Advertisement

ಕೋವಿಡ್‌ 19 ಕೇಂದ್ರವಾಗಿ ಬದಲಾದ ಮಲ್ಲೇಶ್ವರದ ಮಣಿಪಾಲ ಆಸ್ಪತ್ರೆ

06:57 AM Jun 27, 2020 | Lakshmi GovindaRaj |

ಬೆಂಗಳೂರು: ಕೋವಿಡ್‌ 19 ವೈರಸ್‌ ವಿರುದ್ಧದ ಹೋರಾಟದಲ್ಲಿ ಕರ್ನಾಟಕ ಸರ್ಕಾರದೊಂದಿಗೆ ಕೈಜೋಡಿಸಿರುವ ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಸಮೂಹ(ಎಂಇಎಂಜಿ)ದ ಅಂಗವಾದ ಮಣಿಪಾಲ್‌ ಹೆಲ್ತ್‌ ಎಂಟರ್‌ಪ್ರೈಸಸ್‌, ಮಲ್ಲೇಶ್ವರದಲ್ಲಿರುವ ತನ್ನ 100 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯನ್ನು ಕೋವಿಡ್‌ 19 ಚಿಕಿತ್ಸಾ ಕೇಂದ್ರವಾಗಿ ಬದಲಾಯಿಸಿದೆ.

Advertisement

ಈ ಕೇಂದ್ರದಲ್ಲಿ 14 ಬೆಡ್‌ಗಳ ಐಸಿಯು ಮತ್ತು ಅತ್ಯಾಧುನಿಕ ವ್ಯವಸ್ಥೆಗಳಿದ್ದು, ಕೋವಿಡ್‌ 19 ಸೋಂಕಿತರಿಗೆ  ಸಮರ್ಪಕ ಚಿಕಿತ್ಸೆ ನೀಡಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನೂ ಹೊಂದಿದೆ. ಅಲ್ಲದೆ, ಇಲ್ಲಿ ಬ್ಯಾಕ್‌ಅಪ್‌ ಇಮೇಜಿಂಗ್‌ ಮತ್ತು ಪೂರ್ಣ ಪ್ರಮಾಣದ ಪ್ರಯೋಗಾಲಯವೂ ಇರುವ ಕಾರಣ, ರೋಗಿಗಳಿಗೆ ಅತ್ಯುತ್ತಮ  ಗುಣಮಟ್ಟದ ಚಿಕಿತ್ಸೆ ಸಿಗಲಿದೆ. ಈಗಾಗಲೇ ಬೆಂಗಳೂರಿನ ಓಲ್ಡ್‌ ಏರ್‌ಪೋರ್ಟ್‌ ರಸ್ತೆ ಮತ್ತು ಉಡುಪಿಯಲ್ಲಿರುವ ತಮ್ಮ ಆಸ್ಪತ್ರೆಗಳಲ್ಲಿ ಕೋವಿಡ್‌ 19 ಪರೀಕ್ಷೆ ನಡೆಸಲು ಮಣಿಪಾಲ ಸಮೂಹಕ್ಕೆ ಅನುಮತಿ ದೊರೆತಿದೆ.

ಒಗ್ಗಟ್ಟಿನ  ಹೋರಾಟ ಅಗತ್ಯ: ಈ ಕುರಿತು ಮಾತನಾಡಿರುವ ಎಂಇಎಂಜಿ ಮುಖ್ಯಸ್ಥರಾದ ಡಾ. ರಂಜನ್‌ ಪೈ, “ನಮ್ಮ ದೇಶ ಮಾತ್ರವಲ್ಲ, ಇಡೀ ಮನುಕುಲವೇ ಇಂಥದ್ದೊಂದು ಸಂಕಷ್ಟದ ಸ್ಥಿತಿಯನ್ನು ಹಿಂದೆಂದೂ ಕಂಡಿಲ್ಲ. ಒಂದು  ಜವಾಬ್ದಾರಿಯುತ ಸಂಸ್ಥೆಯಾಗಿ ಮಣಿಪಾಲ ಸಮೂಹವು ದೇಶಕ್ಕೆ ಸೇವೆ ಸಲ್ಲಿಸಲು ಬದ್ಧವಾಗಿದೆ. ಹೀಗಾಗಿ, ನಮ್ಮಿಂದ ಸಾಧ್ಯವಾದ ಎಲ್ಲ ರೀತಿಯಿಂದಲೂ ಸರ್ಕಾರಕ್ಕೆ ಬೆಂಬಲ ನೀಡುತ್ತೇವೆ.

