ಇಂಫಾಲ: ಕೇಂದ್ರ ಗೃಹ ಸಚಿವ ಅಮಿತ್ ಶಾ ತಾವೇ ಖುದ್ದಾಗಿ ಮಣಿಪುರಕ್ಕೆ ಭೇಟಿ ನೀಡಿ ಶಾಂತಿ ಮಾತುಕತೆಗೆ ಚಾಲನೆ ನೀಡಿದ್ದರು. ಗಲಭೆಕೋರರಿಗೆ ಕಠಿಣ ಸಂದೇಶವನ್ನೂ ರವಾನಿಸಿದ್ದರು. ಅದಾದ ಮೇಲೂ ಹಿಂಸಾಚಾರಗಳು ವರದಿಯಾಗುತ್ತಲೇ ಇವೆ. ಶುಕ್ರವಾರ ಮಣಿಪುರದ ಖೊಕೆನ್ ಹಳ್ಳಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ಪಡೆಯಲು ಸ್ಥಳದಲ್ಲಿ ಸೇನಾ ಯೋಧರನ್ನು ನಿಯೋಜಿಸಲಾಗಿದೆ.
ಹೇಗೆ ನಡೆಯಿತು?: ಈ ಘಟನೆ ಪಕ್ಕಾ ಸಿನಿಮಾ ಮಾದರಿಯಲ್ಲಿ ನಡೆದಿದೆ. ಯೋಧರ ವೇಷಧರಿಸಿ ಬಂದ ಒಳನುಸುಳುಕೋರರು, ಯೋಧರ ಮಾದರಿಯ ವಾಹನವನ್ನೇ ಬಳಸಿದ್ದಾರೆ. ಸ್ಥಳಕ್ಕೆ ಬಂದು ತಮ್ಮ ಸ್ವಯಂಚಾಲಿತ ಬಂದೂಕಿನಿಂದ ಯದ್ವಾತದ್ವಾ ಗುಂಡಿನ ದಾಳಿ ನಡೆಸಿದ್ದಾರೆ. ಅದೃಷ್ಟವಶಾತ್ ಹಳ್ಳಿಗರು ಎಚ್ಚರಾಗಿದ್ದರಿಂದ ಭಾರೀ ದುರಂತ ತಪ್ಪಿದೆ. ಒಬ್ಬ ಮಹಿಳೆ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾಗಲೇ ಗುಂಡೇಟಿಗೆ ಬಲಿಯಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಐಟಿಎಲ್‌ಎಫ್ ಬುಡಕಟ್ಟು ಸಂಘಟನೆ, ಒಳ ನುಸುಳಕೋರರು ಕಾನೂನಿಗೆ ತೋರಿಸಿರುವ ಅಗೌರವವಿದು. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು, ಅಮಿತ್ ಶಾ ಕರೆ ನೀಡಿರುವ ಶಾಂತಿ ಮಾತುಕತೆಗೆ ಇದರಿಂದ ಧಕ್ಕೆಯಾಗಿದೆ ಎಂದು ಹೇಳಿದೆ.
ಮಣಿಪುರದ ಇನ್ನೊಂದೆರಡು ಜಿಲ್ಲೆಗಳಲ್ಲಿ ಹಿಂಸಾಚಾರ, ಮನೆಗಳಿಗೆ ಬೆಂಕಿ ಹಾಕುವ ಕೃತ್ಯಗಳು ನಡೆದಿವೆ ಹೇಳಲಾಗುತ್ತಿದೆಯಾದರೂ, ಅಧಿಕೃತ ಮಾಹಿತಿಗಳು ಹೊರಬಿದ್ದಿಲ್ಲ.
Related Articles
ಸಿಬಿಐನಿಂದ ವಿಶೇಷ ತನಿಖಾ ಪಡೆ ರಚನೆ
ಮಣಿಪುರದ ದಂಗೆಗಳನ್ನು ತನಿಖೆ ಮಾಡಲು ಸಿಬಿಐ ವಿಶೇಷ ತನಿಖಾ ಪಡೆಯನ್ನು ರಚಿಸಿದೆ. ಇತ್ತೀಚೆಗೆ ಮಣಿಪುರಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಣಿಪುರದ ದಂಗೆಯನ್ನು ಸಿಬಿಐ ತನಿಖೆ ಮಾಡಲಿದೆ ಎಂದು ಹೇಳಿದ್ದಾರೆ. ಅದರ ಬೆನ್ನಲ್ಲೇ 6 ಪ್ರಕರಣಗಳನ್ನು ಸಿಬಿಐ ತನಿಖೆಗೆ ಕೈಗೆತ್ತಿಕೊಳ್ಳಲಿದೆ. ಐದು ಪ್ರಕರಣಗಳು ಕ್ರಿಮಿನಲ್ ಪಿತೂರಿಯ ಹಿನ್ನೆಲೆಯನ್ನು ಹೊಂದಿದ್ದರೆ, ಇನ್ನೊಂದು ಮಾಮೂಲಿ ಪಿತೂರಿಯಾಗಿದೆ. ಮೇ 3ಕ್ಕೆ ಆ ರಾಜ್ಯದಲ್ಲಿ ಹಿಂಸಾಚಾರ ಶುರುವಾಯಿತು. ಮೈತೇಯಿ ಮತ್ತು ಕುಕಿ ಸಮುದಾಯದವರ ನಡುವಿನ ಬುಡಕಟ್ಟು ಸ್ಥಾನಮಾನದ ಗಲಾಟೆಯಲ್ಲಿ ಈ ಹಿಂಸಾಚಾರ ಸಂಭವಿಸಿದೆ. ಇತ್ತೀಚೆಗೆ ಸತತವಾಗಿ ಕುಕಿ ಸಮುದಾಯದ ಬಂಡುಕೋರರೇ ಹಿಂಸಾತ್ಮಕ ಕೃತ್ಯದಲ್ಲಿ ನಿರತವಾಗಿರುವುದು ಕಂಡುಬಂದಿದೆ.