Advertisement

ಮಣಿಪಾಲ: ಕರಾವಳಿ ಜಿಲ್ಲೆಗಳ ನಾಲ್ವರು ಸಾಧಕರಿಗೆ ಹೊಸ ವರ್ಷದ ಪ್ರಶಸ್ತಿ

03:27 AM Jan 09, 2021 | Team Udayavani |

ಉಡುಪಿ, ಜ. 8: ಮಣಿಪಾಲ ಮಾಹೆ ವಿ.ವಿ., ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌, ಮಣಿಪಾಲ ಎಜುಕೇಶನ್‌  ಮೆಡಿಕಲ್‌ ಗ್ರೂಪ್‌ ಹಾಗೂ ಮಣಿಪಾಲ ಮೀಡಿಯ ನೆಟ್‌ವರ್ಕ್‌ ಲಿ.,ಗಳ ಜಂಟಿ ಆಶ್ರಯದಲ್ಲಿ ಹೊಸವರ್ಷದ ಶುಭಾವಸರದಲ್ಲಿ ಜ. 9ರಂದು ಕರಾವಳಿ ಜಿಲ್ಲೆಗಳ ನಾಲ್ವರು ಸಾಧಕರಿಗೆ ಹೊಸ ವರ್ಷದ ಪ್ರಶಸ್ತಿ ಪ್ರದಾನವಾಗಲಿದೆ.  ಈ ಸಾಧಕರ ಕಿರು ಪರಿಚಯ ಇಲ್ಲಿದೆ. ವರ್ಚುವಲ್‌ ಪ್ಲಾಟ್‌ಫಾರ್ಮ್ನಲ್ಲಿ (ಆನ್‌ಲೈನ್‌) ನಡೆಯಲಿರುವ ಈ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜ. 9ರ ಸಂಜೆ 5.30ಕ್ಕೆ ಡಿಡಿಡಿ.ಚಜಛಿಞಚnಜಿಟಚl.ಟ್ಟಜ ಮೂಲಕ ವೀಕ್ಷಿಸಬಹುದು. ಸಂಜೆ 5 ಗಂಟೆಗೆ ಲಾಗಿನ್‌ ಆಗಬಹುದು ಎಂದು ಪ್ರಕಟನೆ ತಿಳಿಸಿದೆ.

Advertisement

ಬಹುಮುಖ ಪ್ರತಿಭೆಯ ಗ್ರಂಥಕರ್ತೆ, ಕಲಾವಿದೆ ಉಷಾ ಪಿ. ರೈ :

ಲೇಖಕಿಯಾಗಿ, ಪ್ರತಿಭಾವಂತೆ ಕಲಾವಿದೆಯಾಗಿ ಪ್ರಸಿದ್ಧಿ ಪಡೆದಿರುವ ಉಷಾ ಪಿ. ರೈ ಈಗ ಬೆಂಗಳೂರಿನಲ್ಲಿ ನೆಲೆ

ಸಿದ್ದರೂ ಉಡುಪಿಯ ಮಗಳು. ನವಯುಗ ಖ್ಯಾತಿಯ ಹೊನ್ನಯ್ಯ ಶೆಟ್ಟರ ಪುತ್ರಿ.  ಹೊನ್ನಯ್ಯ ಶೆಟ್ಟರದು ಶಿಕ್ಷಕ, ಪತ್ರಕರ್ತ, ಕವಿ, ಪ್ರಕಾಶಕರಾಗಿ ಬಹುಮುಖ ಸಾಧನೆ.  ಉಷಾ ಅವರು ಉಡುಪಿಯ ಸೈಂಟ್‌ ಸಿಸಿಲಿಯಿಂದ ತೊಡಗಿ ಎಂ.ಜಿ.ಎಂ. ಕಾಲೇಜಿನಲ್ಲಿ ಇಂಟರ್‌ ವಿೂಡಿಯೆಟ್‌, ಪೂರ್ಣಪ್ರಜ್ಞ  ಕಾಲೇಜಿನಲ್ಲಿ ಬಿ.ಎ., ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಎಂ.ಎ. ಪಡೆದವರು.

