Advertisement

ಸಕಾರಾತ್ಮಕ ಶಿಕ್ಷಣ: ಡಾ|ಸುದರ್ಶನ ಬಲ್ಲಾಳ್‌ ಕರೆ

09:03 AM Nov 17, 2018 | |

ಉಡುಪಿ: ಇಂದು ಸಮಾಜದಲ್ಲಿ ಕೊರತೆ ಕಾಣುತ್ತಿರುವ ಸಹನೆ, ಲಿಂಗ ಸೂಕ್ಷ್ಮ, ಇತರರ ಹಕ್ಕುಗಳಿಗೆ ಗೌರವ ಕೊಡುವುದು, ಮೌಲ್ಯ, ನಾಗರಿಕ ಪ್ರಜ್ಞೆಯಂತಹ ವಿಚಾರಗಳನ್ನು ಶಿಕ್ಷಣದ ಪಠ್ಯಕ್ರಮದಲ್ಲಿ ಸೇರಿಸಬೇಕಾದ ಅಗತ್ಯವಿದೆ ಎಂದು ಬೆಂಗಳೂರಿನ ಮಣಿಪಾಲ್‌ ಹೆಲ್ತ್‌ ಎಂಟರ್‌ಪ್ರೈಸಸ್‌ ಪ್ರೈ.ಲಿ. ಅಧ್ಯಕ್ಷ ಡಾ| ಎಚ್‌. ಸುದರ್ಶನ ಬಲ್ಲಾಳ್‌ ಕರೆ ನೀಡಿದರು.

Advertisement

ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ಶುಕ್ರವಾರ ಮಾಹೆ ವಿ.ವಿ.ಯ ಪ್ರಥಮ ದಿನದ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಇಂತಹ ವಿಷಯಗಳನ್ನು ಶಾಲಾ ಕಾಲೇಜುಗಳಲ್ಲಿ ಗಣಿತ, ಭೌತ ಶಾಸ್ತ್ರ, ರಸಾಯನ ಶಾಸ್ತ್ರದಂತಹ ವಿಷಯಗಳ ಜತೆ ಕಲಿಸುವಂತಹ ವಾತಾವರಣ ನಿರ್ಮಾಣವಾಗಬೇಕೆಂದು ಆಶಿಸಿದರು. ಪ್ರಸ್ತುತ ನಿಯಂತ್ರಣ ಮಂಡಳಿಗಳು ನಡತೆ, ಸಂವಹನ ಕಲೆಗಳನ್ನು ಕಲಿಸಲು ಮುಂದಾಗಿರುವುದು ಸ್ತುತ್ಯರ್ಹ ಎಂದರು. 

ಕ್ಯಾನ್ಸರ್‌ ರೋಗ- ಭ್ರಷ್ಟಾಚಾರವೆಂಬ ಕ್ಯಾನ್ಸರ್‌
ನಾವು ವೈದ್ಯಕೀಯ ವೃತ್ತಿಪರರು ಕ್ಯಾನ್ಸರ್‌ ಕಾಯಿಲೆಗಳನ್ನು ನಿಯಂತ್ರಿಸಲು ಯಶಸ್ವಿಗಳಾಗುತ್ತಿದ್ದೇವೆ. ಆದರೆ ಸಮಾಜ ದಲ್ಲಿಂದು “ಭ್ರಷ್ಟಾಚಾರವೆಂಬ ಕ್ಯಾನ್ಸರ್‌’ನ್ನು ನಿಯಂತ್ರಿಸಲು ವಿಫ‌ಲವಾಗುತ್ತಿದ್ದೇವೆ. ದೇಶದ ಬಹುತೇಕ ಕೆಟ್ಟ ಪಿಡುಗುಗಳ ಮೂಲವಾದ ಭ್ರಷ್ಟಾಚಾರವು ದೇಶವನ್ನು ನಾಶಪಡಿಸುವ ಮೊದಲು ಇದನ್ನು ಯುವ ಜನತೆ ಕಿತ್ತು ಹಾಕಬೇಕು ಎಂದು ಕರೆ ನೀಡಿದರು. 

ಬಳಸದ ಶಾಲಾ ಮೈದಾನಗಳು
ಈಗ ಮಗು ಹುಟ್ಟುವ ಮೊದಲೇ ಶಿಕ್ಷಣಕ್ಕಾಗಿ ಹಾತೊರೆಯುವ ಸ್ಥಿತಿ ಇದೆ. 2-3 ವರ್ಷದ ಮಕ್ಕಳಿಗಾಗಿಯೇ ಶಾಲೆಗಳು ನಡೆಯುತ್ತಿವೆ. ಇವರಿಗೆ ಸಂದರ್ಶನಗಳೂ ಇರುತ್ತವೆ. ಒಂದು ಬಾರಿ ಶಾಲೆ ಸೇರಿದ ಬಳಿಕ ಕಲಿಕೆಯ ಒತ್ತಡವನ್ನು ನಿರಂತರವಾಗಿ ಹೇರಲಾಗುತ್ತಿದೆ. ಬಹುತೇಕ ಶಾಲೆಗಳ ಮೈದಾನಗಳು ಒಟ್ಟು ಸೇರಲು ಮಾತ್ರ ಸೀಮಿತವಾಗುತ್ತಿವೆ. ವಿಶಾಲವಾದ ಮೈದಾನಗಳು ಪಾಳು ಬೀಳುತ್ತಿವೆ. ಇದು ಸಮಾಜದ ಮೇಲೆ ಅಡ್ಡ ಪರಿಣಾಮವನ್ನು ಬೀರುತ್ತದೆ ಮತ್ತು ಇಂತಹ ಪ್ರವೃತ್ತಿಯನ್ನು ಸರಿಪಡಿಸಬೇಕಾಗಿದೆ ಎಂದು ಬಲ್ಲಾಳ್‌ ಹೇಳಿದರು. 

ವಿ.ವಿ. ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಅವರು ಘಟಿಕೋತ್ಸವ‌ ಆರಂಭದ ಉದ್ಘೋಷ ಮಾಡಿದರು. ಕುಲಪತಿ ಡಾ| ಎಚ್‌. ವಿನೋದ ಭಟ್‌ ಅವರು ಮಣಿಪಾಲ ಬೆಳೆದುಬಂದ ಬಗೆಯನ್ನು ವಿವರಿಸಿದರು. ಮಾಹೆ ಟ್ರಸ್ಟ್‌ ಟ್ರಸ್ಟಿ ವಸಂತಿ ಪೈ ಅತಿಥಿಗಳನ್ನು ಗೌರವಿಸಿದರು. ಮೌಲ್ಯಮಾಪನ ಕುಲಸಚಿವ ಡಾ| ವಿನೋದ ಥಾಮಸ್‌ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶಕಿ ಡಾ| ಗೀತಾ ಮಯ್ಯ ಚಿನ್ನದ ಪದಕ ಗಳಿಸಿದವರ ಹೆಸರು, ಶೈಕ್ಷಣಿಕ ಉ± ‌ಕುಲಸಚಿವ (ತಾಂತ್ರಿಕ) ಡಾ| ಪ್ರೀತಮ್‌ಕುಮಾರ್‌ ಪಿಎಚ್‌ಡಿ ಪದ ವೀಧರರ ಹೆಸರು ವಾಚಿಸಿದರು. ಬೇರೆ ಬೇರೆ ಕ್ಯಾಂಪಸ್‌ಗಳಲ್ಲಿರುವ ಸಹ ಕುಲಪತಿಗಳಾದ ಡಾ| ತಮ್ಮಯ್ಯ ಸಿ.ಎಸ್‌. ಡಾ| ಅಬ್ದುಲ್‌ ರಜಾಕ್‌, ಡಾ| ವಿ. ಸುರೇಂದ್ರ ಶೆಟ್ಟಿ, ಡಾ| ಪಿಎಲ್‌ಎನ್‌ಜಿ ರಾವ್‌, ಉಪಕುಲಸಚಿವೆ ಡಾ| ಶ್ಯಾಮಲಾ ಹಂದೆ, ಅಧೀನ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.  ಸಹಕುಲಪತಿ ಡಾ| ಪೂರ್ಣಿಮಾ ಬಾಳಿಗಾ ಸ್ವಾಗತಿಸಿ ಕುಲಸಚಿವ ಡಾ| ನಾರಾಯಣ ಸಭಾಹಿತ್‌ ಅವರು ವಂದಿಸಿ ದರು. ಕೆಎಂಸಿ ಡೀನ್‌ ಡಾ| ಪ್ರಜ್ಞಾ ರಾವ್‌ ಅತಿಥಿಗಳನ್ನು ಪರಿಚಯಿ ಸಿದರು. ಯೋಜನಾ ನಿರ್ದೇಶಕಿ ಡಾ| ಅಪರ್ಣಾ ರಘು ಅವರು ನಿರೂಪಿಸಿದರು. 

Advertisement

ಉಳ್ಳವರು-ಇಲ್ಲದವರ ನಡುವೆ ಅಂತರ
ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಅಭಿವೃದ್ಧಿಗೆ ಹೆಮ್ಮೆ ಇದೆ. ಆದರೆ ದೊಡ್ಡ ಸಂಖ್ಯೆಯಲ್ಲಿ ಶಿಕ್ಷಣದಿಂದ ವಂಚಿತರಾಗುವವರು ಇದ್ದಾರೆ. ಸಂಪತ್ತು ಮತ್ತು ಇತರ ಸಂಪನ್ಮೂಲದ ವಿತರಣೆಯಲ್ಲಿ ಅಗಾಧವಾದ ಅಂತರವಿದೆ. ನಮ್ಮಲ್ಲಿ ಭಾರೀ ವೆಚ್ಚದಾಯಕ ಐಷಾರಾಮಿ ವ್ಯವಸ್ಥೆಗಳಿದ್ದರೆ, ಇನ್ನೊಂದೆಡೆ ಜಗತ್ತಿನ ಅತಿ ದೊಡ್ಡ ಕೊಳಚೆಗೇರಿಗಳೂ ಇವೆ. ತಾರಾ ಮಟ್ಟದ ಆಸ್ಪತ್ರೆಗಳಿದ್ದರೂ ನೂರಾರು ಕಿ.ಮೀ. ದೂರ ಮೂಲಭೂತ ಸೌಕರ್ಯಗಳಿಲ್ಲದ ಪ್ರಾಥಮಿಕ ಆರೋಗ್ಯ ಕೇಂದ್ರಗಳೂ ಇವೆ. ಶ್ರೇಷ್ಠ ದರ್ಜೆಯ ತಾಂತ್ರಿಕ ಸಂಸ್ಥೆಗಳಿದ್ದರೂ ಪ್ರಭಾವ ಮತ್ತು ಹಣ ಬಲದಿಂದ ಆರಂಭಗೊಂಡ ಮೂಲಭೂತ ಸೌಕರ್ಯಗಳಿಂದ ವಂಚಿತವಾದ ತಾಂತ್ರಿಕ ಸಂಸ್ಥೆಗಳೂ ಇವೆ. ಮಹಾತ್ಮಾ ಗಾಂಧಿಯವರ ನಾಡಾದರೂ ಮಹಿಳೆಯರ ಮೇಲೆ ಅಪರಾಧ ಮತ್ತು ಕ್ರೌರ್ಯ ನಡೆಯುತ್ತಲೇ ಇದೆ ಎಂದು ಡಾ| ಬಲ್ಲಾಳ್‌ ಖೇದ ವ್ಯಕ್ತಪಡಿಸಿ, ಉಳ್ಳವರು ಮತ್ತು ಇಲ್ಲದವರ ನಡುವೆ ಇರುವ ಇಂತಹ ಅಂತರವನ್ನು ಸರಿಪಡಿಸದೆ ಹೋದರೆ ಕ್ರಾಂತಿ ಸಂಭವಿಸಬಹುದು ಎಂದು ಎಚ್ಚರಿಸಿದರು.  

ಅಂಕೆಗಳ ಆಟಕ್ಕೆ ಆತಂಕ
ನಾನು ಪಿಯುಸಿಯಲ್ಲಿ ಶೇ.86 ಅಂಕಗಳನ್ನು ಗಳಿಸಿದಾಗ ರಾಜ್ಯದಲ್ಲಿ ಶ್ರೇಷ್ಠ ಹತ್ತು ಸ್ಥಾನ ಪಡೆದವರಲ್ಲಿ ಓರ್ವನಾಗಿದ್ದೆ, ಈಗ ಆಗಿದ್ದರೆ ಕೊನೆಯ ಹತ್ತರಲ್ಲಿ ಓರ್ವನಾಗಿರುತ್ತಿದ್ದೆ. ಈಗ ವೃತ್ತಿಪರ ಕಾಲೇಜುಗಳಲ್ಲಿ ಶೇ.99 ಅಂಕ ಗಳಿಸಿದರೂ ಸಾಕಾಗುತ್ತಿಲ್ಲ. ಈಗ ಶಿಕ್ಷಣ ಕೇವಲ ಅಂಕೆಗಳ ಆಟದಲ್ಲಿ ನಡೆಯುತ್ತಿದೆ. ಎಂಸಿಕ್ಯೂ (ಬಹು ಆಯ್ಕೆ ಪ್ರಶ್ನೆ= ಮಲ್ಟಿಪಲ್‌ ಚಾಯ್ಸ ಕ್ವೆಶ್ಚನ್ಸ್‌ ) ಮುಖ್ಯ. ನನ್ನ ಅಭಿಪ್ರಾಯ ಪ್ರಕಾರ ಅರ್ಹತೆಗಾಗಿ ಪ್ರವೇಶ ಪರೀಕ್ಷೆ ನಡೆದರೆ, ಬುದ್ಧಿಸಾಮರ್ಥ್ಯ ಮತ್ತು ಕೌಶಲ ಆಧರಿಸಿ ಸಂದರ್ಶನ ನಡೆಯಬೇಕು. ಶಿಕ್ಷಣ ಕ್ಷೇತ್ರದ ಹಿರಿಯರು ಈ ಬಗ್ಗೆ ಗಂಭೀರ ಚಿಂತನೆ ನಡೆಸಿ ಬದಲಾವಣೆ ಮಾಡಬೇಕು.
 - ಡಾ| ಸುದರ್ಶನ ಬಲ್ಲಾಳ್‌

Advertisement

Udayavani is now on Telegram. Click here to join our channel and stay updated with the latest news.

Next