ಕಾರ್ಕಳ: ಪ್ರತಿಯೊಬ್ಬರಲ್ಲೂ ಅವರದೇ ಆದ ಕೌಶಲಗಳಿರುತ್ತವೆ. ಅದನ್ನು ಯಾವ ರೀತಿಯಲ್ಲಿ ಉಪಯೋಗಿಸಿಕೊಂಡು ಯಶಸ್ಸನ್ನು ಪಡೆಯಲು ಹದಿನೆಂಟು ರೀತಿಯ ವೃತ್ತಿಗಳಲ್ಲಿ ತರಬೇತಿಯನ್ನು ನೀಡಿ, ಸ್ವಂತ ಉದ್ದಿಮೆಗಳನ್ನು ನಡೆಸಲು ಸಹಾಯ ಮಾಡುತ್ತೇವೆ ಎಂಬ ಭರವಸೆಯೊಂದಿಗೆ, ಹೊಸ ಶಿಕ್ಷಣ ನೀತಿಯ ಪಠ್ಯಕ್ರಮದಲ್ಲಿ ಔದ್ಯೋಗಿಕ ಅರ್ಹತೆಗಳನ್ನು ಕೌಶಲದೊಂದಿಗೆ ಪಡೆದುಕೊಳ್ಳಲು ಹೊಸ ರೀತಿಯ ಕೋರ್ಸ್‌ಗಳನ್ನು ಅಳವಡಿಸಲಾಗುವುದು.
ಇದರೊಂದಿಗೆ ಕಲಿಕೆಗೆ ಯಾವತ್ತೂ ಕೊನೆ ಇಲ್ಲ ಹಾಗೂ ವಯಸ್ಸಿನ ಮಿತಿ ಇಲ್ಲ ಎಂದು ಮಣಿಪಾಲ ಕೌಶಲ ಅಭಿವೃದ್ಧಿ ಕೇಂದ್ರದ ನಿರ್ದೇಶಕ ಬ್ರಿಗೇಡಿಯರ್ ಡಾ| ಸುರ್ಜಿತ್ ಸಿಂಗ್ ಪಾಬ್ಲಿ ಹೇಳಿದರು.
ಅವರು ಶ್ರೀ ಭುವನೇಂದ್ರ ಕಾಲೇಜಿನ ಆಂತರಿಕ ಗುಣಮಟ್ಟದ ಭರವಸೆ ಕೋಶ ಹಾಗೂ ಮಣಿಪಾಲ ಕೌಶಲ ಅಭಿವೃದ್ಧಿ ಕೇಂದ್ರದ ಸಹಯೋಗದೊಂದಿಗೆ ನಡೆದ ಒಡಂಬಡಿಕೆ ಪತ್ರದ ವಿನಿಮಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ| ದತ್ತಾತ್ರೇಯ ಮಾರ್ಪಳ್ಳಿಯವರು ಪ್ರಸ್ತಾವನೆಗೈದರು. ಪ್ರಾಂಶುಪಾಲ ಡಾ| ಮಂಜುನಾಥ ಎ. ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಐಕ್ಯೂಎಸಿ ಸಂಯೋಜಕ ಪ್ರೊ| ನಾಗಭೂಷಣ್, ಡಾ| ಎ.ಎನ್. ಕಾಂತರಾಜ್, ಡಾ| ನಾರಾಯಣ ಶೆಣೈ, ಡಾ| ಅಂಜಯ್ಯ ಉಪಸ್ಥಿತರಿದ್ದರು.
ದೀಕ್ಷಾ ಸ್ವಾಗತಿಸಿ, ಸ್ವಾತಿ ವಂದಿಸಿದರು. ಪ್ರೇರಣಾ ನಿರೂಪಿಸಿದರು.