25 ವರ್ಷ ವಿಜಯ ಬ್ಯಾಂಕಿನಲ್ಲಿ ಆಫೀಸರ್‌ ಆಗಿ ದುಡಿದು 1999ರಲ್ಲಿ ಸ್ವಯಂ ನಿವೃತ್ತಿ ಪಡೆದರು. ಬರವಣಿಗೆ ಅವರಿಗೆ ಅತ್ಯಂತ ಪ್ರಿಯ ಹವ್ಯಾಸ.  ಅಪಘಾತವೊಂದರ ಬಳಿಕ ಚಿತ್ರಕಲೆಯ ಅಭ್ಯಾಸ, ಪರಿಣತಿ, ಸಾರ್ವಜನಿಕ ಕಲಾಭಿವ್ಯಕ್ತಿ, ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ  ಕೃತಿ ರಚಿಸಿದ್ದಾರೆ.  ಸಣ್ಣ ಕತೆ, ಕಾದಂಬರಿ, ಕವನ, ಚುಟುಕುಕವನ, ಲಲಿತ ಪ್ರಬಂಧ. ವಾರ್ತಾ ಪತ್ರಿಕೆಗಳಲ್ಲಿ, ಸಾಮಯಿಕ ಸಂಚಿಕೆಗಳಲ್ಲಿ ಅವರ ಕೃತಿಗಳು ಪ್ರಕಟವಾಗಿವೆ.  ಇಂಗ್ಲಿಷಿನಲ್ಲೂ ಅವರು ಕೃತಿ ರಚನೆ ಮಾಡಿದ್ದಾರೆ.  ತುಳುವಿನಲ್ಲೂ ಬರೆದಿದ್ದಾರೆ.

Advertisement

“ಅನುಬಂಧ’, “ನಿಯತಿ’ ಮೊದಲಾದ ಏಳು ಕಾದಂಬರಿಗಳು, “ಕನಸುಗಳು, ನನಸುಗಳು’, “ಮಲ್ಲಿಗೆದ ಮುಗುರು’ ಇತ್ಯಾದಿ 25 ಕವನ ಸಂಕಲನಗಳು, ಮೂರು ಸಣ್ಣ ಕತೆಗಳ ಸಂಕಲನಗಳು, ನಾಲ್ಕು ಪ್ರಬಂಧ ಸಂಕಲನಗಳು, ಪ್ರವಾಸ ಕಥನ, ಜೀವನ ಚರಿತ್ರೆ, ಆತ್ಮ ಚರಿತೆ, ಸಂಪಾದಿತ ಕೃತಿಗಳು ಇತ್ಯಾದಿಗಳನ್ನು ರಚಿಸಿದ್ದಾರೆ.  ಚಿತ್ರಕಲೆಯಲ್ಲೂ ಅವರು ವಿಶೇಷ ಪ್ರತಿಭೆಯನ್ನು ತೋರಿಸಿದ್ದಾರೆ.

ಖ್ಯಾತ ಹೃದಯರೋಗ ಚಿಕಿತ್ಸಾ ತಜ್ಞ ಡಾ| ಕೆ.ಎಸ್‌.ಎಸ್‌. ಭಟ್‌ :

