Advertisement
1991ರ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಸಮಾಜವಾದಿ ಜನತಾಪಕ್ಷದ ಅಭ್ಯರ್ಥಿಯಾಗಿ ಹಾಸನ ಕ್ಷೇತ್ರದಿಂದ ಆಯ್ಕೆಯಾದ ನಂತರ ಜನತಾ ಪರಿವಾರದ ಭದ್ರಕೋಟೆಯಾಗಿ ಕ್ಷೇತ್ರ ರೂಪುಗೊಂಡಿದೆ. 1996ರ ಚುನಾವಣೆ ಹೊರತುಪಡಿಸಿ 1991ರಿಂದ 2019ರ ಚುನಾವಣೆವರೆಗೂ ದೇವೇಗೌಡರೇ ಈ ಕ್ಷೇತ್ರದ ಅಭ್ಯರ್ಥಿಯಾಗಿದ್ದರು. 1999ರಲ್ಲಿ ದೇವೇಗೌಡರು ಈ ಕ್ಷೇತ್ರದಲ್ಲಿ ಸೋಲನ್ನೂ ಅನುಭವಿಸಿದ್ದರು. ನಂತರ ಸತತವಾಗಿ ಮೂರು ಬಾರಿ ಈ ಕ್ಷೇತ್ರವನ್ನು ಗೆಲ್ಲುವ ಮೂಲಕ 5 ಬಾರಿ ಹಾಸನ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
Related Articles
Advertisement
ನಿರ್ಣಾಯಕ ಅಂಶ: ಹಾಸನ ಲೋಕಸಭಾ ಕ್ಷೇತ್ರಕ್ಕೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ವಿಧಾನಸಭಾ ಕ್ಷೇತ್ರವೂ ಸೇರಿದೆ. ಕಳೆದ ಬಾರಿ ಹಾಸನ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಬಹುಮತ ಪಡೆದು ದೇವೇಗೌಡರು ಜಯ ಗಳಿಸಿದ್ದರೂ ಕಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು ಅವರಿಗಿಂತ 17 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದರು.
ಈ ಬಾರಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿಯಾಗಿರುವುದರಿಂದ ಈ ಕ್ಷೇತ್ರದಲ್ಲಿ ಜೆಡಿಎಸ್ ಮುನ್ನಡೆ/ಸಮಬಲ ಸಾಧಿಸುವ ಅಶಾಭಾವ ಹೊಂದಿದೆ. ಹಾಸನ ಲೋಕಸಭಾ ಕ್ಷೇತ್ರದಲ್ಲಿ 5.50 ಲಕ್ಷದಷ್ಟಿರುವ (ಶೇ.70) ಒಕ್ಕಲಿಗರ ಮತಗಳು ಜೆಡಿಎಸ್ ಪರ, ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪರವಾಗಿರುತ್ತಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಕುರುಬ ಸಮುದಾಯದವರು ಈ ಬಾರಿ ಮೈತ್ರಿ ಪರವಾಗಿದ್ದಾರೆ ಎಂಬುದು ಜೆಡಿಎಸ್ ಮುಖಂಡರ ನಂಬಿಕೆ.
ಮುಸ್ಲಿಮರು ಜೆಡಿಎಸ್ ಪರ ನಿಲ್ಲುವ ಸಾಧ್ಯತೆ ಇದೆ. ಆದರೆ, ಕಡೂರು, ಅರಸೀಕೆರೆ, ಬೇಲೂರು, ಸಕಲೇಶಪುರ ಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿರುವ ಲಿಂಗಾಯತರ ಮತಗಳು ಬಿಜೆಪಿಗೆ ಹೋಗಲಿವೆ ಎಂಬ ಲೆಕ್ಕಾಚಾರವಿದೆ. ಹಾಗಾಗಿ, ಎಸ್ಸಿ,ಎಸ್ಟಿ, ಕುರುಬ ಮತದಾರರು ಈ ಬಾರಿಯ ಚುನಾವಣೆಯಲ್ಲಿ ನಿರ್ಣಾಯಕರಾಗಲಿದ್ದಾರೆ.
ಕ್ಷೇತ್ರವ್ಯಾಪ್ತಿ: ಹಾಸನ ಜಿಲ್ಲೆಯ ಸಕಲೇಶಪುರ, ಅರಕಲಗೂಡು, ಹೊಳೆನರಸೀಪುರ, ಹಾಸನ, ಶ್ರವಣಬೆಳಗೊಳ, ಅರಸೀಕೆರೆ ಮತ್ತು ಬೇಲೂರು ವಿಧಾನಸಭಾ ಕ್ಷೇತ್ರಗಳು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಡೂರು ವಿಧಾನಸಭಾ ಕ್ಷೇತ್ರಗಳು ಹಾಸನ ಲೋಕಸಭಾ ಕ್ಷೇತ್ರವ್ಯಾಪ್ತಿಯಲ್ಲಿವೆ.
ಕಣ ಚಿತ್ರಣ: ಹಾಸನ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದು, ಹಾಸನ ಮತ್ತು ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಹಾಸನ ನಗರಸಭೆ, ಹಾಸನ ಜಿಲ್ಲಾ ಪಂಚಾಯಿತಿ ಸೇರಿದಂತೆ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲೂ ಜೆಡಿಎಸ್ ಅಧಿಪತ್ಯ ಸಾಧಿಸಿದೆ. ಕಡೂರು ಕ್ಷೇತ್ರದ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಪ್ರಭುತ್ವ ಸ್ಥಾಪಿಸಿದೆ. ಬಿಜೆಪಿ ಯಾವುದೇ ಸ್ಥಳೀಯ ಸಂಸ್ಥೆಯಲ್ಲೂ ಇದುವರೆಗೆ ಅಧಿಕಾರ ಹಿಡಿದಿಲ್ಲ.
1999ರ ಲೋಕಸಭಾ ಚುನಾವಣೆ ಹೊರತುಪಡಿಸಿ 1991ರಿಂದಲೂ ಮಾಜಿ ಪ್ರಧಾನಿ ದೇವೇಗೌಡರ ನಾಯಕತ್ವದಲ್ಲಿ ಜನತಾದಳದ ಅಭ್ಯರ್ಥಿಗಳು ಗೆಲ್ಲುತ್ತಾ ಬಂದಿದ್ದಾರೆ. ಈ ಬಾರಿ ದೇವೇಗೌಡರ ಮೊಮ್ಮಗ, 28ರ ಹರೆಯದ ಜೆಡಿಎಸ್ ಅಭ್ಯರ್ಥಿ, ಪ್ರಜ್ವಲ್ ರೇವಣ್ಣ ಅವರೆದರು 60ರ ಹರೆಯದ ಬಿಜೆಪಿ ಅಭ್ಯರ್ಥಿ ಎ.ಮಂಜು ಎದುರಾಳಿ. ಬಿಎಸ್‌ಪಿ ಅಭ್ಯರ್ಥಿ ವಿನೋದ್‌ರಾಜು, ಉತ್ತಮ ಪ್ರಜಾಕೀಯ ಪಕ್ಷದ ಚಂದ್ರೇಗೌಡ, ಇಬ್ಬರು ಪಕ್ಷೇತರರು ಸೇರಿ ಒಟ್ಟು 6 ಮಂದಿ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ.
ಮತದಾರರು-ಒಟ್ಟು - 16,29,587
-ಪುರುಷರು – 8,22,399
-ಮಹಿಳೆಯರು – 8,07,188 ಜಾತಿ ಲೆಕ್ಕಾಚಾರ
ಒಕ್ಕಲಿಗರು – 5,25,000
ಪ.ಜಾತಿ/ಪಂಗಡ – 3,30,000
ಲಿಂಗಾಯತರು – 2,50,000
ಕುರುಬರು -1,30,000
ಮುಸ್ಲಿಮರು – 1,10,000
ಇತರರು – 2,50,000 * ಎನ್. ನಂಜುಂಡೇಗೌಡ