ಮಣಿಪಾಲ: ಅತ್ಯಾಧುನಿಕ ತಂತ್ರಜ್ಞಾನವಾದ ಕೃತಕ ಬುದ್ಧಿಮತ್ತೆ (ಎಐ) ಬಳಸಿಕೊಂಡು ಸಿದ್ಧಪಡಿಸಿರುವ 3ಟೆಸ್ಲಾ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (ಎಂಆರ್‌ಐ) ಯಂತ್ರ ವನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮಂಗಳವಾರ ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ ಮುಖ್ಯಸ್ಥರಾದ ಡಾ| ರಂಜನ್ ಆರ್. ಪೈ ಉದ್ಘಾಟಿಸಿದರು.
ಇಲ್ಲಿನ ಮಧುವನ್ ಸೆರಾಯ್ ಹೊಟೇಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಣಿಪಾಲ ಹೆಲ್ತ್ ಎಂಟರ್ ಪ್ರೈಸೆಸ್ ಪ್ರೈ.ಲಿ. ಮುಖ್ಯಸ್ಥ ಡಾ| ಸುದರ್ಶನ್ ಬಲ್ಲಾಳ್ ಮಾತನಾಡಿ ರಾಜ್ಯ, ಹೊರಾಜ್ಯದ ವಿವಿಧ ಭಾಗಗಳಿಂದ ಅನೇಕರು ಚಿಕಿತ್ಸೆಗಾಗಿ ಮಣಿಪಾಲಕ್ಕೆ ಭೇಟಿ ನೀಡುತ್ತಿರುತ್ತಾರೆ. 3 ಟೆಸ್ಲಾ ಎಂಆರ್‌ಐ ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಲ್ಲದೆ, ಅನೇಕ ಜಿಲ್ಲೆಗಳ ಗ್ರಾಮೀಣ ರೋಗಿಗಳಿಗೆ ಉತ್ತಮ ಪ್ರಯೋಜನ ನೀಡಲಿದೆ. ಜನರು ಸುಧಾರಿತ ರೋಗನಿರ್ಣಯ ಮತ್ತು ಚಿಕಿತ್ಸೆಗೆ ದೊಡ್ಡ ನಗರಗಳಿಗೆ ಹೋಗಬೇಕಾಗುವುದಿಲ್ಲ ಎಂದರು.
ಮಾಹೆ ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್ ಮಾತನಾಡಿ, ವೈದ್ಯಕೀಯ ಶಿಕ್ಷಣದಲ್ಲಿ ಉತ್ಕೃಷ್ಟತೆ, ಬದ್ಧತೆಯೊಂದಿಗೆ ಮಾಹೆ ವಿ.ವಿ.ಯು 3 ಟೆಸ್ಲಾ ಎಂಆರ್‌ಐ ಯಂತ್ರದಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ವೈದ್ಯಕೀಯ ವಿದ್ಯಾರ್ಥಿಗಳ ಕಲಿಕೆಗೂ ಇದರ ಪ್ರಯೋಜನ ಸಿಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಹೆ ವಿ.ವಿ. ಸಹ ಕುಲಾಧಿಪತಿ ಡಾ| ಎಚ್.ಎಸ್.ಬಲ್ಲಾಳ್ ಮಾತನಾಡಿ, 3 ಟೆಸ್ಲಾ ಎಂಆರ್‌ಐ ಯಂತ್ರದ ಉದ್ಘಾಟನೆಯು ಡಾ| ಟಿಎಂಎ ಪೈ ಅವರ ದೂರದೃಷ್ಟಿ ಯೋಚನೆಗೆ ನೀಡಿದ ಗೌರವವಾಗಿದೆ. ರೆಡಿಯೋ ಡಯಾಗ್ನಸಿಸ್ ವಿಭಾಗದಲ್ಲಿ ಈಗ ಹಲವು ಬದಲಾವಣೆಗಳು ಆಗಿವೆ. 1970-80ರ ದಶಕದಲ್ಲಿದ್ದ ತಂತ್ರಜ್ಞಾನಕ್ಕೂ ಈಗಿನ ತಂತ್ರಜ್ಞಾನಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಹೊಸ ಹೊಸ ತಂತ್ರಜ್ಞಾನ ಬಂದಿದೆ. ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳು ವುದು ಮತ್ತು ಉತ್ತಮ ಗುಣಮಟ್ಟದ ಸೇವೆ ಒದಗಿಸುವಲ್ಲಿ ಮಾಹೆ ವಿ.ವಿ. ಸದಾ ಮುಂದಿದೆ. ದೇಶದ ಟಾಪ್ 10 ವೈದ್ಯಕೀಯ ಕಾಲೇಜುಗಳಲ್ಲಿ ಕೆಎಂಸಿ ಇದೆ ಎಂದು ತಿಳಿಸಿದರು.
