ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ 2,032 ಹಾಸಿಗೆಗಳ ಆಸ್ಪತ್ರೆಯಾದರೂ ಸ್ಪೆಶಲ್ ವಾರ್ಡ್ ಹಾಸಿಗೆಗಳ ಸಂಖ್ಯೆ ಕಡಿಮೆ. ಸ್ಪೆಶಲ್ ವಾರ್ಡ್ ಹಾಸಿಗೆಗಳಿಗೆ ಭಾರೀ ಬೇಡಿಕೆ ಇದ್ದು, ಬೇಕಾದಷ್ಟು ಹಾಸಿಗೆಗಳು ಸಿಗದೆ ನಿತ್ಯ ರೋಗಿಗಳು ಸ್ಪೆಶಲ್ ವಾರ್ಡ್‌ಗಾಗಿ ಕಾಯಬೇಕಾಗಿದೆ. ಈ ಬೇಡಿಕೆಯನ್ನು ಈಡೇರಿಸಲು ವಿವಿಧ ರೀತಿಯ ಒಟ್ಟು 161 ಹಾಸಿಗೆಗಳನ್ನು ಹೊಂದಿರುವ ಹೊಸ ಬ್ಲಾಕ್ ನಿರ್ಮಿಸಲಾಗಿದೆ. ಮಣಿಪಾಲದ ಆರೋಗ್ಯ ಸಂಸ್ಥೆಗಳಿಗೆ ಜಾಗತಿಕ ಸ್ಥಾನಮಾನ ಕಲ್ಪಿಸಿದ ಮಾಹೆ ವಿ.ವಿ. ಕುಲಾಧಿಪತಿ ಡಾ| ರಾಮದಾಸ್ ಎಂ. ಪೈಯವರ ಹೆಸರನ್ನು ಈ ನೂತನ ಬ್ಲಾಕ್‌ಗೆ ಇರಿಸಲಾಗಿದೆ. ಮಣಿಪಾಲ ಸಂಸ್ಥೆಗಳ ಸ್ಥಾಪಕ ಡಾ| ಟಿಎಂಎ ಪೈಯವರ 126ನೆಯ ಜನ್ಮದಿನವಾದ ಎ. 30ರಂದು ಬೆಳಗ್ಗೆ 10 ಗಂಟೆಗೆ ಹೊಸ ಬ್ಲಾಕ್ ಲೋಕಾರ್ಪಣೆಗೊಳ್ಳಲಿದೆ.
ಮಣಿಪಾಲ: ಅತ್ಯಾಧುನಿಕ ಸೌಲಭ್ಯಗಳುಳ್ಳ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಪ್ರಸ್ತುತ ವಿಶೇಷ ಬೆಡ್ (ಸ್ಪೆಶಲ್ ವಾರ್ಡ್ ಹಾಸಿಗೆ) ಗಳಿಗೆ ಭಾರೀ ಬೇಡಿಕೆ ಇರುವ ಕಾರಣ ಈ ಕೊರತೆ ನೀಗಿಸುವುದರೊಂದಿಗೆ ಉತ್ತಮ ಗುಣಮಟ್ಟದ ರೋಗಿಗಳ ಆರೈಕೆ ಮತ್ತು ಚಿಕಿತ್ಸಾ ಸೇವೆಗಳನ್ನು ತ್ವರಿತವಾಗಿ ನೀಡುವ ಗುರಿ ಇರಿಸಿಕೊಂಡು ಹೊಸ ಬ್ಲಾಕ್ ನಿರ್ಮಿಸಲಾಗಿದೆ. ಆರೋಗ್ಯ ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಜಾಗತಿಕ ಮಟ್ಟಕ್ಕೆ ಏರಿಸಲು ಕಾರಣರಾದ ಡಾ| ರಾಮದಾಸ್ ಪೈಯವರ ಹೆಸರನ್ನು ಬ್ಲಾಕ್‌ಗೆ ಇರಿಸಿದ್ದು, ಇದು ಎ. 30ರಂದು ಉದ್ಘಾಟನೆಗೊಳ್ಳಲಿದೆ.
