ಈ ದಿಗ್ಗಜರ ನಂತರ ಭಾರತೀಯ ಕ್ರಿಕೆಟ್ ಪ್ರವೇಶಿಸಿದ್ದು, ಹೊಸತಳಿಗಳಾದ ಆರ್.ವಿನಯ್ ಕುಮಾರ್ (ವೇಗದ ಬೌಲರ್), ರಾಬಿನ್ ಉತ್ತಪ್ಪ (ಬಲಗೈ ಬ್ಯಾಟ್ಸ್‌ಮನ್), ಸ್ಟುವರ್ಟ್ ಬಿನ್ನಿ (ಆಲ್‌ರೌಂಡರ್), ಶ್ರೀನಾಥ್ ಅರವಿಂದ್ (ವೇಗದ ಬೌಲರ್), ಕೆ.ಎಲ್.ರಾಹುಲ್ (ಬಲಗೈ ಬ್ಯಾಟ್ಸ್‌ಮನ್), ಮನೀಶ್ ಪಾಂಡೆ (ಬಲಗೈ ಬ್ಯಾಟ್ಸ್‌ಮನ್). ಇವರಲ್ಲಿ ವಿನಯ್ ಕುಮಾರ್, ಶ್ರೀನಾಥ್ ಅರವಿಂದ್, ಸ್ಟುವರ್ಟ್ ಬಿನ್ನಿ, ರಾಬಿನ್ ಉತ್ತಪ್ಪ ಬಂದಷ್ಟೇ ವೇಗವಾಗಿ ತಂಡದಿಂದ ಹೊರಬಿದ್ದರು. ಈ ಪೈಕಿ ರಾಬಿನ್ ಉತ್ತಪ್ಪ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿ ರೂಪುಗೊಳ್ಳುವ ಎಲ್ಲ ಸಾಮರ್ಥ್ಯವಿದ್ದರೂ, ಅವರಿಗೆ ಅವಕಾಶ ಸಿಗದಿದ್ದದ್ದು, ಬಿಸಿಸಿಐನಲ್ಲಿ ಇದೆ ಎನ್ನಲಾದ ರಾಜಕೀಯವೋ, ಒಟ್ಟಾರೆ ಎಲ್ಲವೂ ಸೇರಿ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡರು. ಈಗವರು ಸೌರಾಷ್ಟ್ರ ತಂಡದಲ್ಲಿ ಆಡುತ್ತಿದ್ದಾರೆ.
Advertisement
ಇವರೆಲ್ಲ ಒಂದು ಕೈ ನೋಡಿ ಹೊರಬೀಳುತ್ತಿದ್ದ ಹಂತದಲ್ಲೇ, ಭಾರತ ಕ್ರಿಕೆಟ್ ಪ್ರವೇಶಿಸಿದ್ದು ಕೆ.ಎಲ್.ರಾಹುಲ್ ಹಾಗೂ ಮನೀಶ್ ಪಾಂಡೆ. ಸದ್ಯ ಮನೀಶ್ ಕರ್ನಾಟಕ ತಂಡದ ನಾಯಕರಾಗಿದ್ದಾರೆ. ಪೈಕಿ ಕೆ.ಎಲ್.ರಾಹುಲ್, ಕ್ರಿಕೆಟ್‌ನ ಮೂರೂ ಮಾದರಿಯಲ್ಲಿ ಭಾರತ ಕ್ರಿಕೆಟ್ ತಂಡದ ಸದಸ್ಯರಾಗಿದ್ದಾರೆ. ಇತ್ತೀಚೆಗೆ ಸತತ ಲಯ ಕಳೆದುಕೊಂಡಿದ್ದರಿಂದ ಅವರ ಸ್ಥಾನ ಜೋರಾಗಿ ಅಲ್ಲಾಡುತ್ತಿದೆ. ಮೊನ್ನೆಯಷ್ಟೇ ಆಸ್ಟ್ರೇಲಿಯ ವಿರುದ್ಧ ನಡೆದ ಎರಡೂ ಟಿ20ಯಲ್ಲಿ ಮಿಂಚುವ ಮೂಲಕ, ಸ್ಥಾನ ಗಟ್ಟಿ ಮಾಡಿಕೊಳ್ಳುವ ಹಾದಿಯಲ್ಲಿ ಮುನ್ನುಗ್ಗಿದ್ದಾರೆ. ಟೆಸ್ಟ್ ಬ್ಯಾಟ್ಸ್‌ಮನ್ ಆಗಿ ತಂಡ ಪ್ರವೇಶಿಸಿದ ರಾಹುಲ್, ಕ್ರಮೇಣ ಟಿ20ಯಲ್ಲಿ ತಮ್ಮ ಶಕ್ತಿ ತೋರಿ, ಏಕದಿನವನ್ನೂ ಪ್ರವೇಶಿಸಿದರು. ನಿಸ್ಸಂಶಯವಾಗಿ ಅತ್ಯುತ್ತಮ ಪ್ರತಿಭಾವಂತ ಬ್ಯಾಟ್ಸ್‌ಮನ್ ಎನ್ನಲು ಯಾವುದೇ ಅಡ್ಡಿಯಿಲ್ಲ. ಪ್ರಸ್ತುತ ಇಂಗ್ಲೆಂಡ್‌ನಲ್ಲಿ ನಡೆಯುವ ಏಕದಿನ ವಿಶ್ವಕಪ್‌ನ 15 ಮಂದಿ ತಂಡದಲ್ಲಿ ಅವರಿರುವುದಂತೂ ಖಚಿತ. 11ರ ಬಳಗದಲ್ಲಿ ಸ್ಥಾನ ಪಡೆಯುವುದು ಅನುಮಾನ.ಆದರೆ ಎಲ್ಲವೂ ಇದ್ದು, ಏನೂ ಇಲ್ಲದಂತಾಗಿರುವ ಆಟಗಾರ ಮನೀಶ್ ಪಾಂಡೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಕ್ಕಿದ ಕೆಲವೇ ಅವಕಾಶಗಳಲ್ಲಿ ಮನೀಶ್ ಆಡಿದ ರೀತಿ ನೋಡಿದವರಿಗೆ, ಅವರು ಭಾರತದ ಭವಿಷ್ಯದ ತಾರೆ ಎಂದು ಹೇಳಲು ಯಾವುದೇ ಅಡ್ಡಿಯೂ ಇರಲಿಲ್ಲ. ಆಕ್ರಮಣಕ್ಕೆ ಆಕ್ರಮಣ, ತಾಳ್ಮೆಗೆ ತಾಳ್ಮೆ ಎಲ್ಲವನ್ನೂ ಸೇರಿಸಿ ಆಡುವ ತಾಕತ್ತು ಮನೀಶ್‌ಗಿದೆ. ತಾಂತ್ರಿಕವಾಗಿ ನಿಪುಣ ಆಟಗಾರ. ಐಪಿಎಲ್‌ನಲ್ಲಿ ವಿದೇಶಿ ಆಟಗಾರರು ಒಂದರ ಮೇಲೊಂದು ಶತಕ ಬಾರಿಸುತ್ತಿದ್ದಾಗ, ಭಾರತೀಯ ಬ್ಯಾಟ್ಸ್‌ಮನ್‌ಗಳು ತಬ್ಬಿಬ್ಟಾಗಿದ್ದರು. ಆ ಹೊತ್ತಿನಲ್ಲಿ ಭಾರತೀಯರ ಪರ ಶತಕದ ಖಾತೆ ತೆರೆದದ್ದು ಮನೀಶ್ ಪಾಂಡೆ. ಇಂತಹ ಬ್ಯಾಟ್ಸ್‌ಮನ್ ಭಾರತದ ಏಕದಿನ ವಿಶ್ವಕಪ್ ತಂಡದ ಆದ್ಯತಾ ಆಟಗಾರರ ಪಟ್ಟಿಯಿಂದ ಹೊರಬಿದ್ದಿದ್ದಾರೆ. ದೇಶೀಯ ಕ್ರಿಕೆಟ್ಟೇ ಅವರಿಗೆ ಅನಿವಾರ್ಯವಾಗಿದೆ.