ಬೆಂಗಳೂರು ಮಣಿಪಾಲ ಹಾಸ್ಪಿಟಲ್‌ನಲ್ಲಿ ಹೃದಯ ರೋಗ ಚಿಕಿತ್ಸೆಯಲ್ಲಿ ಎಮೆರಿಟಸ್‌ ಸಲಹಾ ತಜ್ಞರಾಗಿರುವ ಡಾ| ಕೆ.ಎಸ್‌.ಎಸ್‌. ಭಟ್‌ ಅವರು ರಾಷ್ಟ್ರೀಯ, ಅಂತಾರಾಷ್ಟ್ರೀಯ ನೆಲೆಯ  ಪ್ರತಿಷ್ಠಿತ ವೈದ್ಯರು. ಕಾಸರಗೋಡು ಜಿಲ್ಲೆಯಲ್ಲಿ 1939ರಲ್ಲಿ ಅವರ ಜನನ.  ಎಲೋಶಿಯಸ್‌ನಲ್ಲಿ ಕಾಲೇಜು, ಎ.ಐ.ಐ.ಎಂ.ಎಸ್‌. ನ ಭೋಪಾಲ್‌ ಕೇಂದ್ರದ ಗಾಂಧಿ ಮೆಡಿಕಲ್‌ ಕಾಲೇಜಿನಲ್ಲಿ ಮೊದಲನೇ ತಂಡದ ಎಂಬಿಬಿಎಸ್‌ ಮಾಡಿದವರು. ಉಚ್ಚ ವೈದ್ಯಕೀಯ ಶಿಕ್ಷಣವನ್ನು ದಿಲ್ಲಿ ವಿ.ವಿ., ನ್ಯೂಜಿಲ್ಯಾಂಡಿನ ಒಟಾಗೊ ಮೆಡಿಕಲ್‌ ಸ್ಕೂಲ್‌, ಅಲಬಾಮ ಅಮೆರಿಕ ವಿ.ವಿ., ಬರ್ಮಿಂಗ್‌ಹ್ಯಾಮ್‌ ವಿ.ವಿ., ಅಮೆರಿಕದ ಮೇಯೋ ಕ್ಲಿನಿಕ್‌ ಇತ್ಯಾದಿಗಳಲ್ಲಿ ಪಡೆದರು. 1985ರಲ್ಲಿ ಬೆಂಗಳೂರಿನಲ್ಲಿ ಹಾರ್ಟ್‌ ಕ್ಲಿನಿಕ್‌ ಸ್ಥಾಪಿಸಿದರು.  1988ರಲ್ಲಿ ಬೆಂಗಳೂರಿನ ಮಣಿಪಾಲ ಹಾಸ್ಪಿಟಲಿನಲ್ಲಿ ಹೃದಯ ರೋಗ ಚಿಕಿತ್ಸೆಯ ಸೇವೆ ಪ್ರಾರಂಭಿಸಿದ ಅವರು, ಈಗಲೂ ಸಲಹಾ ವೈದ್ಯರಾಗಿರುವುದರೊಂದಿಗೆ ಇತರ ಅನೇಕ ಸಂಸ್ಥೆಗಳಲ್ಲಿ ತಜ್ಞ ಸೇವೆ ಒದಗಿಸುತ್ತಾರೆ. ವೈದ್ಯಕೀಯ ಪಠ್ಯ ಪುಸ್ತಕಗಳಲ್ಲಿ ಅವರ ತಜ್ಞ ಲೇಖನಗಳು ಅಡಕಗೊಂಡಿವೆ.  ಅನೇಕ ವೈದ್ಯಕೀಯ  ಸಂಘ ಸಂಸ್ಥೆಗಳಲ್ಲಿ ಆಡಳಿತ, ಅಭಿವೃದ್ಧಿ ಕಾರ್ಯಗಳಲ್ಲಿ ಅವರು ನೆರವು ನೀಡಿದ್ದಾರೆ. ಅವರ ನಿಷ್ಠೆ, ಪ್ರಾಮಾಣಿಕತೆಗಳನ್ನು ಅರಿತುಕೊಂಡ ಲಿಬಿಯಾದ ಅಧ್ಯಕ್ಷ ಕರ್ನಲ್‌ ಗಡ್ಡಫಿ ಅವರನ್ನು ತಮ್ಮ ಖಾಸಗಿ ವಲಯದ ಆಪ್ತ ವೈದ್ಯರನ್ನಾಗಿ ನೇಮಿಸಿದರು.

ಹೃದಯ ಚಿಕಿತ್ಸೆಗೆ ಸಂಬಂಧಿಸಿ ಅನೇಕ ಸೇವಾ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿದ್ದು ಹಲವು ರಾಜ್ಯಪಾಲರಿಗೂ ಖಾಸಗಿ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ರಾಜಕೀಯ ಮುತ್ಸದ್ದಿ ಕೆ. ಅಭಯಚಂದ್ರ ಜೈನ್‌ :