ಮಣಿಪಾಲ ಆಸ್ಪತ್ರೆಯಲ್ಲಿ ಈಗ ಒಟ್ಟು 11 ಬ್ಲಾಕ್‌ಗಳು, 2,032 ಹಾಸಿಗೆಗಳಿವೆ. ಇದರಲ್ಲಿ 90 ಖಾಸಗಿ ಹಾಸಿಗೆ (ಸಿಂಗಲ್ ರೂಮ್ ), 3 ಸೂಟ್ ರೂಮ್ ಮತ್ತು 56 ಸೆಮಿ ಸ್ಪೆಷಲ್ ಹಾಸಿಗೆಗಳಿವೆ. ಉಳಿದುದೆಲ್ಲವೂ ಸಾಮಾನ್ಯ (ಜನರಲ್) ಹಾಸಿಗೆಗಳು. ಹೀಗಾಗಿ ಖಾಸಗಿ ಹಾಸಿಗೆ ಬಯಸುವ ರೋಗಿಗಳಿಗೆ ನಿರೀಕ್ಷಿಸಿದಷ್ಟು ಖಾಸಗಿ ಹಾಸಿಗೆ ಸೇವೆಯನ್ನು ಕೊಡಲು ಆಗುತ್ತಿಲ್ಲ. ನಿತ್ಯ ಸುಮಾರು 50 ರೋಗಿಗಳು ವಿಶೇಷ ಬೆಡ್‌ಗಳಿಗಾಗಿ ಕಾಯುತ್ತಿದ್ದಾರೆ. ಹೀಗೆ ವಿಶೇಷ ಹಾಸಿಗೆಗಳ ಒಳರೋಗಿಗಳ ವಿಭಾಗ ಮತ್ತು ಅಧಿಕ ಒತ್ತಡವಿರುವ ಹೊರರೋಗಿಗಳ ವಿಭಾಗ ಇವೆರಡಕ್ಕೂ ಉತ್ತರ ರೂಪವಾಗಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ ಹೊಸ ಬ್ಲಾಕ್ ನಿರ್ಮಿಸಲಾಗಿದೆ. ಈಗಿರುವ ವಿಶೇಷ ವಾರ್ಡ್‌ಗಳೂ 30-40 ವರ್ಷಗಳ ಹಿಂದೆ ಕಟ್ಟಿಸಿದವು. ಇವುಗಳನ್ನು ಮತ್ತಷ್ಟು ಮೇಲ್ದರ್ಜೆಗೇರಿಸಬೇಕಾದ ಅನಿವಾರ್ಯವೂ ಆಸ್ಪತ್ರೆಯ ಆಡಳಿತ ಮಂಡಳಿಗೆ ಇದೆ.
ಹೊಸ ಬ್ಲಾಕ್‌ನಲ್ಲಿ 10 ಹೊರರೋಗಿ ಸಮಾಲೋಚನೆ ಕೊಠಡಿಗಳು, 34 ಡಬಲ್ ಆಕ್ಯುಪೆನ್ಸಿ ಕೊಠಡಿಗಳು, 75 ಖಾಸಗಿ ಕೊಠಡಿಗಳು, 4 ಪ್ರಮುಖ ಸುಧಾರಿತ ಅತ್ಯಾಧುನಿಕ ಆಪರೇಷನ್ ಥಿಯೇಟರ್‌ಗಳು, 4 ಪ್ರೀಮಿಯರ್ ಸೂಟ್ ಕೊಠಡಿಗಳೊಂದಿಗೆ, 4 ಶಸ್ತ್ರಚಿಕಿತ್ಸಾ ಪೂರ್ವ ಹಾಸಿಗೆಗಳು, 4 ಶಸ್ತ್ರ ಚಿಕಿತ್ಸಾ ಅನಂತರದ ಕೊಠಡಿಗಳು , 14 ತೀವ್ರ ನಿಗಾ ಘಟಕ ಹಾಸಿಗೆಗಳು, 10 ಎಚ್‌ಡಿಯು ಹಾಸಿಗೆಗಳು ಮತ್ತು 16 ಹಾಸಿಗೆಗಳ ದಿನದ ಆರೈಕೆ ಘಟಕ ಹೀಗೆ ಹೊಸ ಬ್ಲಾಕ್‌ನಲ್ಲಿ ಒಟ್ಟು 161 ವಿಶೇಷ ಒಳರೋಗಿ ಹಾಸಿಗೆಗಳ ಸೌಲಭ್ಯವಿದೆ.
