Advertisement

Manipal: ಡಿಸಿ ಕಚೇರಿ ಆವರಣದಲ್ಲೂ ಬೀದಿನಾಯಿ ಉಪಟಳ

03:57 PM Nov 08, 2024 | Team Udayavani |

ಮಣಿಪಾಲ: ನಗರದ ವಿವಿಧೆಡೆ ಬೀದಿ ನಾಯಿಗಳ ಉಪಟಳ ಕಂಡುಬರುತ್ತಿದ್ದು, ಈಗ ಜಿಲ್ಲಾಧಿಕಾರಿ ಕಚೇರಿ ಆವರಣದೊಳಗೂ ಸೇರಿಕೊಂಡಿವೆ.

Advertisement

2 ವಾರಗಳಿಂದಲೂ ಜಿಲ್ಲಾಧಿಕಾರಿ ಕಚೇರಿಯ ಎದುರುಭಾಗದ ಗೇಟ್‌ ಹಾಗೂ ಹಿಂಬದಿಯಿಂದ ನಾಯಿಗಳು ಆಗಮಿಸುತ್ತಿದ್ದು, ಈಗಾಗಲೇ ಕೆಲವು ಮಂದಿ ಕಡಿತಕ್ಕೂ ಒಳಗಾಗಿದ್ದಾರೆ. ಇಲ್ಲಿನ ಭದ್ರತಾ ಸಿಬಂದಿ ನಾಯಿಯನ್ನು ಓಡಿಸುವ ಕೆಲಸ ಮಾಡುತ್ತಿದ್ದರೂ ಅದರ ಉಪಟಳ ಮಾತ್ರ ತಪ್ಪುತ್ತಿಲ್ಲ. ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಕಟ್ಟಡ ಒಳಗೂ ಶ್ವಾನಗಳು ಮಲಗಿರುತ್ತವೆ. ಈ ಬಗ್ಗೆ ನಗರಸಭೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ದಿನನಿತ್ಯ ಜಿಲ್ಲಾಧಿಕಾರಿ ಕಚೇರಿಗೆ ಹಲವಾರು ಮಂದಿ ಭೇಟಿ ನೀಡುತ್ತಿದ್ದು, ಪ್ರತಿಭಟನೆಗಳು ನಡೆಯುವ ವೇಳೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಅಲ್ಲದೆ ಸಭೆ, ಸಮಾರಂಭಗಳು ಇರುವಾಗ ಆಗಮಿಸುವ ಜನರ ಸಂಖ್ಯೆಯೂ ಅಧಿಕವಿರುತ್ತದೆ. ಈ ವೇಳೆ ನಾಯಿಗಳು ಉಪಟಳ ನೀಡಿದರೆ ಸಾರ್ವಜನಿಕರು ತೊಂದರೆ ಎದುರಿಸಬೇಕಾಗುತ್ತದೆ ಎನ್ನುತ್ತಾರೆ ಸ್ಥಳೀಯರೊಬ್ಬರು.

ಈ ಬಗ್ಗೆ ನಗರಸಭೆಯ ಪೌರಾಯುಕ್ತ ಡಾ| ಉದಯ ಶೆಟ್ಟಿ ಪ್ರತಿಕ್ರಿಯಿಸಿದ್ದು, ಜಿಲ್ಲಾಧಿಕಾರಿ ಕಚೇರಿಯೊಳಗೆ ಆಗಮಿಸುವ ನಾಯಿಗಳನ್ನು ಸ್ಥಳಾಂತರ ಮಾಡುವಂತಿಲ್ಲ. ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಹಾಗೂ ಲಸಿಕೆ ನೀಡುವ ಬಗ್ಗೆ ನಗರಸಭೆಯ ಮೂಲಕ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Advertisement

ಪೊದೆಗಳಲ್ಲಿ ಬಂಧಿಯಾದ ದಂಡಿ ಪ್ರತಿಮೆ
ಡಿಸಿ ಕಚೇರಿ ಆವರಣದ ಒಳಗಿರುವ ದಂಡಿ ಸತ್ಯಾಗ್ರಹದ ಸ್ಮರಣೆಯ ಪ್ರತಿಮೆ ಪೊದೆಗಳಿಂದ ಆವರಿಸಿದೆ. ಸುತ್ತಲೂ ಪೊದೆಗಳು ಬೆಳೆದು ನಿಂತ ಪರಿಣಾಮ ನಾಯಿಗಳು ಹಾಗೂ ವಿಷಜಂತುಗಳು ಕೂಡ ಇಲ್ಲಿ ಆಶ್ರಯ ಪಡೆಯುತ್ತಿವೆ. ಅಲ್ಲದೆ ಸ್ಥಳೀಯ ಕಟ್ಟಡದ ತ್ಯಾಜ್ಯಗಳನ್ನು ಇಲ್ಲಿ ಎಸೆಯಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next