ಅಭಯಚಂದ್ರ ಜೈನ್‌ ಮೂಡುಬಿದಿರೆಯ ಖ್ಯಾತ ಶಿಕ್ಷಕ ಮತ್ತು ಕ್ರೀಡಾಪಟುವಾಗಿದ್ದ ಎಂ.ಕೆ. ಅನಂತರಾಜ್‌ ಅವರ ಪುತ್ರ.  ಅನಂತರಾಜ್‌ ಅವರು ಬನಾರಸ್‌ ವಿ.ವಿ.ಯಲ್ಲಿ ಟೆನಿಸ್‌ ಚಾಂಪಿಯನ್‌ ಆಗಿದ್ದವರು.  ರಣಜಿ ಟ್ರೋಫಿಯಲ್ಲಿ ಆಡಿದವರು.  1949ರಲ್ಲಿ ಜನಿಸಿದ ಅಭಯಚಂದ್ರ ಅವರು ಮಂಗಳೂರಿನ ಕರ್ನಾಟಕ ಪಾಲಿ ಟೆಕ್ನಿಕ್‌ ಕಾಲೇಜಿನಲ್ಲಿ 1973-74ರಲ್ಲಿ ವಿದ್ಯಾರ್ಥಿಯಾಗಿದ್ದಾಗ ವಿದ್ಯಾರ್ಥಿ ಅಧ್ಯಕ್ಷರಾಗಿದ್ದರು. ವಿದ್ಯಾರ್ಥಿಯಾಗಿದ್ದಾಗಲೇ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ್ದರು.

ವೀರಪ್ಪ ಮೊಲಿ ಅವರ ಹಿರಿತನದಲ್ಲಿ 1972ರ ಅಸೆಂಬ್ಲಿ ಚುನಾವಣೆಯಲ್ಲಿ ಕಾರ್ಯಕರ್ತರಾದರು. 1980ರಲ್ಲಿ ಜಿಲ್ಲಾ ಯುವ ಕಾಂಗ್ರೆಸಿನ ಉಪಾಧ್ಯಕ್ಷರಾದರು. 1992ರಲ್ಲಿ ವಿಧಾನಪರಿಷತ್‌ ಸದಸ್ಯರಾಗಿ ಚುನಾಯಿತರಾದರು. 1999- 2008ರ ವರೆಗೆ 2 ಬಾರಿ ಶಾಸಕರಾಗಿ ಆಯ್ಕೆಯಾದ ಅವರು ವಿರೋಧ ಪಕ್ಷದ ಮುಖ್ಯ ಸಚೇತಕರಾಗಿದ್ದರು.  2013ರಲ್ಲಿ ಮತ್ತೂಮ್ಮೆ ಮೂಲ್ಕಿ- ಮೂಡುಬಿದಿರೆ ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾದರಲ್ಲದೇ  ಯುವಜನ ಸೇವೆ ಮತ್ತು ಮತ್ಸೋದ್ಯಮ ಖಾತೆಯ ಸಚಿವರಾದರು. ಅನೇಕ ಸಂಘ ಸಂಸ್ಥೆಗಳ ಆಡಳಿತ ಮಂಡಳಿಗಳಲ್ಲಿದ್ದು ಮಾರ್ಗದರ್ಶನ ನೀಡುತ್ತಿದ್ದಾರೆ.  ಮಹಾವೀರ ಕಾಲೇಜು, ಜಿ.ವಿ. ಪೈ ಆಸ್ಪತ್ರೆಗಳ ಆಡಳಿತ ಸಂಸ್ಥೆಗಳಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ.  ಮಹಾವೀರ ಮೋಟರ್ನ ಮಾಲಕರು, ಸುಗಮ ಟೂರಿಸ್ಟ್‌ ಕಾರ್ಪೋರೇಶನಿನ ನಿರ್ದೇಶಕರು, ಅನಂತರಾಜ್‌ ಸ್ಮಾರಕ ಕ್ರೀಡಾ ಕಾಲೇಜಿನ ಟ್ರಸ್ಟಿ – ಹೀಗೆ ಅನೇಕ ಹೊಣೆಗಾರಿಕೆಯ ಸ್ಥಾನಗಳಲ್ಲಿ ಅವರಿದ್ದಾರೆ.

