ನವದೆಹಲಿ:ನೆರೆಯ ಮ್ಯಾನ್ಮಾರ್ ನಲ್ಲಿ ಮಿಲಿಟರಿ ಏಕಾಏಕಿ ಗ್ರಾಮಗಳ ಮೇಲೆ ದಾಳಿ ನಡೆಸಿದ ಪರಿಣಾಮ ಭಾರತದ ಗಡಿ ಭಾಗದೊಳಕ್ಕೆ ಪ್ರವೇಶಿಸುತ್ತಿರುವ ಮ್ಯಾನ್ಮಾರ್ ನಿರಾಶ್ರಿತರಿಗೆ ಆಹಾರ ಮತ್ತು ಆಶ್ರಯ ನೀಡಬಾರದು ಎಂದು ಮಣಿಪುರ ಸರ್ಕಾರ ಸ್ಥಳೀಯ ಅಧಿಕಾರಿಗಳಿಗೆ ಹೊರಡಿಸಿದ್ದ ಆದೇಶವನ್ನು ಮಂಗಳವಾರ(ಮಾರ್ಚ್ 30) ವಾಪಸ್ ಪಡೆದಿರುವುದಾಗಿ ತಿಳಿಸಿದೆ.
ಮ್ಯಾನ್ಮಾರ್ ನಿಂದ ಭಾರತದೊಳಕ್ಕೆ ಆಗಮಿಸುವ ನಿರಾಶ್ರಿತರಿಗೆ ಆಹಾರ ಮತ್ತು ಆಶ್ರಯ ಕಲ್ಪಿಸಿಕೊಡಬೇಡಿ ಎಂದು ಮಣಿಪುರ ಸರ್ಕಾರ ಮಾರ್ಚ್ 26ರಂದು ಗಡಿಭಾಗದ ಅಧಿಕಾರಿಗಳಿಗೆ ಸುತ್ತೋಲೆ ಕಳುಹಿಸಿತ್ತು.
ಮ್ಯಾನ್ಮಾರ್ ನಲ್ಲಿ ಮಿಲಿಟರಿ ದಂಗೆಯ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದರೆ, ಮತ್ತೊಂದೆಡೆ ಸೇನೆ ಗ್ರಾಮಸ್ಥರ ಮೇಲೆ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮ್ಯಾನ್ಮಾರ್ ಪ್ರಜೆಗಳು ಗಡಿ ರಾಜ್ಯಗಳ ಮೂಲಕ ಭಾರತ ಪ್ರವೇಶಿಸುತ್ತಿದ್ದಾರೆ ಎಂದು ವರದಿಯಾಗಿತ್ತು.
ಈ ನಿಟ್ಟಿನಲ್ಲಿ ಮಣಿಪುರ ಗೃಹ ಇಲಾಖೆ, ಮಣಿಪುರದ ಪ್ರಜೆಗಳಿಗೆ ಆಹಾರ ಮತ್ತು ಆಶ್ರಯ ನೀಡಲು ಶಿಬಿರಗಳ ವ್ಯವಸ್ಥೆ ಕಲ್ಪಿಸಬಾರದು ಎಂದು ಗಡಿಭಾಗದ ಚಾಂಡೇಲ್, ಟೆಂಗನೌಪಾಲ್, ಕಾಮ್ ಜೊಂಗ್, ಉಖ್ರುಲ್ ಮತ್ತು ಚುರಾಚಾಂದ್ ಪುರ್ ಡೆಪ್ಯುಟಿ ಕಮಿಷನರ್ ಗಳಿಗೆ ಆದೇಶ ಹೊರಡಿಸಿ ಸೂಚನೆ ನೀಡಿತ್ತು.
ಮಣಿಪುರ ಪ್ರಜೆಗಳಿಗೆ ಆಶ್ರಯ ನೀಡಬೇಡಿ ಎಂಬ ಮಣಿಪುರ ಸರ್ಕಾರದ ಆದೇಶ ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಬಳಿಕ ಸರ್ಕಾರದ ಸುತ್ತೋಲೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ವಿವಾದಕ್ಕೆ ಎಡೆಮಾಡಿಕೊಟ್ಟಿರುವ ಮಾರ್ಚ್ 26ರ ಆದೇಶವನ್ನು ವಾಪಸ್ ಪಡೆಯಲು ಸರ್ಕಾರ ನಿರ್ಧರಿಸಿದೆ ಎಂದು ರಾಜ್ಯ ಸರ್ಕಾರದ ವಿಶೇಷ ಗೃಹ ಕಾರ್ಯದರ್ಶಿ ಎಚ್. ಪ್ರಕಾಶ್ ತಿಳಿಸಿದ್ದಾರೆ.