ಸದೃಢ ಆರೋಗ್ಯಸೇವಾ ವ್ಯವಸ್ಥೆ  ರೂಪಿಸಬೇಕೆಂದರೆ ಮತ್ತು ಕೋವಿಡ್‌ 19 ವಿರುದ್ಧ ಹೋರಾಡಿ ಗೆಲ್ಲಬೇಕೆಂದರೆ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ’ ಎಂದು ಹೇಳಿದ್ದಾರೆ. ಜತೆಗೆ, “ಅಲ್ಪಪ್ರಮಾಣದ ರೋಗ ಲಕ್ಷಣವಿರುವ ಅಥವಾ ರೋಗಲಕ್ಷಣವೇ ಇಲ್ಲದ  ಸೋಂಕಿತರಿಗೆ ಚಿಕಿತ್ಸೆ ನೀಡುವಂಥ ಕೋವಿಡ್‌ ಕೇರ್‌ ಸೆಂಟರ್‌ ಸ್ಥಾಪಿಸುವ ನಿಟ್ಟಿನಲ್ಲಿ ನಾವು ಹಾಸ್ಪಿಟಾಲಿಟಿ ವಲಯದೊಂದಿಗೆ ಸಹಭಾಗಿತ್ವ ಸಾಧಿಸುವ ಕುರಿತೂ ಚಿಂತನೆ ನಡೆಸಿದ್ದೇವೆ.

ಇದು ಸಾಧ್ಯವಾದರೆ, ಆರೋಗ್ಯ ವ್ಯವಸ್ಥೆ ಮೇಲಿನ  ಹೊರೆಯೂ ಕಡಿಮೆಯಾಗುತ್ತದೆ. ನಾವು ಈಗಾಗಲೇ ನವದೆಹಲಿಯಲ್ಲಿರುವ ನಮ್ಮ ನೆಟ್‌ವರ್ಕ್‌ನ ಆಸ್ಪತ್ರೆ ಮೂಲಕ ದ್ವಾರಕಾದಲ್ಲಿರುವ ಐಟಿಸಿ ಗ್ರೂಪ್‌ನ ಹೋಟೆಲ್‌ ಜತೆ ಇಂಥದ್ದೊಂದು ಕಾರ್ಯ ಸಾಧಿಸುವಲ್ಲಿ ಯಶಸ್ವಿಯಾಗಿದ್ದೇವೆ’  ಎಂದೂ ಅವರು ತಿಳಿಸಿದ್ದಾರೆ. “ಮಲ್ಲೇಶ್ವರದಲ್ಲಿರುವ ಮಣಿಪಾಲ ಆರೋಗ್ಯ ಕೇಂದ್ರ ಕೋವಿಡ್‌ 19 ಸೋಂಕಿತರಿಗೆ ಉತ್ತಮ ಗುಣಮಟ್ಟದ ಸೇವೆ ಒದಗಿಸಲಿದೆ.

