ಕಟಪಾಡಿ: ಇತ್ತೀಚೆಗಷ್ಟೇ ಅಭಿವೃದ್ಧಿಯಾದ ಕಟಪಾಡಿ-ಮಣಿಪುರ ಸಂಪರ್ಕ ರಸ್ತೆ ಕೆಲವೊಂದು ಮುಂಜಾಗೃತಾ ಕ್ರಮವನ್ನು ಅಳವಡಿಸದಿರುವುದಿಂದ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
ರಸ್ತೆ ಅಭಿವೃದ್ಧಿ ಬಳಿಕ ಸುಸಜ್ಜಿತವಾಗಿದ್ದು, ಇಲ್ಲಿ ಚಾಲಕರು ಹೆಚ್ಚು ವೇಗವಾಗಿ ಸಂಚರಿಸುತ್ತಾರೆ. ಆದರೆ ರಸ್ತೆ ಹೆಚ್ಚಿನ ತಿರುವು ಮತ್ತು ಕೆಲವು ಕಡೆ ತುಸು ಇಕ್ಕಟ್ಟಾಗಿರುವುದರಿಂದ ಅಪಾಯ ಆಹ್ವಾನಿಸುತ್ತಿದೆ.
ರಸ್ತೆಯ ಬದಿಗಳಲ್ಲಿ ಸಂಚಾರಕ್ಕೆ ಅನುಕೂಲವಾಗುವಂತಹ ಆಯಕಟ್ಟಿನ ಸ್ಥಳಗಳಲ್ಲಿ ವೇಗ ನಿಯಂತ್ರಣ ಫಲಕ, ವೇಗದ ಮಿತಿ ಫಲಕ, ರಸ್ತೆಗಳ ಸ್ಥಿತಿಗತಿಯ ಬಗ್ಗೆ ಸಮರ್ಪಕ ಸೂಚನಾ ಫಲಕಗಳನ್ನು ಹಾಕಿಲ್ಲ. ಚಾಲಕರು ವೇಗವಾಗಿ ಬಂದು ಅಗಲ ಕಿರಿದಾದ ಸ್ಥಳಗಳಲ್ಲಿ ಎದುರಿನಿಂದ ವಾಹನ ಬರುವಾಗ ನಿಯಂತ್ರಿಸಲಾಗದೆ, ಅಪಘಾತಕ್ಕೀಡಾಗುತ್ತಿದ್ದಾರೆ. ರಸ್ತೆ ಅಭಿವೃದ್ಧಿಯಾದರೂ ರಸ್ತೆಯ ಇಕ್ಕೆಲಗಳಲ್ಲಿ ತಡೆಬೇಲಿ, ಕಲ್ಲುಗಳನ್ನು ಹಾಕಿಲ್ಲ. ಇದರಿಂದಲೂ ಅಪಾಯ ಹೆಚ್ಚಾಗಿದೆ.
ಮಣಿಪುರ ಹೊಳೆಯ ಸೇತುವೆಯ ಬಳಿ, ರೈಲ್ವೇ ಮೇಲ್ಸೇತುವೆಯ ಪ್ರದೇಶ ಸಹಿತ ಇತರೇ ಹಲವು ಸ್ಥಳಗಳಲ್ಲಿ ಅಪಾಯ ಹೆಚ್ಚಿದೆ. ಕೂಡಲೇ ಲೋಕೋಪಯೋಗಿ ಇಲಾಖೆ ಎಚ್ಚೆತ್ತು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
– ವಿಜಯ ಆಚಾರ್ಯ ಕಟಪಾಡಿ