ಮುಂಬಯಿ ಮೆಡಿಕಾಬಜಾರ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಹಾಗೂ ವ್ಯವಹಾರ ಮುಖ್ಯಸ್ಥ ವಿ.ಪಿ. ತಿರುಮಲೈ, ಕೆಎಂಸಿ ಡೀನ್ ಡಾ| ಪದ್ಮರಾಜ್ ಹೆಗ್ಡೆ, ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್ ಶೆಟ್ಟಿ, ಮಾಹೆ ಸಿಒಒ ಸಿ.ಜಿ. ಮುತ್ತಣ್ಣ, ಮಾಹೆ ಬೋಧನಾ ಆಸ್ಪತ್ರೆಗಳ ಸಿಒಒ ಡಾ| ಆನಂದ್ ವೇಣುಗೋಪಾಲ್, ಕುಲಸಚಿವ ಡಾ| ಗಿರಿಧರ ಕಿಣಿ ಸಹಿತ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ರೆಡಿಯೋಡಯಾಗ್ನಸಿಸ್ ವಿಭಾ ಗದ ಮುಖ್ಯಸ್ಥೆ ಡಾ| ಪ್ರಕಾಶಿನಿ ಕೆ. ಪ್ರಸ್ತಾವನೆಗೈದರು. ಪ್ರಾಧ್ಯಾಪಕ ಡಾ| ರಾಜಗೋಪಾಲ್ ಕೆ.ವಿ. ಸ್ವಾಗತಿ ಸಿದರು. ಸಹ ಪ್ರಾಧ್ಯಾಪಿಕೆ ಡಾ| ಪ್ರಿಯಾ ಜಯರಾಜ್ ವಂದಿಸಿದರು.
3 ಟೆಸ್ಲಾ ಎಂಆರ್‌ಐ
3ಟೆಸ್ಲಾ ಎಂಆರ್‌ಐ ಯಂತ್ರವು ವೈದ್ಯಕೀಯ ಚಿತ್ರಣದಲ್ಲಿ ಅತ್ಯಾಧುನಿಕ ನಿಖರತೆಯನ್ನು ಎಐ ತಂತ್ರಜ್ಞಾನದ ಮೂಲಕ ನೀಡುತ್ತದೆ. ಉತ್ತಮವಾದ ಚಿತ್ರದ ಗುಣಮಟ್ಟ ಮತ್ತು ಪ್ರಸರಣ-ಪ್ರಬಲವಾದ ಇಮೇಜಿಂಗ್ ಮತ್ತು ಕ್ರಿಯಾತ್ಮಕ ಎಂಆರ್‌ಐ ಸ್ಕ್ಯಾನ್‌ನಲ್ಲಿ ಇನ್ನಷ್ಟು ಸ್ಪಷ್ಟತೆ ಹಾಗೂ ನಿಖರತೆಯನ್ನು ಒದಗಿಸುತ್ತದೆ. ನ್ಯೂರೋ ಇಮೇಜಿಂಗ್, ಹೃದಯರಕ್ತನಾಳದ ಮೌಲ್ಯಮಾಪನ ಮತ್ತು ಮಸ್‌ಕ್ಯುಲೋಸ್ಕೆಲಟಲ್ ಮೌಲ್ಯಮಾಪನದಲ್ಲಿ ಅಪ್ಲಿಕೇಶನ್‌ನೊಂದಿಗೆ ರೋಗನಿರ್ಣಯ ಮತ್ತು ಚಿಕಿತ್ಸೆಯ ಯೋಜನೆ ರೂಪಿಸಲು ಸಹಕಾರಿಯಾಗಲಿದೆ. ವೆಚ್ಚ ಮತ್ತು ಸಮಯದ ಉಳಿತಾಯಕ್ಕೂ ಈ ಯಂತ್ರ ಅನುಕೂಲ ಮಾಡಿಕೊಡಲಿದೆ.