Advertisement

ನಮ್ಮ ತಜ್ಞರ ತಂಡ ರಾಜ್ಯ ಸರ್ಕಾರದ ವಿವಿಧ ಕಾರ್ಯಪಡೆಗಳು, ಉಪ ಸಮಿತಿಗಳು ಹಾಗೂ ಕಾರ್ಯಕಾರಿ ಸಮೂಹದೊಂ ದಿಗೆ ನಿರಂತರ ಸಂಪರ್ಕದಲ್ಲಿದ್ದು, ಸೋಂಕಿನ ನಿರ್ಮೂಲನೆ ನಿಟ್ಟಿನಲ್ಲಿ ಬೆಂಬಲ ನೀಡುತ್ತಿದೆ’ ಎಂದು ಮಣಿಪಾಲ್‌ ಹೆಲ್ತ್‌ ಎಂಟರ್‌ಪ್ರೈಸಸ್‌ ಎಂಡಿ ಮತ್ತು ಸಿಇಒ ದಿಲೀಪ್‌ ಜೋಸ್‌  ಹೇಳಿದ್ದಾರೆ. ಮಾರ್ಚ್‌ನಲ್ಲಿ ಕೋವಿಡ್‌ 19 ದೇಶದೊಳಕ್ಕೆ ಪ್ರವೇಶಿಸಿದಾಗಿನಿಂದಲೂ ಮಣಿಪಾಲ ಸಮೂಹ ರಾಜ್ಯ ಸರ್ಕಾರದೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿದೆ.

ಮಣಿಪಾಲ್‌ ಆಸ್ಪತ್ರೆಗಳ ಮುಖ್ಯಸ್ಥರಾದ ಡಾ. ಸುದರ್ಶನ್‌ ಬಲ್ಲಾಳ್‌  ಅವರು, ಕೋವಿಡ್‌ 19 ವಿರುದ್ಧದ ಹೋರಾಟಕ್ಕೆಂದು ಸರ್ಕಾರ ರಚಿಸಿರುವ ಕಾರ್ಯಪಡೆಯ ಪ್ರಮುಖ ಸದಸ್ಯರೂ ಆಗಿದ್ದಾರೆ. ಕಳೆದ 3 ತಿಂಗಳಿಂದ ವೈದ್ಯಕೀಯ ತಜ್ಞರ ತಂಡವು ರಾಜ್ಯದ 7 ಜಿಲ್ಲೆಗಳಲ್ಲಿ ಗಂಭೀರ ಸ್ಥಿತಿಯಲ್ಲಿರುವ ಕೋವಿಡ್‌ 19 ಸೋಂಕಿತರ ಮೇಲೆ ನಿಗಾ ಇಟ್ಟಿದೆ. ದಿನಕ್ಕೆ 2 ಬಾರಿ ಈ ರೋಗಿಗಳಿಗೆ ವಿಡಿಯೋ ಮೂಲಕ ಸೂಕ್ತ ಸಲಹೆಗಳನ್ನು ನೀಡುತ್ತಿದೆ.

ಏಪ್ರಿಲ್‌ನಲ್ಲಿ ಉಡುಪಿಯ 150 ಹಾಸಿಗೆಗಳ  ಸಾಮರ್ಥ್ಯದ ಡಾ.ಟಿಎಂಎ ಪೈ ಆಸ್ಪತ್ರೆಯನ್ನುಕೋವಿಡ್‌ 19  ಕೇಂದ್ರಿತ ಆಸ್ಪತ್ರೆಯನ್ನಾಗಿ ಮಾರ್ಪಾಡು ಮಾಡಲಾಗಿತ್ತು. ಆ ಮೂಲಕ ಕೋವಿಡ್‌ 19 ರೋಗಿಗಳಿಗೆ ಚಿಕಿತ್ಸೆ ನೀಡಲೆಂದೇ ನಿಯೋಜಿಸಲ್ಪಟ್ಟ ರಾಜ್ಯದ ಏಕೈಕ ಖಾಸಗಿ ಆಸ್ಪತ್ರೆ ಎಂಬ ಹಿರಿಮೆಗೂ ಅದು ಪಾತ್ರವಾಗಿತ್ತು. ಈವರೆಗೆ ಇಲ್ಲಿ  ಸುಮಾರು 150 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next