ಉಡುಪಿ: ಮಣಿಪಾಲ ಸಮೂಹದ ಆಸ್ಪತ್ರೆಗಳಿಗೆ ಸದ್ಯವೇ 12,000 ಕೊವಿಶೀಲ್ಡ್ ಲಸಿಕೆ ಬರಲಿದೆ. ಒಟ್ಟು 60,000 ಡೋಸ್ ಲಸಿಕೆಗಳನ್ನು ಖರೀದಿಸಲು ನಿರ್ಧರಿಸಲಾಗಿದೆ. ಆದ್ದರಿಂದ ಲಸಿಕೆ ಕೊರತೆ ಕುರಿತು ಎದ್ದ ಆತಂಕ ದೂರವಾಗಲಿದೆ.
ಮೇ ಕೊನೆಯ ವಾರ ಅಥವಾ ಜೂನ್ ಮೊದಲ ವಾರದಲ್ಲಿ ಮೊದಲ ಕಂತಿನಲ್ಲಿ 12,000 ಲಸಿಕೆ ಬರಲಿದೆ. ಈ ಕುರಿತು ಪುಣೆಯ ಸೀರಂ ಸಂಸ್ಥೆ ಜತೆ ಪತ್ರ ವ್ಯವಹಾರಗಳಾಗಿದ್ದು ಲಸಿಕೆ ಪೂರೈಕೆಗೆ ಒಪ್ಪಿದ್ದಾರೆ. ಜೂನ್ ಮೊದಲ ವಾರದಲ್ಲಿ ಲಸಿಕೆ ಹಾಕಲಾಗುತ್ತದೆ.
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ, ಮಂಗಳೂರಿನ ಕೆಎಂಸಿ ಆಸ್ಪತ್ರೆ, ಉಡುಪಿಯ ಡಾ| ಟಿಎಂಎ ಪೈ ಆಸ್ಪತ್ರೆ, ಕಾರ್ಕಳದ ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗಳಿಗೆ ಬರುವವರಿಗೆ ಲಸಿಕೆಗಳನ್ನು ನೀಡಲಾಗುವುದು. ಜನಸಂದಣಿಯನ್ನು ನಿಯಂತ್ರಿಸುವ ಉದ್ದೇಶದಿಂದ ಆನ್‌ಲೈನ್ ನೋಂದಣಿ ಮಾಡಿದವರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. 18+ ಎಲ್ಲರಿಗೂ ಅವಕಾಶವಿದೆ. ಸರಕಾರ ಈಗಾಗಲೇ ಬಿಡುಗಡೆ ಮಾಡಿದ ಆನ್‌ಲೈನ್ ನೋಂದಣಿ ನಮಗೂ ಅನ್ವಯವಾಗುತ್ತದೆ. ಪೂರೈಕೆ ಆದ ಬಳಿಕ ನೋಂದಣಿಗೆ ಅವಕಾಶ ಕಲ್ಪಿಸಲಾಗುವುದು. ಸರಕಾರದ ಮಾರ್ಗಸೂಚಿಯಂತೆ ದರವನ್ನು ನಿಗದಿಪಡಿಸಲಾಗುವುದು ಎಂದು ಮಣಿಪಾಲ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ ಶೆಟ್ಟಿ “ಉದಯವಾಣಿ’ಗೆ ತಿಳಿಸಿದ್ದಾರೆ.
2,000 ಕೊವ್ಯಾಕ್ಸಿನ್ 2ನೇ ಡೋಸ್ :
ಮಣಿಪಾಲ ಆಸ್ಪತ್ರೆಯಲ್ಲಿ ಈಗಾಗಲೇ ಕೊವ್ಯಾಕ್ಸಿನ್ ಮೊದಲ ಡೋಸ್ ಪಡೆದುಕೊಂಡ ಫ್ರಂಟ್‌ಲೆçನ್ ವರ್ಕರ್ ಮತ್ತು ಸಾರ್ವಜನಿಕರಿಗೆ ಎರಡನೆಯ ಡೋಸ್ ಅನ್ನು ವಿತರಿಸಲಾಗುವುದು. ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಬಂದ ಕೊವ್ಯಾಕ್ಸಿನ್ ಲಸಿಕೆಯಲ್ಲಿ ಮಣಿಪಾಲಕ್ಕೂ 2,000 ಡೋಸ್ ತರಿಸಲಾಗುವುದು. ಮಣಿಪಾಲದಲ್ಲಿ ಮೊದಲ ಡೋಸ್ ತೆಗೆದುಕೊಂಡವರಿಗೆ ನಾವೇ ಸಂದೇಶ ಕಳುಹಿಸುತ್ತೇವೆ. ಇದು ಒಂದೆರಡು ದಿನಗಳಲ್ಲಿ ಆರಂಭವಾಗಲಿದೆ ಎಂದು ಡಾ| ಶೆಟ್ಟಿ ತಿಳಿಸಿದ್ದಾರೆ.
ಕೊವ್ಯಾಕ್ಸಿನ್ ಉತ್ಪಾದನೆ ಮಾಡುವ ಹೈದರಾಬಾದ್‌ನ ಭಾರತ್ ಬಯೋಟೆಕ್ ಸಂಸ್ಥೆ ಜತೆ ಮಾತುಕತೆ ನಡೆಸಲಾಗಿದೆ. ಅಂತಿಮ ನಿರ್ಧಾರ ಇನ್ನಷ್ಟೇ ಆಗಬೇಕಾಗಿದೆ. ದರವನ್ನೂ ಸರಕಾರದ ಮಾರ್ಗದರ್ಶಿ ಸೂತ್ರದ ಅನ್ವಯ ನಿಗದಿಪಡಿಸಲಾಗುವುದು. ಪೂರೈಕೆ ನಿರಂತರವಾದಾಗ ಸಾರ್ವಜನಿಕರಿಗೂ ವಿತರಿಸಲಾಗುವುದು ಎಂದರು.
ಮಣಿಪಾಲ ಆಸ್ಪತ್ರೆಯ ಮರೀನಾದಲ್ಲಿ ಈಗಾಗಲೇ 10 ಕೌಂಟರ್‌ಗಳನ್ನು ತೆರೆಯಲಾಗಿದೆ. ಮೊದಲು ಲಸಿಕೆ ಪೂರೈಕೆಯಾದಾಗ ಇಲ್ಲಿ ವಿತರಿಸಲಾಗಿತ್ತು. ಲಸಿಕೆ ಪೂರೈಕೆ ನಿಲುಗಡೆಯಾದ ಬಳಿಕ ನಿಲ್ಲಿಸಲಾಗಿದೆ. ಲಸಿಕೆ ಬಂದ ಬಳಿಕ ಇದೇ ಕೌಂಟರ್‌ನಲ್ಲಿ ವಿತರಿಸಲಾಗುತ್ತದೆ.