Advertisement

Manipur: ಶಾಂತಿ ಮರುಸ್ಥಾಪನೆಗೆ ಇರಲಿ ಮೊದಲ ಆದ್ಯತೆ

12:33 AM Jun 15, 2023 | Team Udayavani |

ದೇಶದ ಈಶಾನ್ಯ ರಾಜ್ಯಗಳಲ್ಲೊಂದಾದ ಮಣಿಪುರದಲ್ಲಿ ಕಳೆದೊಂದು ತಿಂಗಳಿನಿಂದ ನಡೆಯುತ್ತಿರುವ ಜನಾಂಗೀಯ ಸಂಘರ್ಷ ಅಂತ್ಯಗೊಳ್ಳುವ ಲಕ್ಷಣ ಗೋಚರಿಸುತ್ತಿಲ್ಲ. ಇಲ್ಲಿನ ಎರಡು ಪ್ರಮುಖ ಸಮುದಾಯಗಳಾದ ಮೈತೇಯಿ ಮತ್ತು ಕುಕಿ ನಡುವೆ ಬುಡಕಟ್ಟು ಸಮುದಾಯಕ್ಕೆ ಸೇರ್ಪಡೆ ವಿಚಾರವಾಗಿ ಭುಗಿಲೆದ್ದಿರುವ ವಿವಾದ ಭಾರೀ ಹಿಂಸಾಚಾರಕ್ಕೆ ಕಾರಣವಾಗಿದ್ದು, 100ಕ್ಕೂ ಅಧಿಕ ಮಂದಿ ಸಾವನ್ನಪ್ಪಿ, 310ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

Advertisement

ಮೈತೇಯಿ ಸಮುದಾಯವನ್ನು ಬುಡಕಟ್ಟು ಸಮುದಾಯಕ್ಕೆ ಸೇರ್ಪಡೆ ಕುರಿತ ಬೇಡಿಕೆ ಪರಿಶೀಲಿಸುವಂತೆ ಮಣಿಪುರ ಹೈಕೋರ್ಟ್‌, ರಾಜ್ಯ ಸರಕಾರಕ್ಕೆ ಆದೇಶ ನೀಡಿದ ಬಳಿಕ ರಾಜ್ಯದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ ಆರಂಭವಾಗಿತ್ತು. ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.53ರಷ್ಟು ಮೈತೇಯಿ ಸಮುದಾಯದವರಾಗಿದ್ದಾರೆ. ಇನ್ನು ಬುಡಕಟ್ಟು ಸಮುದಾಯಗಳಾಗಿರುವ ನಾಗಾ ಮತ್ತು ಕುಕಿಗಳು ಒಟ್ಟು ಜನಸಂಖ್ಯೆಯ ಶೇ.40ರಷ್ಟಿದ್ದು ಬೆಟ್ಟಗುಡ್ಡಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ಹೈಕೋರ್ಟ್‌ನ ಆದೇಶ ಮತ್ತು ರಾಜ್ಯ ಸರಕಾರದ ನಿಲುವಿನ ಬಗ್ಗೆ ಅಸಮಾಧಾನಗೊಂಡಿದ್ದ ಬುಡಕಟ್ಟು ಸಮುದಾಯಗಳು ಮೇ 3ರಂದು ಆಯೋಜಿಸಿದ್ದ ಬೃಹತ್‌ ರ್ಯಾಲಿಯ ವೇಳೆ ಏಕಾಏಕಿ ಘರ್ಷಣೆ ಆರಂಭವಾಗಿ ಅದು ಹಿಂಸಾರೂಪ ತಾಳಿತ್ತು. ಆರಂಭದಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸದ ರಾಜ್ಯ ಮತ್ತು ಕೇಂದ್ರ ಸರಕಾರಗಳು ಕಠಿನ ಕಾನೂನು ಕ್ರಮ ಹಾಗೂ ಭಾರೀ ಸಂಖ್ಯೆಯಲ್ಲಿ ಅರೆಸೇನಾ ಪಡೆಗಳನ್ನು ನಿಯೋಜಿಸುವ ಮೂಲಕ ಹಿಂಸಾ ಚಾರ ನಿಯಂತ್ರಿಸಲು ಮುಂದಾದವು. ಇದು ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯನ್ನು ಮತ್ತಷ್ಟು ಹದಗೆಡಿಸಿತಲ್ಲದೆ ಹಿಂಸಾಚಾರ ರಾಜ್ಯದ ಇತರ ಪ್ರದೇಶಗಳಿಗೂ ಹರಡಲು ಕಾರಣವಾಯಿತು.

ಕುಕಿ ಮತ್ತು ನಾಗಾ ಸಮುದಾಯಗಳು ಹಿಂದಿನಿಂದಲೂ ತಮ್ಮ ಅಸ್ತಿತ್ವ ಕಾಯ್ದುಕೊಳ್ಳಲು ಬಂಡುಕೋರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ. ಇವ ರೊಂದಿಗೆ ಮ್ಯಾನ್ಮಾರ್‌ ನಿರಾಶ್ರಿತರೂ ಕೈಜೋಡಿಸಿದ್ದಲ್ಲದೆ ಮಣಿಪುರದ ಗುಡ್ಡಗಾಡು ಪ್ರದೇಶಗಳಲ್ಲಿ ಠಿಕಾಣಿ ಹೂಡಲಾರಂಭಿಸಿದರು. ಇದರಿಂದ ಬಹುಸಂಖ್ಯಾಕ ಮೈತೇಯಿ ಸಮುದಾಯದಲ್ಲಿ ಆತಂಕ ಮನೆಮಾಡತೊ ಡಗಿತು. ಹೀಗಾಗಿ ತಮ್ಮನ್ನೂ ಬುಡಕಟ್ಟು ಸಮುದಾಯವಾಗಿ ಪರಿಗಣಿಸ ಬೇಕೆಂಬ ಬೇಡಿಕೆ ಮುಂದಿಟ್ಟರು. ಇದು ಬುಡಕಟ್ಟು ಸಮುದಾಯಗಳ ಆಕ್ರೋಶಕ್ಕೆ ಗುರಿಯಾಗಿ ರಾಜ್ಯದೆಲ್ಲೆಡೆ ಪ್ರಕ್ಷುಬ್ಧ ಪರಿಸ್ಥಿತಿ ಸೃಷ್ಟಿಸಿದೆ. ಕುಕಿ ಬಂಡುಕೋರರಂತೂ ಸರಕಾರದ ವಿರುದ್ಧ ತೀವ್ರ ಹೋರಾಟಕ್ಕಿಳಿದಿದ್ದು, ಸರಕಾರಿ ಕಚೇರಿಗಳು, ಜನಪ್ರತಿನಿಧಿಗಳ ಮನೆಗಳು, ಪೊಲೀಸ್‌ ಠಾಣೆ, ಶಸ್ತ್ರಾಗಾರಗಳ ಮೇಲೆ ದಾಳಿ ನಡೆಸಿ, ಶಸ್ತ್ರಾಸ್ತ್ರಗಳನ್ನು ಲೂಟಿಗೈಯ್ಯುತ್ತಿ ದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜ್ಯಕ್ಕೆ ಭೇಟಿ ನೀಡಿ ಉನ್ನತ ಮಟ್ಟದ ಸಭೆಗಳನ್ನು ನಡೆಸಿ ರಾಜ್ಯ ಸರಕಾರ ಮತ್ತು ಭದ್ರತಾ ಪಡೆಗಳಿಗೆ ಸಲಹೆ ಸೂಚನೆಗಳನ್ನು ನೀಡಿದ್ದರೂ, ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲ. ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆಯಾದರೂ ಬುಡಕಟ್ಟು ಸಮುದಾಯದ ಆತಂಕ ದೂರವಾದಂತೆ ಕಂಡುಬರುತ್ತಿಲ್ಲ.

ಈ ಸಂಘರ್ಷಕ್ಕೆ ಅಂತ್ಯ ಹಾಡಲು ರಾಜ್ಯ ಸರಕಾರ ಎರಡೂ ಸಮುದಾ ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಿಂಸಾಚಾರ ನಿಯಂತ್ರಿಸಿ, ಸಮಾಜದಲ್ಲಿ ಶಾಂತಿ ಮರುಸ್ಥಾಪಿಸಬೇಕಿರುವುದು ಸದ್ಯದ ತುರ್ತು. ಆ ಬಳಿಕ ಸಮಸ್ಯೆಯ ಸಂಕೀರ್ಣತೆಯನ್ನು ಅರಿತುಕೊಂಡು ಕೇಂದ್ರ ಮತ್ತು ರಾಜ್ಯ ಸರಕಾರಗಳು ಉಭಯ ಸಮುದಾಯಗಳ ನಡುವೆ ತಲೆದೋರಿರುವ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next