ಹೊಸದಿಲ್ಲಿ: ಮಣಿಪುರ ಹಿಂಸಾಚಾರದ ಸಂತ್ರಸ್ತರ ಪರಿಹಾರ ಮತ್ತು ಪುನರ್ವಸತಿಯ ಮೇಲ್ವಿಚಾರಣೆಗೆಂದು ನೇಮಕಗೊಂಡಿದ್ದ ನಿವೃತ್ತ ನ್ಯಾಯಮೂರ್ತಿ ಗೀತಾ ಮಿತ್ತಲ್ ನೇತೃತ್ವದ ಸಮಿತಿಯು ಸೋಮವಾರ ಸರ್ವೋಚ್ಚ ನ್ಯಾಯಾಲಯಕ್ಕೆ 3 ವರದಿ ಸಲ್ಲಿಸಿದೆ. ಗಲಭೆ ಪೀಡಿತ ರಾಜ್ಯದ ಸಂತ್ರಸ್ತರಿಗೆ ನೀಡುವ ಪರಿಹಾರ ಮೊತ್ತ ಹೆಚ್ಚಳಕ್ಕೆ ಸಂಬಂಧಿಸಿದ ವರದಿಯೂ ಇದರಲ್ಲಿ ಸೇರಿದೆ.
ವರದಿ ಸ್ವೀಕರಿಸಿದ ಸಿಜೆಐ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು, ಮೂವರು ಸದಸ್ಯರ ಸಮಿತಿಯ ಕಾರ್ಯನಿರ್ವಹಣೆಗೆ ಸಂಬಂಧಿಸಿ ಶುಕ್ರವಾರ ಆದೇಶ ಹೊರಡಿಸುವುದಾಗಿ ತಿಳಿಸಿದೆ.
ಸಮಿತಿಯ ವರದಿಯ ಪ್ರತಿಗಳನ್ನು ಸಂಬಂಧಪಟ್ಟ ಎಲ್ಲ ನ್ಯಾಯವಾದಿಗಳಿಗೆ ನೀಡುವಂತೆಯೂ ನ್ಯಾಯಪೀಠ ಸೂಚಿಸಿದೆ. ಸಂತ್ರಸ್ತರಲ್ಲಿ ಬಹುತೇಕ ಮಂದಿ ಅಗತ್ಯ ದಾಖಲೆಗಳನ್ನು ಕಳೆದುಕೊಂಡಿದ್ದು, ಅವುಗಳ ಮರುವಿತರಣೆ ಪ್ರಕ್ರಿಯೆ ಆದಷ್ಟು ಶೀಘ್ರದಲ್ಲೇ
ಆಗಬೇಕು, ಪರಿಹಾರ ಮೊತ್ತವನ್ನು ಹೆಚ್ಚಿಸಬೇಕು ಮತ್ತು ನೋಡಲ್ ಆಡಳಿತ ತಜ್ಞರೊಬ್ಬರನ್ನು ನೇಮಕ ಮಾಡಬೇಕು ಎಂದು ಸಮಿತಿಯು ವರದಿಯಲ್ಲಿ ಶಿಫಾರಸು ಮಾಡಿದೆ.
ಶೀಘ್ರ ಪ್ರಿಯಾಂಕಾ ಭೇಟಿ?: ಹಿಂಸಾಪೀಡಿತ ಮಣಿಪುರಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಭೇಟಿ ನೀಡುವ ಸಾಧ್ಯತೆ ಇದೆ. ಇತ್ತೀಚೆಗಷ್ಟೇ ವಯನಾಡ್ ಸಂಸದ ರಾಹುಲ್ ಗಾಂಧಿ ಅಲ್ಲಿಗೆ ಭೇಟಿ ನೀಡಿದ್ದರು.