ಈ ಬ್ಲಾಕ್‌ನ್ನು ರೋಗಿಗಳ ಜತೆಗೆ ಬರುವ ಸಹಾಯಕರಿಗೂ ಅನುಕೂಲ ವಾಗುವಂತೆ ನಿರ್ಮಿಸಲಾಗಿದೆ. ಈ ಎಲ್ಲ ಸೇವೆಗಳನ್ನು ಆನ್‌ಲೈನ್ ಮತ್ತು ದೂರವಾಣಿ ಮೂಲಕ ಕಾಯ್ದಿರಿಸಬಹುದಾಗಿದೆ. ಎಕ್ಸ್-ರೇ, ರಕ್ತದ ಮಾದರಿ ಸಂಗ್ರಹಣೆ, ಅಲ್ಟ್ರಾ ಸೌಂಡ್ ಔಷಧ ಹೀಗೆ ವಿವಿಧ ಸೇವೆಗಳನ್ನು ಹೊಸ ಬ್ಲಾಕ್‌ನಲ್ಲಿಯೇ ಒದಗಿಸಲಾಗುತ್ತದೆ. ರೋಗಿ
ಗಳಿಗೆ ದೀರ್ಘಾವಧಿಯ ಕಾಯುವಿಕೆ ಯನ್ನು ತಪ್ಪಿಸಲು ಆನ್‌ಲೈನ್ ಅಪಾಯಿಂಟ್ಮೆಂಟ್ ಗಳು ಮತ್ತು ಸಮಾಲೋಚನ ಸಮಯವನ್ನು ಕಾಯ್ದಿರಿಸುವ ಮೂಲಕ ಅವರ ಆಯ್ಕೆಯ ಪರಿಣತ ಸಲಹೆಗಾರರನ್ನು ತಮ್ಮ ಅನುಕೂಲ ಸಮಯದಲ್ಲಿ ಭೇಟಿ ಮಾಡಲು ಪ್ರೀಮಿಯಂ ಹೊರರೋಗಿ ಸಮಾಲೋಚನೆಯ ಸೌಲಭ್ಯ ನೀಡುವ ಉದ್ದೇಶವಿದೆ. ಹೊಸ ಬ್ಲಾಕ್ ತಳ ಅಂತಸ್ತು ಮತ್ತು ಐದು ಮಹಡಿ ಗಳನ್ನು ಒಳಗೊಂಡಿದೆ. ವಿದೇಶಿ ರೋಗಿ ಗಳಿಗೆ ಒಂದೇ ಕಡೆ ವೈದ್ಯಕೀಯ ಮತ್ತು ಆಡಳಿತಾತ್ಮಕ ಸೌಲಭ್ಯಗಳನ್ನು ಪಡೆ ಯಲು ಅನುವು ಮಾಡಿಕೊಡುವ, ಅಂತಾರಾಷ್ಟ್ರೀಯ ರೋಗಿಗಳ ಲಾಂಜ್‌ನೊಂದಿಗೆ ಚಿಕಿತ್ಸಾ ಕ್ರಮ ಪೂರೈಸುವ ಸೌಲಭ್ಯಗಳನ್ನು ಹೊಸ ಬ್ಲಾಕ್ ಹೊಂದಿದೆ.
ನಮ್ಮಲ್ಲಿ ಬೇಡಿಕೆಗಿಂತ ಸ್ಪೆಶಲ್ ವಾರ್ಡ್ ಹಾಸಿಗೆ ಮತ್ತು ಸೆಮಿ ಸ್ಪೆಶಲ್ ವಾರ್ಡ್ ಹಾಸಿಗೆ ಕಡಿಮೆ ಇವೆ. ಈ ಕೊರತೆಯನ್ನು ನೀಗಿಸುವುದಕ್ಕೆ ಡಾ| ರಾಮದಾಸ್ ಪೈ ಬ್ಲಾಕ್ ನಿರ್ಮಿಸಲಾಗಿದೆ. ಹೊಸ ಬ್ಲಾಕ್‌ನಲ್ಲಿ ಮುಂಚಿತವಾಗಿ ಆನ್‌ಲೈನ್ ಅಪಾಯಿಂಟ್ಮೆಂಟ್ ಗಳು ಮತ್ತು ಸಮಾಲೋಚನ ಸಮಯವನ್ನು ಕಾಯ್ದಿರಿಸುವ ಸೌಲಭ್ಯವಿರುವುದರಿಂದ ಹೊರರೋಗಿಗಳೂ ಕಾಯಬೇಕಾಗಿರುವುದಿಲ್ಲ. ವೈಯಕ್ತಿಕ ಸೇವೆಗೆ ವಿಶೇಷ ಗಮನ ಕೊಡಲಾಗುತ್ತದೆ.
-ಡಾ| ಅವಿನಾಶ್ ಶೆಟ್ಟಿ, ವೈದ್ಯಕೀಯ ಅಧೀಕ್ಷಕರು, ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ.