವಾಗಿ ಪೊಲೀಸರ ತನಿಖೆ ಆರಂಭವಾಗುತ್ತೆ. ಆಮೇಲೆ ಏನಾಗುತ್ತೆ ಎಂಬುದು ಕಥೆ’ ಎನ್ನುತ್ತಾರೆ ಅರುಣ್.
ಐವರು ಗೆಳೆಯರಲ್ಲಿ ರುದ್ರಪ್ರಯೋಗ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಐಬಿಎಂನಲ್ಲಿ ಕೆಲಸ ಮಾಡುತ್ತಿದ್ದ ರುದ್ರ ಪ್ರಯೋಗ್ ಅವರಿಗೆ ನಟ ಆಗಬೇಕೆಂಬ ಆಸೆ ಇದ್ದುದರಿಂದ ವೀಕೆಂಡ್‌ನಲ್ಲಿ ಮಾತ್ರ ಆಡಿಷನ್‌ಗಳಿಗೆ ಹೋಗುತ್ತಿದ್ದರಂತೆ. ಕೊನೆಗೆ ಬೇರೆ ದಿನ ಆಡಿಷನ್ ಇದ್ದಾಗ, ಕೆಲಸ ಬಿಡಲು ಸಾಧ್ಯವಾಗದ ಕಾರಣ, ಸಿನಿಮಾ ನಟ ಆಗಬೇಕು ಎಂಬ ಉದ್ದೇಶದಿಂದ ಇದ್ದ ಐಬಿಎಂ ಕಂಪೆನಿಯ ಕೆಲಸಕ್ಕೆ ಗುಡ್‌ಬೈ ಹೇಳಿ, ಈ ಚಿತ್ರದ ಆಡಿಷನ್‌ನಲ್ಲಿ ಪಾಸ್ ಆಗಿ ಹೀರೋ ಆಗುವ ಅವಕಾಶ ಗಿಟ್ಟಿಸಿಕೊಂಡರಂತೆ. ರುದ್ರಪ್ಪ ಹೆಸರಿನ ಅವರು ಚಿತ್ರಕ್ಕಾಗಿ ರುದ್ರ ಪ್ರಯೋಗ್ ಎಂದು ಬದಲಾಗಿದ್ದಾರೆ. ಅವರಿಗಿಲ್ಲಿ ಹೊಸಬಗೆಯ ಪಾತ್ರ ಸಿಕ್ಕಿದೆಯಂತೆ. ಗೆಲುವಿನ ವಿಶ್ವಾಸವೂ ಅವರಲ್ಲಿದೆ.
ಚಿತ್ರದಲ್ಲಿ ಶೀತಲ ಪಾಂಡ್ಯ ನಾಯಕಿಯಾಗಿದ್ದಾರೆ. ಉಳಿದಂತೆ ಚಿತ್ರದಲ್ಲಿ ಅವಿನಾಶ್ ಮುದ್ದಪ್ಪ, ಶಂಕರಮೂರ್ತಿ, ರವಿ ಪೂಜಾರ್, ಮೋಹನ್ ದಾಸ್, ಸುಂಗಾರಿ ನಾಗರಾಜ್, ಸತ್ಯಜಿತ್, ಸಚಿನ್, ನವೀನ್, ಹರಿ ಸಮಷ್ಟಿ, ಜ್ಯೋತಿ ಮುರೂರು, ಪ್ರಭಾಕರ್‌ರಾವ್ ಇತರರು ನಟಿಸಿದ್ದಾರೆ. ವಿನಯ್ ಕುಮಾರ್ ಸಂಗೀತವಿದೆ. ಸತೀಶ್ ಆರ್ಯನ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಪೂರ್ಣ ಮತ್ತು ಮೊಹಮ್ಮದ್ ಆಮೀನ್ ಛಾಯಾಗ್ರಹಣವಿದೆ. ಚಿತ್ರ ಬಿಡುಗಡೆಗೆ ರೆಡಿಯಾಗಿದ್ದು, ಆಗಸ್ಟ್‌ನಲ್ಲಿ ಬರುವ ಸಾಧ್ಯತೆ ಇದೆ.