ಕುಣಿಗಲ್: ತಾಲೂಕಿನ ಅಂಚೇಪಾಳ್ಯ ಬಳಿ ನನ್ನ ಮತ್ತು ಜೆಡಿಎಸ್ ಮುಖಂಡ, ಗ್ರಾ.ಪಂ ಸದಸ್ಯ ಮಂಜುನಾಥ್ ನಡುವೆ ನಡೆದ ಗಲಾಟೆ ವಯಕ್ತಿಕ ವಿಚಾರವೇ ಹೊರತು ಯಾವುದೇ ರಾಜಕೀಯ ಉದ್ದೇಶದಿಂದ ಅಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತ ಬೋರೇಗೌಡ ಹುತ್ರಿದುರ್ಗ ಹೋಬಳಿ ಬೆಟ್ಟಹಳ್ಳಿ ಮಠದ ಉರಿಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಮಾಣ ಮಾಡಿದರು.
ಶನಿವಾರ ತಾಲೂಕಿನ ಹುತ್ರಿದುರ್ಗ ಹೋಬಳಿ ಪ್ರಸಿದ್ದ ಬೆಟ್ಟಹಳ್ಳಿ ಮಠದ ಉರಿಲಿಂಗೇಶ್ವರ ಸ್ವಾಮಿ ದೇವಾಲಯಕ್ಕೆ ತೆರಳಿದ ಬೋರೇಗೌಡ, ಉರಿಲಿಂಗೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ ಬಳಿಕ ದೇವಾಲಯದ ಮುಂಭಾಗಕ್ಕೆ ಬಂದು ಗಂದದ ಕಡ್ಡಿ, ಕರ್ಪೂರ ದೇವರಿಗೆ ಹಚ್ಚಿ ನಾನು ರಾಜಕೀಯವಾಗಿ ಮಂಜುನಾಥನ ಆಣೆಗೆ ಚಾಕುವಿನಿಂದ ಚುಚ್ಚಿ ಗಾಯಗೊಳಿಸಿದರೇ ದೇವರು ನನಗೆ ಶಿಕ್ಷೆ ಕೊಡಲಿ ಇಲ್ಲವಾದಲ್ಲಿ ನನ್ನ ವಿರುದ್ದ ಸುಳ್ಳು ಆರೋಪ ಹೊರಿಸಿರುವ ಮಂಜುನಾಥನಿಗೆ ದೇವರು ಶಿಕ್ಷೆ ನೀಡಲಿ ಎಂದು ಪ್ರಮಾಣ ಮಾಡಿದರು.
ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಬೋರೇಗೌಡ, ಅಂಚೇಪಾಳ್ಯದಲ್ಲಿ ನಡೆದ ಗಲಾಟೆ ನನ್ನ ಹಾಗೂ ಮಂಜುನಾಥ್ ಅವರ ವಯಕ್ತಿಕ ಗಲಾಟೆಯಾಗಿದೆ. ಮಂಜುನಾಥ್ ಇದನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಂಡು ರಾಜಕೀಯ ಗಲಾಟೆ ಎಂದು ಬಿಂಬಿಸಲು ಹೊರಟ್ಟಿದ್ದಾರೆ ಎಂದು ಹೇಳಿದರು.
ನಾನು ಹಾಗೂ ಮಂಜುನಾಥ್ ಸುಮಾರು ದಿನಗಳಿಂದ ಮಾತನಾಡುತ್ತಿರಲಿಲ್ಲ. ಬುಧವಾರ ನಾನು ಮನೆಯಲ್ಲಿದ್ದಾಗ ಮಂಜುನಾಥ ಕರೆ ಮಾಡಿ ಅಂಚೇಪಾಳ್ಯ ಬಳಿ ಬರುವಂತೆ ತಿಳಿಸಿದ್ದನು. ನಾನು ಯಾವುದೋ ವಿಚಾರ ಇರಬಹುದೆಂದು ತಿಳಿದು ಬುಧವಾರ ರಾತ್ರಿ ಅಂಚೇಪಾಳ್ಯ ಬಳಿ ಹೋಗಿದ್ದೆ ಎಂದು ವಿವರಿಸಿದರು.
ಮಂಜುನಾಥ್‌ಗೂ ನನಗೂ ಗಲಾಟೆಯಾಗಿ ಮಂಜುನಾಥ ತನ್ನ ಮೇಲೆ ಹಲ್ಲೆ ಮಾಡಿದ್ದನು. ಪೆಟ್ಟು ತಿಂದ ನಾನು, ಕೂಡಾ ಮಂಜುನಾಥನಿಗೆ ನನ್ನ ಕೈಯಿಂದ ಹೊಡೆದೆಯಷ್ಟೇ ವಿನಃ ಅಪಾಯಕಾರಿಯಾದ ಚಾಕುವಿನಿಂದ ಆತನ ಹಣೆಗೆ ಚುಚ್ಚಲಿಲ್ಲ. ಆದರೇ ಚಾಕುವಿನಿಂದ ಚುಚ್ಚಿದ್ದೇನೆ ಎಂದು ಆ ಪಕ್ಷದ ಮುಖಂಡರು ಈ ಘಟನೆಯನ್ನು ರಾಜಕೀಯವಾಗಿ ದುರ್ಬಳಕ್ಕೆ ಮಾಡಿಕೊಂಡು ಕಾಂಗ್ರೆಸ್ ಮತ್ತು ಸಂಸದ ಡಿ.ಕೆ.ಸುರೇಶ್, ಶಾಸಕ ಡಾ.ರಂಗನಾಥ್ ಅವರಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ನನ್ನ ವಿರುದ್ದ ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈಗಾಗಲೇ ಸತ್ಯ ಏನೆಂಬುದು ಹೊರ ಬರುತ್ತಿದೆ. ಮಂಜುನಾಥ್ ಅವರೇ ನನಗೆ ಚಾಕುವಿನಿಂದ ಚುಚ್ಚಿಲ್ಲ ಎಂದು ಹೇಳುತ್ತಿದ್ದಾರೆ. ಮತ್ತಷ್ಟು ಸತ್ಯ ಮುಂದಿನ ದಿನದಲ್ಲಿ ಹೊರ ಬರಲಿದೆ ಎಂದು ತಿಳಿಸಿದರು.
ಮಂಜುನಾಥ್ ಪ್ರಮಾಣ ಮಾಡಲಿ: ನಾನು ಮಂಜುನಾಥನ ಆಣೆಗೆ ಚಾಕುವಿನಿಂದ ಚುಚ್ಚಿದರೇ ಹಾಗೂ ರಾಜಕೀಯ ಉದ್ದೇಶಕ್ಕೆ ಗಲಾಟೆಯಾಗಿದ್ದರೇ ಮಂಜುನಾಥ್ ಅವರು ಉರಿಲಿಂಗೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.
ಈ ವೇಳೆ ವಿಎಸ್‌ಎಸ್‌ಎನ್ ಅಧ್ಯಕ್ಷ ಬೋರೇಗೌಡ, ಗ್ರಾ.ಪಂ. ಸದಸ್ಯರಾದ ಸ್ವಾಮಿ ಹಾಲುವಾಗಿಲು, ಹುಚ್ಚೇಗೌಡ, ನಾರಾಯಣ, ಮುಖಂಡ ಹನುಮಂತ, ಕುಮಾರ ಮತ್ತಿತರರು ಇದ್ದರು.