ಉಡುಪಿ: ಮಣಿಪಾಲ ವಿ.ವಿ.ಯ ಅಂಚೆ ಚೀಟಿ ಹಾಗೂ ನಾಣ್ಯ ಸಂಗ್ರಹಕಾರರ ಕ್ಲಬ್ ವತಿಯಿಂದ ದಕ್ಷಿಣ ಕನ್ನಡ ಅಂಚೆ ಚೀಟಿ ಹಾಗೂ ನಾಣ್ಯ ಸಂಗ್ರಹಕಾರರ ಸಂಘದ ಸಹಯೋಗದಲ್ಲಿ ಮಣಿಪಾಲ ವಿ.ವಿ.ಯ ಡಾ| ಟಿ. ಎಂ. ಎ. ಪೈ ಹಾಲ್‌ನಲ್ಲಿ ಏರ್ಪಡಿಸಲಾದ ತುಳುನಾಡಪೆಕ್ಸ್ – 2017 ಎನ್ನುವ ಪ್ರಾದೇಶಿಕ ಅಂಚೆ ಚೀಟಿ ಹಾಗೂ ನಾಣ್ಯಗಳ 2 ದಿನದ ಪ್ರದರ್ಶನವನ್ನು ಶನಿವಾರ ಮಣಿಪಾಲ ವಿ.ವಿ.ಯ ಸಹ ಕುಲಪತಿ ಡಾ| ಎಚ್. ಎಸ್. ಬಲ್ಲಾಳ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಅಂಚೆ ಚೀಟಿ ಹಾಗೂ ಹಳೇ ನಾಣ್ಯಗಳ ಸಂಗ್ರಹದಿಂದ ಪುರಾತನ ಹಿನ್ನೆಲೆ, ಚರಿತ್ರೆಯನ್ನು ನೆನಪಿಸಲು ಸಾಧ್ಯ. ವಿದ್ಯಾರ್ಥಿಗಳಿಗೆ ಸಾಧನೆ ಮಾಡಲು ಈ ಹವ್ಯಾಸ ಪ್ರೇರಣೆಯಾಗಲಿದೆ ಎಂದು ಹೇಳಿದರು.
ಮುಖ್ಯ ಅಂಚೆ ಅಧೀಕ್ಷಕ ಎಸ್. ರಾಜೇಂದ್ರ ಕುಮಾರ್ ಮಾತನಾಡಿ ಅಂಚೆ ಚೀಟಿ ರಚನೆ ಒಂದು ಕಲೆ. ಭಾರತ ಸರಕಾರವೇ ಇದನ್ನು ಮಾಡುತ್ತಿದ್ದು, ಇದರಿಂದ ದೇಶದ ಕಲೆ, ಸಂಸ್ಕೃತಿ, ಆಚಾರ- ವಿಚಾರ, ಇತಿಹಾಸ ತಿಳಿಯಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಉಪ ಕುಲಪತಿ ಡಾ| ವಿನೋದ್ ಭಟ್, ಟಿ.ಎಂ.ಎ. ಪೈ ಅಸೋಸಿಯೇಶನ್ ಕಾರ್ಯದರ್ಶಿ ಅಶೋಕ್ ಪೈ, ಮಣಿಪಾಲ ವಿ.ವಿ. ಅಂಚೆ ಚೀಟಿ ಹಾಗೂ ನಾಣ್ಯ ಸಂಗ್ರಹಕಾರರ ಕ್ಲಬ್‌ನ ನಿರ್ದೇಶಕಿ ಡಾ| ಸುಮಾ ನಾಯರ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಎಂಐಟಿ 60 ನೇ ವರ್ಷಾಚರಣೆಯ ಕುರಿತ ವಿಶೇಷ ಅಂಚೆ ಲಕೋಟೆ, ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜು, ಶಾರದಾ ರೆಸಿಡೆನ್ಶಿಯಲ್ ಶಾಲೆ, ಪೈಲೂರು ಲಕ್ಷ್ಮಿ ನಾರಾಯಣ ರಾವ್, ತುಳುನಾಡು ಆಹಾರ ವಿಶೇಷ ಲಕೋಟೆ ಹಾಗೂ ಒಂದು ಅಂಚೆ ಮುದ್ರೆಯನ್ನು ಬಿಡುಗಡೆಗೊಳಿಸಲಾಯಿತು.