ಮಣಿಪಾಲ: ಇಲ್ಲಿಯ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನಾಲ್ಕು ತಿಂಗಳ ಶಿಶುವಿನಲ್ಲಿ ಕಂಡುಬಂದ ಅಪರೂಪದ ಯಕೃತ್ ಗೆಡ್ಡೆಯನ್ನು ಸಂಕೀರ್ಣ ಶಸ್ತ್ರ ಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತೆಗೆಯಲಾಗಿದೆ.
ಈ ಶಿಶುವಿನ ಪೋಷಕರು ಚಿತ್ರ ದುರ್ಗದವರಾಗಿದ್ದು, ಪ್ರಸವಪೂರ್ವ ಸ್ಕ್ಯಾನ್‌ನಲ್ಲಿ ಅವರಿಗೆ ಹುಟ್ಟಲಿರುವ ಮಗುವಿನಲ್ಲಿ ಅಪರೂಪದ ಯಕೃತ್ತಿನ ಗೆಡ್ಡೆಯ ಬಗ್ಗೆ ತಿಳಿಸಿದಾಗ ದುಃಖಗೊಂಡಿದ್ದರು.
ಮಗುವಿನ ಜನನದ ಅನಂತರ ಕಸ್ತೂರ್ಬಾ ಆಸ್ಪತ್ರೆಗೆ ಪೋಷಕರು ಭೇಟಿ ನೀಡಿದ್ದು, ಸಿಟಿ ಸ್ಕ್ಯಾನ್ ಮತ್ತು ಯಕೃತ್ತಿನ ಬಯಾಪ್ಸಿ ಸೇರಿದಂತೆ ಸಂಪೂರ್ಣ ಮೌಲ್ಯ ಮಾಪನ ನಡೆಸಿದ ಬಳಿಕ ಮಗುವಿನ ಯಕೃತ್ತಿನ ಬಲ ಹಾಲೆಯಲ್ಲಿ ಹೆಪಟೊ ಬ್ಲಾಸ್ಟೊಮಾ- ಎಂಬ ಅಪರೂಪದ ಯಕೃತ್ತಿನ ಕ್ಯಾನ್ಸರ್ ಗೆಡ್ಡೆ ಇರುವುದು ಪತ್ತೆಯಾಯಿತು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ಆಸ್ಪತ್ರೆಯ ತಜ್ಞ ಮಕ್ಕಳ ಶಸ್ತ್ರಚಿಕಿತ್ಸಾ ತಂಡವು ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ| ವಿಜಯ್ ಕುಮಾರ್ ಅವರ ನೇತೃತ್ವದಲ್ಲಿ ಈ ಗೆಡ್ಡೆಯನ್ನು ತೆಗೆಯಲಾಯಿತು. ವಿಶ್ವದಾದ್ಯಂತ ಇಂತಹ ಕೇವಲ 14 ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಲಾಗಿದೆ. ತಂಡದಲ್ಲಿ ಡಾ| ಸಂತೋಷ್ ಪ್ರಭು, ಡಾ| ಸಂದೀಪ್ ಪಿ.ಟಿ., ಡಾ| ನಿತಿನ್ ಪೈ, ಡಾ| ರಂಜಿನಿ ಇದ್ದರು.
ಡಾ| ಮಾಳವಿಕಾ ನೇತೃತ್ವದ ಅರಿವಳಿಕೆ ತಂಡದ ಸಹಕಾರ, ಮಕ್ಕಳ ರಕ್ತ ಶಾಸ್ತ್ರ ಮತ್ತು ಆಂಕೊಲೋಜಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ| ವಾಸುದೇವ್ ಭಟ್ ಅವರ ಮಾರ್ಗದರ್ಶನವಿತ್ತು. ವಿಶ್ವ ದರ್ಜೆಯ ವೈದ್ಯಕೀಯ ಸೇವೆ ಒದಗಿಸುವ ಆಸ್ಪತ್ರೆಯ ಬದ್ಧತೆಗೆ ಈ ಪ್ರಕರಣ ಸಾಕ್ಷಿ ಎಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್ ಶೆಟ್ಟಿ ಹೇಳಿದ್ದಾರೆ.