ಮನೀಶ್ ಪಾಂಡೆ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದ್ದು, 2015, ಜು.14ರಂದು. ಅದರ ಬೆನ್ನಲ್ಲೇ ಟಿ20ಯಲ್ಲೂ ಆಡಿದರು. ಜಿಂಬಾಬ್ವೆ ವಿರುದ್ಧದ ಸರಣಿಯಲ್ಲೇ ಈ ಎರಡನ್ನೂ ಸಾಧಿಸಿಕೊಂಡರು. ಮುಂದೆ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಮುಖ ನೋಡಿದ್ದು 2016, ಜನವರಿಯಲ್ಲಿ. ಅಂದರೆ 6 ತಿಂಗಳ ಅಂತರ. ಆಸ್ಟ್ರೇಲಿಯ ನೆಲದಲ್ಲಿ, ಆಸ್ಟ್ರೇಲಿಯ ವಿರುದ್ಧ ಏಕದಿನ ಸರಣಿಯಲ್ಲಿ ಆಡಲಿಳಿದರು. ಮೊದಲ ಪಂದ್ಯದಲ್ಲಿ ಬ್ಯಾಟ್ ಮಾಡಲೇ ಇಲ್ಲ. 2ನೆಯ ಪಂದ್ಯದಲ್ಲಿ ಕೆಳಹಂತದಲ್ಲಿ ಬ್ಯಾಟ್ ಹಿಡಿದು ಬಂದು, ಒತ್ತಡಕ್ಕೆ ಸಿಲುಕಿ ಬೇಗ ಔಟಾದರು. ಮುಂದಿನ ಎರಡು ಪಂದ್ಯದಲ್ಲಿ ಆಡಲಿಲ್ಲ. 5ನೇ ಪಂದ್ಯದಲ್ಲಿ ಮತ್ತೆ ಅವಕಾಶ ಸಿಕ್ಕಿತ್ತು. ಇಲ್ಲಿ ಮನೀಶ್ ತಮ್ಮ ಸಾಮರ್ಥ್ಯವನ್ನು ವಿಶ್ವದ ಮುಂದೆ ತೆರೆದಿಟ್ಟರು. ಆಸ್ಟ್ರೇಲಿಯ ನೀಡಿದ ಬೃಹತ್ 331 ರನ್ ಗುರಿಯನ್ನು ಬೆನ್ನತ್ತಿ ಹೊರಟಿದ್ದ ಭಾರತಕ್ಕೆ, ನಿರೀಕ್ಷೆಯೇ ಮಾಡದ ರೀತಿಯಲ್ಲಿ ಮನೀಶ್ ನೆರವಿಗೆ ಬಂದರು. ಬರೀ 81 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ನೆರವಿನಿಂದ 104 ರನ್ ಗಳಿಸಿ ಅಜೇಯರಾಗುಳಿದರು. ಅಲ್ಲಿಯವರೆಗೆ ಆಸೀಸ್‌ನಲ್ಲಿ ಸತತ ಸೋಲಿನ ಸುಳಿಗೆ ಸಿಕ್ಕಿ ಜಯಕ್ಕಾಗಿ ಹಪಹಪಿಸುತ್ತಿದ್ದ ಭಾರತಕ್ಕೆ, ಜಯವೊಂದನ್ನು ಒದಗಿಸಿದ್ದು ಮನೀಶ್ ಬ್ಯಾಟಿಂಗ್ ಶಕ್ತಿಗೆ ಸಾಕ್ಷಿ. ಆ ಪಂದ್ಯದ ನಂತರ ಭಾರತದ ಹಣೆಬರೆಹವೇ ಬದಲಾಯಿತು. ಮುಂದಿನ ಮೂರು ಟಿ20ಯಲ್ಲಿ ಸತತ ಗೆದ್ದು ಆಸ್ಟ್ರೇಲಿಯವನ್ನು ತೊಳೆದುಹಾಕಿತು.
