ಕಟಪಾಡಿ: ಇತ್ತೀಚೆಗಷ್ಟೇ ವಿಸ್ತರೀಕರಣಗೊಂಡು ಡಾಮರೀಕರಣ ಕಂಡಂತಹ ಕಟಪಾಡಿ-ಮಣಿಪುರ ಸಂಪರ್ಕದ ಪ್ರಮುಖ ರಸ್ತೆಯೊಂದು ಒಂದೇ ಮಳೆಗಾಲದಲ್ಲಿ ತನ್ನ ನಿಜ ಬಣ್ಣವನ್ನು ಕಳಚಿಕೊಂಡಿದೆ. ಕಳಪೆ ಕಾಮಗಾರಿಯ ಶಂಕೆ ವ್ಯಕ್ತವಾಗುತ್ತಿದ್ದು, ಎಲ್ಲೆಂದರಲ್ಲಿ ಗುಂಡಿ, ಹೊಂಡ, ರಸ್ತೆ ಬಿರುಕು, ರಸ್ತೆ ಸಿಂಕ್ ಆಗಿದ್ದು, ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ ಎಂದು ನಿತ್ಯ ಸಂಚಾರಿಗಳು ಆರೋಪಿಸುತ್ತಿದ್ದಾರೆ.
ಪ್ರಮುಖವಾಗಿ ಮಣಿಪುರ ರೈಲ್ವೇ ಮೇಲ್ಸೇತುವೆಯ ಬಳಿಯಲ್ಲಿ ದೊಡ್ಡ ಗಾತ್ರದ ಅಪಾಯಕಾರಿ ಹೊಂಡವು ತಿರುವಿನಲ್ಲಿ ಸೃಷ್ಟಿಯಾಗಿದ್ದು ದ್ವಿಚಕ್ರ ಸವಾರರು ಹೊಂಡ ತಪ್ಪಿಸುವ ಭರದಲ್ಲಿ ಬಿದ್ದು (ಅ.17ರಂದು) ಗಾಯಗೊಂಡಿರುತ್ತಾರೆ. ತಿರುವಿನಿಂದ ಕೂಡಿದ ಈ ಭಾಗದಲ್ಲಿ ರಿಕ್ಷಾ, ಲಘು ವಾಹನ ಸಹಿತ ಇತರೇ ವಾಹನಗಳ ಚಾಲಕರು ಹೊಂಡ ತಪ್ಪಿಸುವ ಭರದಲ್ಲಿ ಮತ್ತಷ್ಟು ಹೆಚ್ಚು ಅಪಾಯವನ್ನು ಆಹ್ವಾನಿಸುವಂತಾಗಿದೆ.
ಈ ರಸ್ತೆ ಡಾಮರೀಕರಣ ಪೂರ್ಣಗೊಂಡಿದ್ದು ಬಹಳಷ್ಟು ಸುಸಜ್ಜಿತವಾಗಿ ಆಕರ್ಷಣೀಯವಾಗಿದ್ದು, ವಾಹನ ಚಾಲಕರಿಗೆ ವಾಹನ ಚಾಲನೆಗೆ ಹೆಚ್ಚಿನ ಉಮೇದು ಕೊಡುತ್ತಿದೆ.
ಆದರೆ ಈ ರಸ್ತೆಯು ಹೆಚ್ಚಿನ ತಿರುವುಗಳನ್ನು ಮತ್ತು ಇಕ್ಕಟ್ಟಾದ ಪ್ರದೇಶಗಳನ್ನು ಹೊಂದಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಯಾವುದೇ ತಡೆ ಬೇಲಿಗಳನ್ನು ಅಳವಡಿಸಲಿಲ್ಲ. ಹೊಂಡ ತಪ್ಪಿಸುವ ಭರದಲ್ಲಿ ವಾಹನ ನಿಯಂತ್ರಣ ಕಳೆದುಕೊಂಡರೆ ನೇರವಾಗಿ ಪ್ರಪಾತಕ್ಕೆ ಬೀಳುವ ಅಪಾಯಕಾರಿ ಸ್ಥಿತಿ ಇದೆ ಎಂದು ರಿಕ್ಷಾ ಚಾಲಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಮಣಿಪುರ ರೈಲ್ವೇ ಮೇಲ್ಸೇತುವೆಯ ಪ್ರದೇಶ, ಮಣಿಪುರ ಶಾಲೆಯ ಬಳಿ, ಚಕ್ಕೋಡಿ ಏಣಗುಡ್ಡೆ ಪ್ರದೇಶ ಸಹಿತ ಈ ರಸ್ತೆಯ ಉದ್ದಗಲಕ್ಕೂ ಹೊಂಡ ಮತ್ತು ಬಿರುಕುಗಳು, ಸಿಂಕ್ ಆಗಿರುವುದು ಹೆಚ್ಚು ಕಂಡು ಬರುತ್ತಿದೆ. ರಸ್ತೆ ನಿರ್ಮಾಣದ ಕಾಮಗಾರಿಯು ಕಳಪೆ ಮಟ್ಟದ್ದು ಎಂದು ಸ್ಥಳೀಯರು ಆರೋಪಿಸುತ್ತಿದ್ದು, ಒಂದೇ ಮಳೆಗಾಲದಲ್ಲಿ ರಸ್ತೆಯ ಅಭಿವೃದ್ಧಿ ಕಾಮಗಾರಿಯ ಬಣ್ಣ ಬಯಲಾಗಿದೆ. ಈ ಬಗ್ಗೆ ಸಂಬಂಧ ಪಟ್ಟ ಇಲಾಖೆಯು ತೇಪೆ ಕಾರ್ಯ ನಡೆಸದೆ ಶಾಶ್ವತ ಪರಿಹಾರದ ಜೊತೆಗೆ ಸೂಕ್ತ ಕ್ರಮಕೈಗೊಳ್ಳಲಿ. ಲೋಕೋಪಯೋಗಿ ಇಲಾಖೆಯು ಎಚ್ಚೆತ್ತು ದೀರ್ಘ ಕಾಲದವರೆಗೆ ಈ ರಸ್ತೆಯಲ್ಲಿ ಸುವ್ಯವಸ್ಥಿತ ವಾಹನ ಸಂಚಾರಕ್ಕೆ ಆವಕಾಶ ಮಾಡಿಕೊಡುವಂತೆ ನಿತ್ಯ ಸಂಚಾರಿಗಳು ಆಗ್ರಹಿಸುತ್ತಿದ್ದಾರೆ.
ಕ್ರಿಮಿನಲ್ ಕೇಸ್ ದಾಖಲಿಸಲಿ
ಡಾಮರೀಕರಣ ಆಗಿ ವರ್ಷವೂ ಕಳೆದಿಲ್ಲ. ಒಂದೇ ಮಳೆಗಾಲದಲ್ಲಿ ಕೋಟಿ ರೂ.ಗೂ ಅಧಿಕ ವೆಚ್ಚದ ಕಾಮಗಾರಿಯ ಬಣ್ಣ ಬಯಲಾಗಿದೆ. ಅಲ್ಲಲ್ಲಿ ರಸ್ತೆ ಸಿಂಕ್ ಆಗಿದೆ. ಹೊಂಡ ಬಿದ್ದಿದೆ. ಸೂಕ್ತ ತಡೆ ಬೇಲಿ ಸಹಿತ ಸುಗಮ ಸಂಚಾರಕ್ಕೆ ಯಾವುದೇ ಅನುಕೂಲತೆಯೂ ಕಲ್ಪಿಸಿಲ್ಲ. ಅಧಿಕಾರಿಗಳ ಭರವಸೆ ಪೊಳ್ಳು. ಸಣ್ಣಪುಟ್ಟ ವಿಷಯದ ಬಗ್ಗೆ ಕ್ರಿಮಿನಲ್ ಕೇಸ್ ದಾಖಲಿಸುವ ಬಗ್ಗೆ ಮಾತನಾಡುವ ಸರಕಾರವು ಈ ವಿಷಯದಲ್ಲಿ ಕಾಮಗಾರಿ ನಡೆಸಿದ ಗುತ್ತಿಗೆದಾರರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಿ.
-ಮೊಹಮ್ಮದ್ ಹನೀಫ್,
ಮಾಜಿ ಗ್ರಾ.ಪಂ. ಸದಸ್ಯ, ಮಣಿಪುರ
ಸ್ವತಃ ಪರಿಶೀಲನೆ
ಲೋಕೋಪಯೋಗಿ ಇಲಾಖೆಯ ಒಆರ್‌ಎಫ್ ಯೋಜನೆಯಡಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆದಿರುತ್ತದೆ. ಡಿಎಲ್‌ಸಿ ಅವಧಿಯಲ್ಲಿ ಇದೆ. ಆಗಿರುವ ಅನನೂಕೂಲತೆಗಳನ್ನು ಗುತ್ತಿಗೆದಾರರಿಂದಲೇ ಸರಿಪಡಿಸಿ ಸಮಸ್ಯೆಯನ್ನು ನಿವಾರಿಸಲಾಗುತ್ತದೆ. ಈ ಬಗ್ಗೆ ಸ್ವತಃ ಪರಿಶೀಲನೆ ನಡೆಸಿ ಸೂಚನೆಯನ್ನು ನೀಡಲಾಗುತ್ತದೆ.
-ಜಗದೀಶ್ ಭಟ್, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್,
ಲೋಕೋಪಯೋಗಿ ಇಲಾಖೆ