ಯಕ್ಷಗಾನ ಕಲೆಯಲ್ಲಿ ಸಿದ್ಧಿ ಪಡೆದ ಕೃಷ್ಣ ವಿಷ್ಣು ಯಾಜಿ :

ಈಗ ಯಕ್ಷಲೋಕದ ಸಾಮ್ರಾಟರಾಗಿರುವ ಕೃಷ್ಣ ಯಾಜಿ ಅವರದು 50 ವರ್ಷ ಕಾಲದ ಕಲಾನುಭವವಿರುವ ಬಡಗು ತಿಟ್ಟಿನ ಧೀಮಂತ ಕಲಾವಿದರು.  ಕುಮಟಾ ತಾಲೂಕಿನ ವಳಗಳ್ಳಿಯ ನಿವಾಸಿ. ಒಂಬತ್ತು ಬೇರೆ ಬೇರೆ ಮೇಳಗಳಲ್ಲಿ ಸೇವೆ ಸಲ್ಲಿಸಿ ಕಲಾ ಜೀವನದ ಕಷ್ಟಕಾರ್ಪಣ್ಯಗಳನ್ನು ಅನುಭವಿಸಿದವರು.  ಕಲಾ ನೈಪುಣ್ಯವನ್ನು ಮೆರೆದವರು.  ಜನರ ಪ್ರೀತ್ಯಾದರಗಳಿಗೆ ಪಾತ್ರರಾದವರು.  ಇಡಗುಂಜಿ, ಅಮೃತೇಶ್ವರಿ, ಸಾಲಿಗ್ರಾಮ ಮುಂತಾದ ಪ್ರಸಿದ್ಧ ಮೇಳಗಳಲ್ಲಿ ಕಲಾವಿದರಾಗಿದ್ದವರು.  ಅವರ ಹೆಸರಾಂತ ವೇಷಗಳೆಂದರೆ ಸುಧನ್ವಾರ್ಜುನದಲ್ಲಿ ಸುಧನ್ವ, ಅರ್ಜುನ; ಕೃಷ್ಣ ಸಂಧಾನದ ಕೌರವ; ಚಂದ್ರಾವಳಿ ವಿಲಾಸದಲ್ಲಿ ಕೃಷ್ಣ; ಸೀತಾ ವಿಯೋಗದ ರಾಮ ಇತ್ಯಾದಿ.  ಅವರ ಕಲಾ ಪ್ರೌಢಿಮೆಯನ್ನು ಗೌರವಿಸಿ ಸಂಘ ಸಂಸ್ಥೆಗಳು ಅವರನ್ನು ವಿವಿಧ ರೀತಿಗಳಲ್ಲಿ ಸಮ್ಮಾನಿಸಿವೆ.  ಮುಂಬಯಿಯ ವಿಶ್ವೇಶ್ವರಯ್ಯ ಸ್ಮಾರಕ ಕಲಾಭವನ ಅವರಿಗೆ ಉದ್ದಾಮ ಕಲಾವಿದರೆಂಬ ಬಿರುದು ನೀಡಿದೆ.  ಯಕ್ಷ ಕಲಾರಂಜಿನಿಯಿಂದ ಸ್ವರ್ಣಕಮಲ ಪ್ರಶಸ್ತಿ, ಪೇಜಾವರ ಶ್ರೀಗಳಿಂದ ರಾಮವಿಟ್ಠಲ ಪ್ರಶಸ್ತಿ, ಸ್ವರ್ಣವಲ್ಲೀ ಶ್ರೀಗಳಿಂದ ಯಕ್ಷಕಲಾ ತಿಲಕವೆಂಬ ಬಿರುದು, ಕಲಾದರ್ಶಿನಿ ಸಂಘದಿಂದ ಶಿವರಾಮ ಕಾರಂತ ಪ್ರಶಸ್ತಿ ಇತ್ಯಾದಿ ಅವರಿಗೆ ಲಭಿಸಿವೆ.  2017ರಲ್ಲಿ ಕರ್ನಾಟಕ ಸರಕಾರವು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.  ಯಕ್ಷಗಾನ ಕಲಾವಿದರಾಗಿ ಯಶಸ್ಸು ಕಂಡ ಕೃಷ್ಣ ಯಾಜಿ ಅವರು ಆರ್ಥಿಕ ಸಂಕಷ್ಟದಲ್ಲಿರುವ ಯಕ್ಷಗಾನ ಕಲಾವಿದರ ಸಹಾಯಕ್ಕಾಗಿ ಯಾಜಿ ಯಕ್ಷಮಿತ್ರ ಮಂಡಳಿ ಎಂಬ ಸೇವಾ ಸಂಸ್ಥೆಯನ್ನು ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next