ಇಡೀ ತಂಡದ ಮಾನಸಿಕ ಸ್ಥೈರ್ಯವನ್ನೇ ಬದಲಿಸಿದ ಬ್ಯಾಟಿಂಗ್ ಮಾಡಿದ ಮನೀಶ್‌ಗೆ ಟಿ20 ಬಾಗಿಲೂ ತೆರೆಯಿತು. ಅಲ್ಲಿ ಅಗತ್ಯ ಬಿದ್ದಾಗಲೆಲ್ಲ ತಂಡದ ನೆರವಿಗೆ ಬಂದರು. ಮಧ್ಯಮ, ಕೆಳ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿರುವ ಮನೀಶ್‌ಗೆ ಹೆಚ್ಚಿನ ಅವಕಾಶ ಸಿಕ್ಕುವುದು ಕಷ್ಟ. ಸಿಕ್ಕಿದ್ದರಲ್ಲಿ ಆಡಬೇಕಾಗಿ ಬರುತ್ತದೆ. ಅಂತಹ ಹಂತದಲ್ಲಿ ದ.ಆಫ್ರಿಕಾದಲ್ಲಿ ನಡೆದ ಟಿ20 ಪಂದ್ಯದಲ್ಲಿ ಅವರು, ಹೋರಾಟಕಾರಿ 79 ರನ್ ಗಳಿಸಿದರು. ಇಲ್ಲಿ ಭಾರತ ಸೋತರೂ, ಸೋಲಿನ ಅಂತರ ತಗ್ಗಿಸಿದ್ದು ಮನೀಶ್ ಬ್ಯಾಟಿಂಗ್ ಸಾಧನೆ. ಹೀಗೇಕಾಯಿತು?
ಹೀಗೆ ತಮ್ಮ ಸಾಮರ್ಥ್ಯ ತೋರಿದ ಹೊರತಾಗಿಯೂ ಮನೀಶ್ ಭಾರತ ತಂಡದಿಂದ ಹೊರಬಿದ್ದಿದ್ದಾರೆ. ಅವರೀಗ ಭಾರತ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಮಾಡುವಂತಿಲ್ಲ. ಬದಲಿಗೆ 2020ರ ಟಿ20 ವಿಶ್ವಕಪ್ ಹೊತ್ತಿಗಾದರೂ, ಭಾರತ ತಂಡದಲ್ಲಿ ಸ್ಥಾನ ಗಟ್ಟಿ ಮಾಡಿಕೊಳ್ಳಬೇಕಾದ ಪರಿಸ್ಥಿತಿಗೆ ಸಿಲುಕಿದ್ದಾರೆ. ಇಷ್ಟೆಲ್ಲ ಆದ ನಂತರ ಉಳಿಯುವ ಪ್ರಶ್ನೆ, ಯಾಕೆ ಹೀಗಾಯಿತು?
Related Articles
ಯಾರ ಗಮನಕ್ಕೂ ಬರದೇ, ಶ್ರೇಷ್ಠ ಪ್ರತಿಭೆಯೊಂದು ಹಾಗೆಯೇ ಮುದುಡಿಕೊಳ್ಳುತ್ತಿದೆ. ಹಾಗೆ ಮುದುಡಿಕೊಳ್ಳುವುದರ ಬಗ್ಗೆ ಯಾರಿಗೂ ಕಳಕಳಿ ಇದ್ದಂತಿಲ್ಲ. ಎಲ್ಲವೂ ಇದ್ದೂ, ಇಂತಹದೊಂದು ಸ್ಥಿತಿ ಎದುರಿಸುವುದು ಬಹುಶಃ ತೀರಾ ಕಷ್ಟಕರ. ಮನೀಶ್ ಇದನ್ನೆಲ್ಲ ಮೀರುತ್ತಾರೆಂಬ ಭರವಸೆಯಲ್ಲಿ….
Advertisement